* ಐಎಎಸ್, ಕೆಎಎಸ್ ಅಧಿಕಾರಿಗಳ ವಿಚಾರಣೆಗಾಗಿ ಸರ್ಕಾರಕ್ಕೆ ಪತ್ರ
* ಸರ್ಕಾರ ಅನುಮತಿ ಸಿಕ್ಕರೆ 25ಕ್ಕೂ ಹೆಚ್ಚು ಅಧಿಕಾರಿಗಳಿಗೆ 200 ಕೋಟಿಗೂ ಅಧಿಕ ಮೊತ್ತದ ಭೂ ಉರುಳು
* ವಿಚಾರಣೆಗೆ ಅನುಮತಿ ಯಾಕೆ?
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಡಿ.26): ಇತ್ತೀಚಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ದ ಬಹುಕೋಟಿ ಭೂ ಹಗರಣ ಸಂಬಂಧ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಸೇರಿ ಸುಮಾರು 25ಕ್ಕೂ ಹೆಚ್ಚಿನ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ACB)ದ ತನಿಖೆ ‘ಕಂಟಕ’ ಎದುರಾಗಿದ್ದು, ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ(Government of Karnataka) ಎಸಿಬಿ ಪತ್ರ ಬರೆದಿದೆ.
ಈ ಪತ್ರದ ಬೆನ್ನಲ್ಲೇ ಬಿಡಿಎ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿರುವುದಾಗಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು, ಈಗ ಭೂ ಹಗರಣದ(Land Scam) ಸುಳಿಯಲ್ಲಿ ಸಿಲುಕಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಅನುಮತಿ ನೀಡುತ್ತಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸರ್ಕಾರದ ನಿರ್ಧಾರದ ಬಳಿಕ ಮುಂದಿನ ಹೆಜ್ಜೆಯಿಡಲು ಎಸಿಬಿ ತೀರ್ಮಾನಿಸಿದೆ. ವಿಧಾನಸಭಾ ಅಧಿವೇಶನಕ್ಕೂ ಮುನ್ನವೇ ಅಕ್ರಮ ಭೂ ವ್ಯವಹಾರ ಸಂಬಂಧ ಸರ್ಕಾರಕ್ಕೆ ಎಸಿಬಿ ಸಮಗ್ರ ವರದಿ ಕೂಡಾ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.
Corruption in BDA : ಭ್ರಷ್ಟರಿಗೆ ಶುರುವಾಗಿದೆ ನಡುವ : 10 ವರ್ಷಗಳ ಕೇಸ್ ತನಿಖೆ
ಅಕ್ರಮ ಭೂ ವ್ಯವಹಾರ ದೂರು ಹಿನ್ನೆಲೆಯಲ್ಲಿ ನ.20 ಹಾಗೂ 23ರಂದು ಬಿಡಿಎ ಕೇಂದ್ರ ಕಚೇರಿ ಮತ್ತು ಶಾಖಾ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಭೂ ಪರಿಹಾರ ವಿತರಣೆ, ಬಡಾವಣೆಗಳ ಅಭಿವೃದ್ಧಿ, ಭೂ ಸ್ವಾಧೀನ, ನಿವೇಶನ ಮಂಜೂರಾತಿ ಸೇರಿದಂತೆ ನಾನಾ ವಿಧದ ಅಕ್ರಮ ಪತ್ತೆ ಹಚ್ಚಿದ ಎಸಿಬಿ, ಸರಿ ಸುಮಾರು .200 ಕೋಟಿಗೂ ಅಧಿಕ ಮೊತ್ತದ ಹಗರಣ ನಡೆದಿದೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ಹೇಳಿತ್ತು. ಇನ್ನು ದಾಳಿ ವೇಳೆ ಬಿಡಿಎ ಕಚೇರಿಯಲ್ಲಿ ಜಪ್ತಿಯಾದ ಕಡತಗಳ ರಾಶಿಯನ್ನು ಎಸಿಬಿ ಶೋಧಿಸಿದಂತೆ 25ಕ್ಕೂ ಅಧಿಕಾರಿಗಳಿಗೆ ಭೂ ಉರುಳು ಸುತ್ತಿಕೊಂಡಿದೆ ಎಂದು ‘ಕನ್ನಡಪ್ರಭ’ ಎಸಿಬಿ ಮೂಲಗಳು ಹೇಳಿವೆ.
ಡಿಎಸ್ 1, 2, 3ಗಳಿಗೆ ನಡುಕ:
ಎರಡು ಬಾರಿ ನಡೆದ ಬೃಹತ್ ದಾಳಿಯಲ್ಲಿ(Raid) ಜಪ್ತಿಯಾದ ದಾಖಲೆಗಳನ್ನು ಒಂದೊಂದಾಗಿ ಶೋಧಿಸಿ ಅಧಿಕಾರಿಗಳು, ಆಯಾ ವರ್ಷಕ್ಕೆ ಪ್ರತ್ಯೇಕವಾದ ಪ್ರಕರಣವನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ 2015ರಿಂದ 2021ರ ನವೆಂಬರ್ ವರೆಗೆ ಬಿಡಿಎ ನಡೆಸಿರುವ ಭೂ ವ್ಯವಹಾರದ ಬಗ್ಗೆ ಕಡತಗಳ ತಪಾಸಣೆ ನಡೆದಿದೆ. ಇದರಲ್ಲಿ ಈ ಆರು ವರ್ಷದ ಅವಧಿಯಲ್ಲಿ ಬಿಡಿಎ ಉಪ ಕಾರ್ಯದರ್ಶಿ 1, 2, 3 ಹುದ್ದೆಗಳು, ಭೂ ಸ್ವಾಧೀನಾಧಿಕಾರಿ ಹಾಗೂ ಎಂಜಿನಿಯರ್‌ಗಳಿಗೆ ಎಸಿಬಿ ತನಿಖೆ(Investigation) ಬಿಸಿ ತಟ್ಟಿದೆ ಎನ್ನಲಾಗಿದೆ.
Bengaluru| ಬಿಡಿಎಯಲ್ಲಿ ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ..!
ಈ ಸಂಬಂಧ ರಾಜ್ಯ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಎಸಿಬಿ ಪತ್ರ ಬರೆದಿದೆ. ಇದರ ಜತೆಗೆ ಪತ್ರದಲ್ಲಿ ಉಲ್ಲೇಖಿತ ಅಧಿಕಾರಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಭೂ ಅವ್ಯವಹಾರದ ವರದಿಯನ್ನು ಕೂಡಾ ಸಲ್ಲಿಸಿದೆ. ಈ ವರದಿ ಮುಂದಿಟ್ಟು ಅಧಿಕಾರಿಗಳ ವಿಚಾರಣೆಗೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಕಾರ್ಯದರ್ಶಿ ರವಿಕುಮಾರ್ ಜತೆ ಸಮಾಲೋಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ವಿಚಾರಣೆಗೆ ಅನುಮತಿ ಯಾಕೆ?
ಭೂ ಅವ್ಯವಹಾರದ ಶಂಕೆ ಮೇರೆಗೆ ನ್ಯಾಯಾಲಯದ(Court) ಅನುಮತಿ ಪಡೆದು ಬಿಡಿಎ ಕಚೇರಿಗಳ ಮೇಲೆ ತಪಾಸಣೆ ನಡೆಸಲಾಗಿತ್ತು. ಈಗ ತನಿಖೆಯಲ್ಲಿ ಅಕ್ರಮದಲ್ಲಿ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆ. ಹೀಗಾಗಿ ಐಎಎಸ್ ಮತ್ತು ಕೆಎಎಸ್ ದರ್ಜೆ ಅಧಿಕಾರಿಗಳಾಗಿರುವ ಕಾರಣಕ್ಕೆ ಅವರನ್ನು ವಿಚಾರಣೆಗೊಳಪಡಿಸಲು ಸಂಬಂಧಿಸಿದ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪೂರ್ವಾನುಮತಿ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಪಟ್ಟಿಯನ್ನು ನಗಾರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರದ ನಡೆ ಮೇಲೆ ಎಸಿಬಿ ತನಿಖೆ ನಿರ್ಧಾರವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.