Corruption| ಬಗೆದಷ್ಟೂ ಹೊರಬರ್ತಿದೆ ಬಿಡಿಎ ಹಗರಣ

By Kannadaprabha News  |  First Published Nov 24, 2021, 7:50 AM IST

*  ಮತ್ತೆ ಬಿಡಿಎ ವಿವಿಧ ಕಚೇರಿಗಳನ್ನು8 ಜಾಲಾಡಿದ ಎಸಿಬಿ
*  ಭೂ ಸ್ವಾಧೀನ ವೇಳೆ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಪರಿಹಾರ
*  ಸಿಎ ಸೈಟ್‌ ಅನ್ಯ ಉದ್ದೇಶಕ್ಕೆ ಬಳಕೆ ಆಗಿದ್ದರೂ ಅಧಿಕಾರಿಗಳು ಮೌನ
 


ಬೆಂಗಳೂರು(ನ.24):  ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)’ದಲ್ಲಿ ಭ್ರಷ್ಟಾಚಾರ ನಿಗ್ರಹ ದಳವು (ACB) ಬಗೆದಷ್ಟು ಭೂ ಹಗರಣಗಳು ಹೊರ ಬರುತ್ತಿದ್ದು, ಮಂಗಳವಾರ ಬಿಡಿಎ ಕೇಂದ್ರ ಕಚೇರಿ ಸೇರಿದಂತೆ ಉಪ ಕಚೇರಿಗಳ ಮೇಲೆ ಮತ್ತೆ ದಾಳಿ(Raid) ನಡೆಸಿ ಕೋಟ್ಯಂತರ ರುಪಾಯಿ ಮೌಲ್ಯದ ಭೂ ಅಕ್ರಮವನ್ನು ಎಸಿಬಿ ಬಯಲುಗೊಳಿಸಿದೆ.

ನಗರದ ಕುಮಾರಕೃಪಾ ಪಶ್ಚಿಮ ಭಾಗದಲ್ಲಿರುವ ಬಿಡಿಎ ಕೇಂದ್ರ ಕಚೇರಿ, ಆರ್‌.ಟಿ.ನಗರದಲ್ಲಿರುವ ಉತ್ತರ ವಿಭಾಗದ ಕಚೇರಿ, ವಿಜಯನಗರದಲ್ಲಿನ ಪಶ್ಚಿಮ ವಿಭಾಗದ ಕಚೇರಿ, ಎಚ್‌ಎಸ್‌ಆರ್‌ ಲೇಔಟ್‌ನ ಪೂರ್ವ ವಿಭಾಗದ ಕಚೇರಿ ಹಾಗೂ ಬನಶಂಕರಿಯಲ್ಲಿರುವ ದಕ್ಷಿಣ ವಿಭಾಗದ ಬಿಡಿಎ ಕಚೇರಿಗಳಲ್ಲಿ ಎಸಿಬಿ ಕಾರ್ಯಾಚರಣೆ ನಡೆಸಿದೆ. ಈ ದಾಳಿ ವೇಳೆ ಹಲವು ಭೂ ಅವ್ಯವಹಾರಗಳಿಗೆ ಸಂಬಂಧಿಸಿದ ಕಡತಗಳನ್ನು ಎಸಿಬಿ ಜಪ್ತಿ ಮಾಡಿದೆ.

Latest Videos

undefined

ಬೆಂಗಳೂರು: ಈ ಬಡಾವಣೆಯ 950 ಎಕರೆ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವು

ಸಿಎ, ಮೂಲೆ ನಿವೇಶನಗಳು ಗುಳುಂ

ನಗರದ(Bengaluru) ಹೊರ ವಲಯದಲ್ಲಿ ಹೊಸದಾಗಿ ಬಡಾವಣೆಗಳ ಅಭಿವೃದ್ಧಿಗೆ ಭೂ ಸ್ವಾಧೀನದಲ್ಲಿ(Land Acquisition) ಭಾರಿ ಪ್ರಮಾಣ ಅವ್ಯವಹಾರ ನಡೆದಿರುವುದು ಎಸಿಬಿ ದಾಳಿ ವೇಳೆ ಬೆಳಕಿಗೆ ಬಂದಿದೆ.
ಕೆಲವು ಕಡೆ ಭೂಸ್ವಾಧೀನ ನೆಪದಲ್ಲಿ ನಕಲಿ ದಾಖಲೆ(Fake Documents) ಸೃಷ್ಟಿಸಿ ಅನರ್ಹ ಫಲಾನುಭವಿಗಳಿಗೆ ಜಮೀನಿನ ಪರಿಹಾರವನ್ನು ಬಿಡಿಎ ಅಧಿಕಾರಿಗಳು ವಿತರಿಸಿದ್ದಾರೆ. ಅದೇ ರೀತಿ ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಭಾರತ್‌ ಎಚ್‌ಬಿಸಿಎಸ್‌ ಲೇಔಟ್‌ನಲ್ಲಿ ಸಂಘ ಸಂಸ್ಥೆಗಳಿಗೆ ಹಂಚಿಕೆಯಾದ ನಾಗರಿಕ ಸೌಲಭ್ಯ (ಸಿಎ) ನಿವೇಶನಗಳು ಉದ್ದೇಶಿತ ಸೌಲಭ್ಯಗಳಿಗೆ ಬಳಕೆಯಾಗದೆ ಷರತ್ತು ಉಲ್ಲಂಘನೆಯಾಗಿದೆ. ಆದರೆ ಈ ಬಗ್ಗೆ ಕಾನೂನು ಕ್ರಮ ಜರುಗಿಸದ ಬಿಡಿಎ ಮೌನ ಅನುಮಾನಗಳಿಗೆ ಕಾರಣವಾಗಿದೆ ಎಂದು ಎಸಿಬಿ ಹೇಳಿದೆ.

ಅಲ್ಲದೆ, ಎಚ್‌ಎಸ್‌ಆರ್‌ ಲೇಔಟ್‌ 3ನೇ ಹಂತ ಹಾಗೂ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಸಿಎ ನಿವೇಶನಗಳನ್ನು ನಾಗರಿಕ ಸೌಲಭ್ಯಗಳಿಗೆ ಬಿಡಿಎ ಅನುಮೋದಿತ ನಕ್ಷೆ ಅನುಸಾರ ಫಲಾನುಭವಿಗಳು ಕಟ್ಟಡವನ್ನು ನಿರ್ಮಾಣ ಮಾಡದೆ ನಿಯಮ ಉಲ್ಲಂಘಿಸಿದ್ದರೂ ಸಹ ಬಿಡಿಎ ಅಧಿಕಾರಿಗಳು ಕ್ರಮ ಜರುಗಿಸದೆ ನಿರ್ಲಕ್ಷ್ಯಿಸಿದ್ದಾರೆ. ಇನ್ನು ನಿವೇಶನ(Site) ಹಂಚಿಕೆದಾರರಿಗೆ ನಿಗದಿತ ಸ್ಥಳದಲ್ಲಿ ನಿವೇಶನ ನೀಡದೆ ಕಾನೂನುಬಾಹಿರವಾಗಿ ಬೇರೆ ಸ್ಥಳದಲ್ಲಿ ನಿವೇಶನ ಮಂಜೂರು ಮಾಡಿ ಬಿಡಿಎ ಅಧಿಕಾರಿಗಳು ಭಾನಗಡಿ ನಡೆಸಿದ್ದಾರೆ.

ಖಾಲಿ ನಿವೇಶನಗಳು ಗೋವಿಂದ ಗೋವಿಂದ

ನಗರದ ವ್ಯಾಪ್ತಿಯ ಕೆಲವು ಕಡೆ ಖಾಲಿ ನಿವೇಶನಗಳನ್ನು ಅಕ್ರಮವಾಗಿ ಪರಭಾರೆ ಮಾಡಿ ಸರ್ಕಾರಕ್ಕೆ ಬಿಡಿಎ ಅಧಿಕಾರಿಗಳು ಉಂಡೆ ನಾಮ ಹಾಕಿರುವುದು ಎಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಳೇ ಬಡಾವಣೆಗಳಲ್ಲಿ ದೊಡ್ಡ ನಿವೇಶಗಳನ್ನು ಯಾರಿಗೂ ಹಂಚಿಕೆ ಮಾಡದೆ ತಾತ್ಕಾಲಿಕವಾಗಿ ಖಾಸಗಿ ವ್ಯಕ್ತಿಗಳಿಗೆ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಬಿಡಿಎ ಅಧಿಕಾರಿಗಳು ಸರ್ಕಾರಕ್ಕೆ ನಷ್ಟಮಾಡಿದ್ದಾರೆ. ಭೂ ಸ್ವಾಧೀನಪಡಿಸಿಕೊಂಡು ಜಮೀನು ಮಾಲೀಕರಿಗೆ ಪರಿಹಾರವನ್ನು ನೀಡಿದ ಬಳಿಕ ಆ ಭೂ ಮಾಲೀಕರಿಗೆ ಹಂಚಿಕೆಯಾಗಿದ್ದ ನಿವೇಶನಗಳನ್ನು ಬಿಡಿಎಗೆ ಮರಳಿ ಪಡಬೇಕಿತ್ತು. ಆದರೆ ಆ ನಿವೇಶನಗಳನ್ನು ಮೂರನೇ ವ್ಯಕ್ತಿಗಳಿಗೆ ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಮೂಲೆ ನಿವೇಶನ (ಕಾರ್ನರ್‌ ಸೈಟ್‌)ಗಳನ್ನು ಹರಾಜು ಪ್ರಕ್ರಿಯೆ ಮುಖಾಂತರ ಮಾರಾಟ ಮಾಡಬೇಕಾಗಿರುತ್ತದೆ. ಆದರೆ ಹರಾಜು ಪ್ರಕ್ರಿಯೆ ಮಾಡದೆ ಮೂಲೆ ನಿವೇಶನಗಳನ್ನು ಹಂಚಿಕೆ ಮಾಡಿ ಸರ್ಕಾರಕ್ಕೆ(Government) ಕೋಟ್ಯಂತರ ಹಣವನ್ನು ಬಿಡಿಎ ಕೆಲ ಅಧಿಕಾರಿಗಳು ನಷ್ಟಮಾಡಿದ್ದಾರೆ ಎಂದು ಎಸಿಬಿ ತಿಳಿಸಿದೆ.

ಕೆಂಪೇಗೌಡ ಲೇಔಟ್‌ ಹಣವೂ ಸ್ವಾಹ

ಬಿಡಿಎ ವಿಭಾಗವಾರು ಕಚೇರಿಗಳಲ್ಲಿ ಕಡತಗಳ ಸಂಖ್ಯೆಯ ಆಧಾರದ ಮೇಲೆ ಖಚಿತ ಅಳತೆ ದಾಖಲೆಯನ್ನು ನಿರ್ವಹಣೆ ಮಾಡಬೇಕಾಗಿರುತ್ತದೆ. ಆದರೆ ವಿಭಾಗ ಕಚೇರಿಗಳಲ್ಲಿ ಖಚಿತ ಅಳತೆಯ ದಾಖಲೆಯನ್ನು ನಿರ್ವಹಣೆ ಮಾಡದೆ ಕರ್ತವ್ಯ ಲೋಪವೆಸಗಿದ್ದಾರೆ. ಅಲ್ಲದೆ ನಾಡಪ್ರಭು ಕೆಂಪೇಗೌಡ ಬಡಾವಣೆ ಸಲುವಾಗಿ ಭೂಮಿ ಕಳೆದುಕೊಂಡ ನಿಜವಾದ ಭೂ ಮಾಲೀಕರಿಗೆ ಪರಿಹಾರ ನೀಡದೆ ಮೂರನೇ ವ್ಯಕ್ತಿಗಳಿಗೆ ಬಿಡಿಎ ಪರಿಹಾರ ವಿತರಿಸಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

‘ಬೇರು’ ಬಿಟ್ಟ ಬಿಡಿಎ ನೌಕರರ ವರ್ಗಕ್ಕೆ ಕಾಯ್ದೆಗೆ ತಿದ್ದುಪಡಿ

ಸಾರ್ವಜನಿಕರು ದೂರು ದಾಖಲಿಸಿ: ಎಸಿಬಿ ಮನವಿ

ಒಂದೆಡೆ ಬಿಡಿಎ ಕಚೇರಿಗಳ ವಿರುದ್ಧ ಕಾರ್ಯಾಚರಣೆ ಬಿರುಸುಗೊಳಿಸಿದ ಎಸಿಬಿ, ಮತ್ತೊಂದೆಡೆ ಸಾರ್ವಜನಿಕರಿಂದ ಸಹ ಬಿಡಿಎ ಅವ್ಯವಹಾರ ಕುರಿತು ಮಾಹಿತಿ ಸಂಗ್ರಹ ಪ್ರಕ್ರಿಯೆ ಚುರುಕುಗೊಳಿಸಿದೆ. ಬಿಡಿಎ ಕಚೇರಿಗಳಲ್ಲಿ ಅವ್ಯವಹಾರ ಕುರಿತು ಲಿಖಿತ ದೂರನ್ನು ದಾಖಲಿಸುವಂತೆ ಸಾರ್ವಜನಿಕರಿಗೆ ಎಸಿಬಿ ಮನವಿ ಮಾಡಿದೆ. ಇದುವರೆಗೆ 50ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1 ಲಕ್ಷ ನಿವೇಶನ, 80 ಲೇಔಟ್‌

ಇದುವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ 1 ಲಕ್ಷಕ್ಕೂ ಅಧಿಕ ನಿವೇಶನಗಳನ್ನು ಬಿಡಿಎ ವಿತರಿಸಿದೆ. ಇದರಲ್ಲಿ ಅದೆಷ್ಟುನಿವೇಶನಗಳಲ್ಲಿ ಅಕ್ರಮ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ದಾಳಿ ವೇಳೆ ಜಪ್ತಿಯಾದ ಕಡತಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸಿಬಿ ತಿಳಿಸಿದೆ.
 

click me!