Bengaluru: ಇನ್ನೂ 1051 ರಸ್ತೆ ಗುಂಡಿ ಭರ್ತಿ ಬಾಕಿ: ತ್ವರಿತವಾಗಿ ಮುಚ್ಚುವಂತೆ ರಾಕೇಶ್ ಸಿಂಗ್‌ ಸೂಚನೆ

By Govindaraj S  |  First Published Sep 30, 2022, 6:41 AM IST

ಕಳೆದ ಎರಡು ತಿಂಗಳಿಂದ ನಗರದಲ್ಲಿ ಸುರಿದ ಮಳೆಯಿಂದ ಸೃಷ್ಟಿಯಾದ ರಸ್ತೆ ಗುಂಡಿಗಳ ಪೈಕಿ ಬಾಕಿ ಇರುವ 1,051 ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 


ಬೆಂಗಳೂರು (ಸೆ.30): ಕಳೆದ ಎರಡು ತಿಂಗಳಿಂದ ನಗರದಲ್ಲಿ ಸುರಿದ ಮಳೆಯಿಂದ ಸೃಷ್ಟಿಯಾದ ರಸ್ತೆ ಗುಂಡಿಗಳ ಪೈಕಿ ಬಾಕಿ ಇರುವ 1,051 ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳಾದ ಪ್ರಮುಖ ರಸ್ತೆ (ಆರ್ಟಿರಿಯಲ್‌) ಹಾಗೂ ಉಪ ಪ್ರಮುಖ (ಸಬ್‌ ಆರ್ಟಿರಿಯಲ) ರಸ್ತೆಗಳಲ್ಲಿ ಸಂಚಾರ ಪೊಲೀಸ್‌ ಇಲಾಖೆ ಗುರುತಿಸಿದ್ದ 4,545 ರಸ್ತೆಗುಂಡಿಗಳ ಪೈಕಿ 3,494 ಗುಂಡಿ ಮುಚ್ಚಲಾಗಿದೆ. ಉಳಿದಿರುವ 1,051 ರಸ್ತೆ ಗುಂಡಿಗಳನ್ನು ಪಾಲಿಕೆ ಹಾಗೂ ಪೊಲೀಸ್‌ ಅಧಿಕಾರಿಗಳು ಜಂಟಿಯಾಗಿ ಮುಚ್ಚಿಸುವ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು. 

Tap to resize

Latest Videos

BBMP Election: 1 ದಿನ ಮೊದಲೇ ಅಂತಿಮ ಮತದಾರರ ಪಟ್ಟಿ ಬಿಡುಗಡೆ

ಬೆಂಗಳೂರಿನಲ್ಲಿ ಅತಿಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಸಿಲ್ಕ್‌ ಬೋರ್ಡ್‌, ಜಯದೇವ ವೃತ್ತ, ಟಿನ್‌ ಫ್ಯಾಕ್ಟರಿ, ಹೆಬ್ಬಾಳ ಜಂಕ್ಷನ್‌, ಗೊರಗುಂಟೆಪಾಳ್ಯ, ಸಾರಕ್ಕಿ ಕೆ.ಎಸ್‌.ಲೇಔಟ್‌ ಮತ್ತು ಬನಶಂಕರಿ ಜಂಕ್ಷನ್‌ಗಳಲ್ಲಿ ತ್ವರಿತವಾಗಿ ಕ್ರಮ ತೆಗೆದುಕೊಂಡು ಪೂರ್ಣಗೊಳಿಸಬೇಕು. ಜತೆಗೆ ಮುಂದಿನ ಸಭೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳನ್ನು ಆಹ್ವಾನಿಸಬೇಕು ಎಂದು ತಿಳಿಸಿದರು. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್‌, ಸಂಚಾರಿ ಪೊಲೀಸ್‌ ಜಂಟಿ ಆಯುಕ್ತ ಡಾ.ರವಿಕಾಂತೇಗೌಡ, ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ, ಬಿಡಿಎ, ಬಿಎಂಟಿಸಿ, ಬೆಸ್ಕಾಂ, ಸ್ಮಾರ್ಟ್‌ ಸಿಟಿ ಲಿ. ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

50 ಜಂಕ್ಷನ್‌ಗಳಲ್ಲಿ ವಾಹನ ಪಾರ್ಕಿಂಗ್‌ ಜಾಗ ಗುರುತು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಾತನಾಡಿ, ಸಂಚಾರ ಪೊಲೀಸ್‌ ಇಲಾಖೆಯು ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಪಾದಚಾರಿ ಕ್ರಾಸಿಂಗ್‌ ಮಾಡುವ ಹಾಗೂ ವಾಹನಗಳ ನಿಲುಗಡೆ ಲೈನ್‌ ಮಾರ್ಕಿಂಗ್‌ ಮಾಡಲು ಪಟ್ಟಿಯನ್ನು ನೀಡಿತ್ತು. ಈ ಪಟ್ಟಿಯ ಅನುಸಾರ 35 ಜಂಕ್ಷನ್‌ಗಳಲ್ಲಿ ಮಾರ್ಕಿಂಗ್‌ ಪೂರ್ಣಗೊಳಿಸಿದ್ದು, 7 ಜಂಕ್ಷನ್‌ಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಉಳಿದ 8 ಜಂಕ್ಷನ್‌ಗಳಲ್ಲಿ ಮಾರ್ಕಿಂಗ್‌ ಕೆಲಸ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

ಜಲಮಂಡಳಿಯ ಕಾಮಗಾರಿ ಸ್ಥಳದಲ್ಲಿ ಪೈಪ್‌ಗಳನ್ನು ರಸ್ತೆಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಹಾಕುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯ ಉಂಟಾಗುತ್ತಿದ್ದು, ತಕ್ಷಣ ರಸ್ತೆ ಬದಿಯಲ್ಲಿ ಹಾಕಿರುವ ಸಾಮಗ್ರಿಗಳ ತೆರವುಗಳಿಸಲು ಮತ್ತು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸುವಂತೆ ತಿಳಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪೆಟ್ಟಿಗೆ ಅಂಗಡಿಗಳ ಅಳವಡಿಕೆ ಮತ್ತು ರಸ್ತೆ ಬದಿ ಕಟ್ಟಡ ಭಗ್ನಾವಶೇಷಗಳನ್ನು ಹಾಕಿರುವ ಬಗ್ಗೆ ಸಂಚಾರ ಪೊಲೀಸ್‌ ಇಲಾಖೆ ನೀಡಿರುವ ಪಟ್ಟಿಅನುಸಾರ ಅವುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವಲಯವಾರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿಗೆ ಹೊಸ ಮೀಸಲು ನಿಗದಿ ಸಾಧ್ಯವೇ: ಹೈಕೋರ್ಟ್‌

ಅಡ್ಡಿಯಾಗುವ ಮರದ ಕೊಂಬೆಗಳನ್ನು ಕತ್ತರಿಸಿ: ರಸ್ತೆ ಬದಿ, ಜಂಕ್ಷನ್‌ಗಳಲ್ಲಿರುವ ಮರಗಳ ಒಣಗಿದ ಕೊಂಬೆಗಳು ರಸ್ತೆಗೆ ಬೀಳುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಬೀದಿ ದೀಪಗಳಿಗೂ ಮರದ ಕೊಂಬೆಗಳು ಅಡ್ಡಿಯಾಗುತ್ತಿವೆ. ಆದ್ದರಿಂದ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ಒಣಗಿದ ಮರದ ಕೊಂಬೆ ಹಾಗೂ ಬೀದಿ ದೀಪಕ್ಕೆ ಅಡ್ಡಿಯಿರುವ ಕೊಂಬೆಗಳನ್ನು ಕಟಾವು ಮಾಡುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

click me!