ಕೋವಿಡ್ ವಾರಿಯರ್‌ಗಳಿಗೆ ಸನ್ಮಾನಿಸಿ ಗೌರವಿಸಿದ 'ನಮ್ಮ ಬೆಂಗಳೂರು ಪ್ರತಿಷ್ಠಾನ'

By Govindaraj SFirst Published Jul 30, 2022, 1:26 AM IST
Highlights

ಸಿಲಿಕಾನ್ ಸಿಟಿ ಬೆಂಗಳೂರಿನ ಏಳಿಗೆಗಾಗಿ ಶ್ರಮಿಸಿದ ಹಾಗೂ ಬೆಂಗಳೂರಿಗೆ ಕೊಡುಗೆ ನೀಡಿದ ವ್ಯಕ್ತಿಗಳನ್ನ ಹುಡುಕಿ ಅಂತವರನ್ನ ಸನ್ಮಾನಿಸಿ ಗೌರವಿಸುವಂಥಹ ಕಾರ್ಯವನ್ನ ನಮ್ಮ ಬೆಂಗಳೂರು ಪ್ರತಿಷ್ಠಾನ ಕಳೆದ 11 ವರ್ಷಗಳಿಂದ ನಡೆಸಿಕೊಂಡು ಬಂದಿದೆ.

ವರದಿ: ವಿಕ್ರಮ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಜು.30): ಸಿಲಿಕಾನ್ ಸಿಟಿ ಬೆಂಗಳೂರಿನ ಏಳಿಗೆಗಾಗಿ ಶ್ರಮಿಸಿದ ಹಾಗೂ ಬೆಂಗಳೂರಿಗೆ ಕೊಡುಗೆ ನೀಡಿದ ವ್ಯಕ್ತಿಗಳನ್ನ ಹುಡುಕಿ ಅಂತವರನ್ನ ಸನ್ಮಾನಿಸಿ ಗೌರವಿಸುವಂಥಹ ಕಾರ್ಯವನ್ನ ನಮ್ಮ ಬೆಂಗಳೂರು ಪ್ರತಿಷ್ಠಾನ ಕಳೆದ 11 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಅದರಂತೆಯೇ ಈ ಬಾರಿ ಕೋವಿಡ್ ಸಂಕಷ್ಟ ಕಾಲದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ 8 ಕೋವಿಡ್ ವಾರಿಯರ್ ಹಾಗೂ 1 ಸಂಸ್ಥೆಗೆ ನಮ್ಮ ಬೆಂಗಳೂರು ವತಿಯಿಂದ ಸನ್ಮಾನಿಸಲಾಯಿತು.

ನಮ್ಮ ಬೆಂಗಳೂರು ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಕೋರಮಂಗಲ ಕ್ಲಬ್‌ನಲ್ಲಿ ಆಯೋಜಿಸಿದ್ದ ನಮ್ಮ ಬೆಂಗಳೂರು ಪ್ರಶಸ್ತಿ ಪ್ರದಾನ ಹಾಗೂ ‘ನಮ್ಮ ಆರೋಗ್ಯ ಯೋಧರು’ ಕಾರ್ಯಕ್ರಮದಲ್ಲಿ, ಸಿಎಂ ಬಸವರಾಜ ಬೊಮ್ಮಾಯಿ 8 ಮಂದಿ ಕೋವಿಡ್ ವಾರಿಯರ್ ಹಾಗೂ ಒಂದು ಸಾಮಾಜಿಕ ಕಳಕಳಿಯುಳ್ಳ ಸಂಸ್ಥೆಗೆ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು. 

ಇನ್ನು ಇದೇ ವೇಳೆ ಮಾತಾನಾಡಿದ ಸಿಎಂ ಬೊಮ್ಮಾಯಿ, ಹಿಂದಿನದು ಮರೆಯುತ್ತಾ ಹೋದರೆ, ಮುಂದೆ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದಿಲ್ಲ. ಯಾವುದಾದರೂ ಒಂದು ಘಟನೆ ನಡೆಯುತ್ತಿರುವಾಗ ನಾವೆಲ್ಲರು ಕೂಡ ಅದರಲ್ಲಿ  ಭಾಗಿಯಾಗಿರುತ್ತೇವೆ. ಆದರೆ ಅದು ಮುಗಿದ ಬಳಿಕ ನಾವು ಮರೆತು ಹೋಗುತ್ತೇವೆ. ಆದರೆ ನಮ್ಮ ಬೆಂಗಳೂರು ಪ್ರತಿಷ್ಠಾನ ಇಂದು ವಿಶೇಷವಾಗಿ ಕರೊನಾ ಯೋಧರನ್ನು ಗುರುತಿಸುವಂತಹ ಉತ್ತಮ ಕೆಲಸ ಮಾಡಿದೆ. ಕೋವಿಡ್ ಸಂಕಷ್ಟದಲ್ಲಿ ಶ್ರಮಿಸಿದವರಿಗೆ ಇವತ್ತು ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೊರೋನಾ ಯೋಧರನ್ನು ಇವತ್ತು ನೆನಪಿಸಿಕೊಳ್ಳುವ ಹಾಗೆ ಮಾಡಿದ ನಮ್ಮ ಬೆಂಗಳೂರು ಪ್ರತಿಷ್ಠಾನಕ್ಕೆ ಅಭಿನಂದನೆಗಳು ಎಂದರು. 

ಸಿದ್ದರಾಮೋತ್ಸವ ಬ್ಯಾನರ್‌ನಲ್ಲಿ ಬಿಜೆಪಿ ಶಾಸಕ ರಾಜೂಗೌಡ ಭಾವಚಿತ್ರ: ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್

ಮನುಷ್ಯನಗಿಂತ ದೊಡ್ಡದಾದ ಪ್ರಾಣಿಗಳು ಇದ್ದವು. ಆದರೆ ಕಾಲಕ್ರಮೇಣ ನಶಿಸಿ ಹೋದವು. ಮನುಷ್ಯ ಎಂತಹ ಸಂದರ್ಭದಲ್ಲಿಯೂ ಸಹ ಬದುಕುತ್ತಾನೆ. ಸಹರಾ ಮರುಭೂಮಿಯಲ್ಲಿಯೂ ಬದಕುತ್ತಾನೆ. ಮೈ ಕೊರೆಯುವಂತಹ ಶೀತ ಪ್ರದೇಶದಲ್ಲಿಯೂ ಮನುಷ್ಯ ಬದುಕುತ್ತಾನೆ. ನಾಡಿನಲ್ಲಿ ಅಥವಾ ಕಾಡಿನಲ್ಲಿಯೂ ಬದುಕುತ್ತಾನೆ. ಏಕೆಂದರೆ ಮನುಷ್ಯನ ದೊಡ್ಡ ಶಕ್ತಿ ಅಂದರೆ ಅವನು ಎಲ್ಲಾ ಸಂದರ್ಭದಲ್ಲಿಯು ಪರಿಸ್ಥಿತಿಗೆ ಹೊಂದಿಕೊಂಡು ಬದಕುತ್ತಾನೆ ಎಂದು ಹೇಳಿದರು.

ಈ ಬಾರಿ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿಗೆ ಭಾಜನರಾದವರ ವಿವರ ಇಲ್ಲಿದೆ.
ಡಾ.ರವೀಂದ್ರ ಮೆಹ್ತಾ ‘ವರ್ಷದ ಬೆಂಗಳೂರಿಗ’:
ನಮ್ಮ ಬೆಂಗಳೂರು ಪ್ರತಿಷ್ಠಾನದ 12ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅಪೋಲೋ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ರವೀಂದ್ರ ಮೆಹ್ತಾ ಅವರಿಗೆ ವರ್ಷದ ಬೆಂಗಳೂರಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು.

ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿಬಿಎಂಪಿ ಕೋವಿಡ್ ವಾರ್ ರೂಂ ನೋಡಲ್ ಅಧಿಕಾರಿ ಡಾ.ಭಾಸ್ಕರ್ ರಾಜಕುಮಾರ್, ಮಣಿಪಾಲ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಸುನಿಲ್ ಕಾರಂತ್, ಕರೊನಾ ಸಮಯದಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ನೀಡಿ ಕೊನೆಗೆ ಕರೊನಾಗೆ ಬಲಿಯಾದ ವೈದ್ಯ ಡಾ.ಅಮರನಾಥ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಯಿತು. 

ಕೊರೋನಾ ಸಮಯಲ್ಲಿ ದಾನಿಗಳ ಸಹಾಯದಿಂದ 5 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಿದ್ದ ಅರ್ಜುನ್ ಅವರಿಗೆ ಸಮಾಜ ಸೇವೆ ವೈಯಕ್ತಿಕ ವಿಭಾಗದ ಪ್ರಶಸ್ತಿ, ಸಮಾಜ ಸೇವೆ ಸಂಘ-ಸಂಸ್ಥೆ ವಿಭಾಗದಲ್ಲಿ ‘ಮೆರ್ಸಿ ಎಂಜೆಲ್ಸ್, ಕೋವಿಡ್ ಮುಂಚೂಣಿ ಕಾರ್ಯಕರ್ತರ ವಿಭಾಗದಲ್ಲಿ ಶವಾಗಾರದಲ್ಲಿ ಕಾರ್ಯ ನಿರ್ವಹಿಸಿದ್ದ ಶೌರಿ ರಾಜು ಹಾಗೂ ಅಂಥೋನಿ ಕುಟ್ಟಿ, ಕೋವಿಡ್ ಸಮಯದಲ್ಲಿ ವಲಸೆ ಕೂಲಿ ಕಾರ್ಮಿಕರಿಗೆ ಪಡಿತರ, ಔಷಧಿ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾರ್ಥಿ ಕೆ.ವೇಣುಗೋಪಾಲ್, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಎಸ್.ಅರ್ಜುನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೈದ್ಯಕೀಯ ಸಚಿವ ಕೆ.ಸುಧಾಕರ್ ಮಾತನಾಡಿ, ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ. ಹೀಗಾಗಿಯೇ ವೈದ್ಯರನ್ನು ದೇವರು ಸೃಷ್ಟಿಸಿದ್ದಾನೆ. ಕೊರೋನಾ ಎರಡು ಅಲೆಗಳಲ್ಲಿ ನಮ್ಮ ವೈದ್ಯರು, ಸಮಾಜದ ಅನೇಕ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಶ್ರಮಿಸಿದ್ದಾರೆ. ಕೆಲವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಮತ್ತೆ ಕೆಲವರು ಪ್ರಾಣ ತೆತ್ತಿದ್ದಾರೆ. ಆ ಎಲ್ಲ ಕುಟುಂಬಗಳಿಗೆ ದೇವರು ಶಕ್ತಿಯನ್ನು ನೀಡಲಿ. ಗಡಿಯಲ್ಲಿ ಹೋರಾಟ ನಡೆಸಿ ನಮ್ಮ ಜೀವವನ್ನು ಉಳಿಸುವವರು ಯೋಧರಾದರೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದವರು ಕರೊನಾ ಯೋಧರು ಎಂದರು.

ಕೋಲಾರದಲ್ಲಿ ಕೈ-ಕೈ ಮಿಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು: ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ

ಕಾರ್ಯಕ್ರಮದಲ್ಲಿ ಮೈಕ್ರೋಲ್ಯಾಂಡ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕರ್, ಎಚ್ಸಿಜಿ ಕ್ಯಾನ್ಸರ್ ಕೇಂದ್ರದ ಡಾ.ವಿಶಾಲ್ ರಾವ್, ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್, ಎವಿಎಎಸ್‌ನ ಸಂಸ್ಥಾಪಕಿ ಅನಿತಾ ರೆಡ್ಡಿ, ಫೋರ್ಟಿಸ್ ಆಸ್ಪತ್ರೆಯ ಡಾ.ವಿವೇಕ್ ಪಡೆಗಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!