Bengaluru: ಕೊನೆಗೂ ಶಾಸ್ತ್ರಿ ನಗರಕ್ಕೆ ಬಂತು ಚತುಷ್ಪಥ ರಸ್ತೆ

By Govindaraj SFirst Published Sep 30, 2022, 6:58 AM IST
Highlights

ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಜನಾಪುರದ ಬಿಡಿಎ ಬಡಾವಣೆಯ ಲಾಲ್‌ಬಹದ್ದೂರ್‌ ಶಾಸ್ತ್ರಿ ನಗರದಲ್ಲಿ ಹಾದು ಹೋಗಿರುವ 80 ಅಡಿಯ ಚತುಷ್ಪಥ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 

ಸಂಪತ್‌ ತರೀಕೆರೆ

ಬೆಂಗಳೂರು (ಸೆ.30): ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಜನಾಪುರದ ಬಿಡಿಎ ಬಡಾವಣೆಯ ಲಾಲ್‌ಬಹದ್ದೂರ್‌ ಶಾಸ್ತ್ರಿ ನಗರದಲ್ಲಿ ಹಾದು ಹೋಗಿರುವ 80 ಅಡಿಯ ಚತುಷ್ಪಥ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸುಮಾರು 25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚತುಷ್ಪಥ ರಸ್ತೆಯು ಕನಕಪುರ ರಸ್ತೆಯಿಂದ ಅಂಜನಾಪುರದ ಬಿಡಿಎ ಬಡಾವಣೆ ಮೂಲಕ ಬನ್ನೇರುಘಟ್ಟದ ಗೊಟ್ಟಿಗೆರೆವರೆಗೂ ಸುಮಾರು 6.7 ಕಿ.ಮೀ. ಸಾಗಿದೆ. ಕನಕಪುರ ರಸ್ತೆಯಿಂದ ಡಿಎಸ್‌ ಮಾಕ್ಸ್‌ ಸ್ಟೋನ್ಸ್‌ವರೆಗೂ ಮತ್ತು ರೀಕಪ್‌ ಆಸ್ಪತ್ರೆಯಿಂದ ಗೊಟ್ಟಿಗೆರೆವರೆಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.

ಆದರೆ, ಡಿಎಸ್‌ ಮಾಕ್ಸ್‌ ಸ್ಟೋನ್ಸ್‌ನಿಂದ ರೀಕಪ್‌ ಆಸ್ಪತ್ರೆವರೆಗೆ ಸುಮಾರು 300 ಮೀಟರ್‌ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಭಾಗದಲ್ಲಿ ಕುಡಿಯುವ ನೀರಿನ ದೊಡ್ಡ ಪೈಪ್‌ಲೈನ್‌ (8 ಅಡಿ ಸುತ್ತಳತೆಯ ಪೈಪ್‌) ಕಾಮಗಾರಿ ನಡೆಯುತ್ತಿದೆ. ಆದಿತ್ಯ ಗಾರ್ಡನ್‌ ಸಮೀಪದಲ್ಲಿ ದೊಡ್ಡ ಬಂಡೆಯೊಂದು ಅಡ್ಡ ಬಂದಿದ್ದು, ಸುಗಮ ಕಾಮಗಾರಿಗೆ ಅಡಚಣೆಯುಂಟು ಮಾಡಿದೆ. ಸದ್ಯ ಬಂಡೆ ಒಡೆಯುವ ಕಾರ್ಯ ಪ್ರಗತಿಯಲ್ಲಿದೆ. 40 ದಿನಗಳಲ್ಲಿ ಪೈಪ್‌ಲೈನ್‌ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

Bengaluru: ಇನ್ನೂ 1051 ರಸ್ತೆ ಗುಂಡಿ ಭರ್ತಿ ಬಾಕಿ: ತ್ವರಿತವಾಗಿ ಮುಚ್ಚುವಂತೆ ರಾಕೇಶ್ ಸಿಂಗ್‌ ಸೂಚನೆ

ಬಿಡಬ್ಲ್ಯೂಎಸ್‌ಎಸ್‌ಬಿ ಪೈಪ್‌ಲೈನ್‌ ಕಾಮಗಾರಿ ಮುಗಿಸಿ ಬಿಡಿಎಗೆ ಹಸ್ತಾಂತರಿಸಿದ ನಂತರ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ. ಪ್ರಸ್ತುತ ಪೈಪ್‌ಲೈನ್‌ ಕಾಮಗಾರಿಯ ಹಿನ್ನೆಲೆಯಲ್ಲಿ ವಾಹನಗಳು ಕನಕಪುರ ರಸ್ತೆಯಿಂದ ಡಿಎಸ್‌ ಮ್ಯಾಕ್ಸ್‌ ಸ್ಟೋನ್‌ವರೆಗೂ ಸಾಗಿ, ತಿರುವು ಪಡೆದು ಕೆಂಬತ್ತಹಳ್ಳಿ ರಸ್ತೆಯಲ್ಲಿ 300 ಮೀ. ಚಲಿಸಿ ರೀಕಪ್‌ ಆಸ್ಪತ್ರೆ ಸಮೀಪ ಪುನಃ 80 ಅಡಿ ರಸ್ತೆಗೆ(ಮುಖ್ಯ ರಸ್ತೆ) ಬಂದು ಸಾಗುತ್ತಿವೆ ಎಂಬು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಕನಕಪುರ ರಸ್ತೆಯಿಂದ ಗೊಟ್ಟಿಗೆರೆವರೆಗೆ ಸುಮಾರು 6.7 ಕಿ.ಮೀ. ಉದ್ದದ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಎಸ್‌.ಟಿ.ರಮೇಶ್‌ ಎಂಬುವರ ಗಣಪತಿ ಸ್ಟೋನ್‌ ಕ್ರಷ​ರ್‍ಸ್ ಸಂಸ್ಥೆ ಪಡೆದುಕೊಂಡಿತ್ತು. ಈ ಯೋಜನೆಯನ್ನು 9 ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಬಿಡಿಎನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಜೊತೆಗೆ ಈ ರಸ್ತೆಯಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆಗಾಗಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದರಿಂದ ಯೋಜನೆ ನಿಗದಿತ ಅವಧಿಗೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.

ತೆಪ್ಪ ನಡೆಸಿ ಪ್ರತಿಭಟನೆ!: ಅಂಜನಾಪುರ ಬಿಡಿಎ ಲೇಔಟ್‌ ರಸ್ತೆ ಅವ್ಯವಸ್ಥೆ ವಿರುದ್ಧ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಳೆಯಿಂದ ಕೆರೆಯಂತಾಗಿದ್ದ 80 ಅಡಿ ರಸ್ತೆಯಲ್ಲಿ ತೆಪ್ಪ ಇಳಿಸಿ ಬಿಡಿಎ ವಿರುದ್ಧ ಸ್ಥಳೀಯರು ಕಿಡಿಕಾರಿದ್ದರು. ಜೊತೆಗೆ ರಸ್ತೆಯಲ್ಲಿ ಗಿಡ ನೆಟ್ಟು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಛೀಮಾರಿ ಹಾಕಿದ್ದರು. ಈ ಕುರಿತು ‘ಕನ್ನಡಪ್ರಭ’ ವರದಿ ಮಾಡಿತ್ತು.

80 ಅಡಿ ರಸ್ತೆಯ ಅವ್ಯವಸ್ಥೆ ಬಗ್ಗೆ ನಿರಂತರವಾಗಿ ಅಂಜನಾಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹೋರಾಟ ನಡೆಸಿತ್ತು. ‘ಕನ್ನಡಪ್ರಭ’ ಕೂಡ ಸಾಥ್‌ ನೀಡಿದ್ದರಿಂದ ರಸ್ತೆ ನಿರ್ಮಾಣದ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಿದೆ.
-ಅರುಣ್‌ಭಟ್‌, ಮುಖಂಡ, ಅಂಜನಾಪುರ ಕ್ಷೇಮಾಭಿವೃದ್ಧಿ ಸಂಘ.

Bengaluru: ಸಿಲಿಕಾನ್ ಸಿಟಿಯ 5 ಪಿಎಫ್‌ಐ ಕಚೇರಿಗಳಿಗೆ ಖಾಕಿ ಬೀಗ: ಆಯುಕ್ತರ ಆದೇಶದಂತೆ ಕಾರ್ಯಾಚರಣೆ

ಸುಮಾರು 6.7 ಕಿ.ಮೀ. ಉದ್ದದ ರಸ್ತೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಡಿಎಸ್‌ ಮ್ಯಾಕ್ಸ್‌ ಸ್ಟೋನ್ಸ್‌ ಬಳಿ ಬಿಡಬ್ಲ್ಯೂ ಎಸ್‌ಎಸ್‌ಬಿ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು, ಒಂದು ತಿಂಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಆ ನಂತರ ಉಳಿದ 300 ಮೀಟರ್‌ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ನವೆಂಬರ್‌ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು.
-ಅಶೋಕ್‌, ಸಹಾಯಕ ಅಭಿಯಂತರ, ಬಿಡಿಎ.

click me!