ಮಾಜಿ ಕಾರ್ಪೊರೇಟರ್ ಶಿಷ್ಯನಿಂದ ಹೇಳಿಕೆ| ಮನೆಗೆ ನುಗ್ಗಿ ಧ್ವಂಸ ಮಾಡಿದೆ| ಶಾಸಕರ ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ: ಸಜ್ಜಾದ್ ಖಾನ್|
ಬೆಂಗಳೂರು(ಅ.17): ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ನೂರಾರು ಜನರನ್ನು ಒಗ್ಗೂಡಿಸುವಲ್ಲಿ ಪುಲಿಕೇಶಿ ನಗರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ಜಾಕೀಬ್ ಜಾಕೀರ್ ಪ್ರಮುಖ ಪಾತ್ರವಹಿಸಿದ್ದ ಎಂದು ಸಿಸಿಬಿ ಆರೋಪ ಪಟ್ಟಿಯಲ್ಲಿ ದಾಖಲಿಸಿರುವ ಜಾಕೀರ್ ಶಿಷ್ಯ ಸಜ್ಜಾದ್ ಖಾನ್ ಹೇಳಿಕೆಯಲ್ಲಿ ಉಲ್ಲೇಖವಾಗಿದೆ.
ಕಾವಲ್‌ಬೈರಸಂದ್ರ ಸಮೀಪದ ಎಂ.ಎಂ.ಲೇಔಟ್‌ನಲ್ಲಿನ ಪೀಠೋಪಕರಣ ಮಳಿಗೆ ಮಾಲಿಕ ಸಜ್ಜಾದ್ ಖಾನ್ ಅಲಿಯಾಸ್ ಸಜ್ಜಾದ್, ಆ.11ರಂದು ರಾತ್ರಿ ಜಾಕೀರ್ ಸೂಚನೆ ಮೇರೆಗೆ ಹುಡುಗರನ್ನು ಕರೆದುಕೊಂಡು ಹೋಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮತ್ತು ಕಚೇರಿಗೆ ಬೆಂಕಿ ಹಾಕಿ ಸುಟ್ಟಿದ್ದ ಎಂದು ಆರೋಪಿಸಲಾಗಿದೆ.
ಡಿ.ಜೆ.ಹಳ್ಳಿ ಗಲಭೆ ಬಗ್ಗೆ ಮಾಹಿತಿಗಾಗಿ ಕರೆದಿದ್ದರು, ವಿಚಾರಣೆಗಲ್ಲ: ರಿಜ್ವಾನ್
ಅಂದು ರಾತ್ರಿ ನಾನು ಮಳಿಗೆಯಲ್ಲಿದ್ದೆ. ಆಗ ಗುಂಪು ಗುಂಪಾಗಿ ಜನರು ಧಾವಂತದಿಂದ ಹೋಗುತ್ತಿದ್ದರು. ಆ ತಂಡದ ಯುವಕನೊಬ್ಬನನ್ನು ತಡೆದು ವಿಚಾರಿಸಿದಾಗ ನಮ್ಮ ಧರ್ಮ ಗುರು ಬಗ್ಗೆ ಶಾಸಕರ ಸಂಬಂಧಿ ನವೀನ್ ಅವಹೇಳನ ಮಾಡಿದ್ದಾನೆ ಎಂದು ಗೊತ್ತಾಯಿತು. ಆ ವೇಳೆಗೆ ತನ್ನ ಸಹಚರ ವಾಜೀದ್ ಪಾಷಾನಿಗೆ ಗಲಾಟೆಗೆ ಕಾರ್ಪೋರೇಟರ್ ಅಬ್ದುಲ್ ಜಾಕೀಬ್ ಜಾಕೀರ್ ಸೂಚಿಸಿದ್ದ. ಆಗ ನನಗೆ ಕರೆ ಮಾಡಿದ್ದ ವಾಜೀದ್, ‘ಜಾಕೀರ್ ಬಾಯ್ ಹೇಳಿದ್ದಾರೆ. ಅಂಗಡಿ ಬಾಗಿಲು ಹಾಕಿ ಹುಡುಗರನ್ನು ಕರೆದುಕೊಂಡು ಎಂಎಲ್‌ಎ ಮನೆ ಬಳಿ ಗಲಾಟೆ ಮಾಡಿಸು. ತಾನು ಡಿಜೆ ಹಳ್ಳಿ ಪೊಲೀಸ್ ಠಾಣೆ ಬಳಿ ಇರುವುದಾಗಿ ತಿಳಿಸಿದ’ ಎಂದು ಸಜ್ಜಾದ್ ಖಾನ್ ಹೇಳಿಕೆ ನೀಡಿದ್ದಾನೆ.
ಅಂತೆಯೇ ನಾನು ಅಂಗಡಿ ಬಾಗಿಲು ಹಾಕಿ ಗಲಾಟೆಗೆ ತೆರಳಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಧಿಕ್ಕಾರ ಕೂಗಿದೆ. ಶಾಸಕರ ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ. ಅದೇ ಸಮಯಕ್ಕೆ ಮಹಮ್ಮದ್ ಯೂಸಫ್, ಮಹಮ್ಮದ್ ನಫೀಸ್, ಆಸೀಂ ಪಾಷಾ, ಮಹಮ್ಮದ್ ಕಲೀಲ್ ಗ್ಯಾಂಗ್ ಪೆಟ್ರೋಲ್, ಡಿಸೇಲ್ ಸುರಿದು ಬೆಂಕಿ ಹಚ್ಚಿತು ಎಂದು ಸಜ್ಜಾದ್ ಖಾನ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಉಲ್ಲೇಖವಾಗಿದೆ.