ಚಿಕ್ಕಬಳ್ಳಾಪುರ (ಜು.09): ಬಯಲು ಸೀಮೆ ಪೈಕಿ ಅತ್ಯಂತ ಹಿಂದುಳಿದ ಹಾಗೂ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳ ಪೈಕಿ ಮುಂಚೂಣಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಗಳ್ಳರ ಕಣ್ಣು ಸರ್ಕಾರಿ ಅರಣ್ಯ ಪ್ರದೇಶದ ಮೇಲೆ ಬಿದ್ದಿದೆ. ಜಿಲ್ಲೆಯಲ್ಲಿ ಒಟ್ಟು 897.40 ಎಕರೆ ಸರ್ಕಾರಿ ಅರಣ್ಯ ಒತ್ತುವರಿದಾರರ ಕೈಯಲ್ಲಿ ಇದೆ.
ಜಿಲ್ಲೆಯಲ್ಲಿ ಮೊದಲೇ ಸರಾಸರಿ ಇರಬೇಕಾದ ಅರಣ್ಯ ಪ್ರದೇಶಕ್ಕಿಂತ ಶೇ.16 ರಷ್ಟುಅರಣ್ಯ ಪ್ರದೇಶ ಕೊರತೆ ಇದೆ. ಆದರೆ ಜಿಲ್ಲಾದ್ಯಂತ ಒಟ್ಟಾರೆ ಇರುವ 77.050 ಹೆಕ್ಟೇರ್ ಅರಣ್ಯ ಪ್ರದೇಶದ ಪೈಕಿ 897.40 ಎಕರೆಯಷ್ಟುಸರ್ಕಾರಿ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕವರಿ ಸ್ಟೋರಿ ಇಂಪ್ಯಾಕ್ಟ್: ನಿರ್ಲಕ್ಷ್ಯ ಮಾಡಿದ್ದಕ್ಕೆ ಅಧಿಕಾರಿ ಸಸ್ಪೆಂಡ್ ...
ಜಿಲ್ಲೆಯಲ್ಲಿ ನೀರಿನ ಸಮಸ್ಯೆ
ಒಂದು ಕಾಲಕ್ಕೆ ಜಿಲ್ಲೆಯಲ್ಲಿ ಅಕ್ರಮವಾಗಿ ನದಿ, ಕುಂಟೆ, ಜಲಾಶಯಗಳ ಪಾತ್ರದಲ್ಲಿ ಕಾನೂನು ಬಾಹಿರವಾಗಿ ಮರಳು ದಂಧೆಯನ್ನು ಮೀತಿ ಮೀರಿ ನಡೆಸಿದ ಪರಿಣಾಮ ಜಿಲ್ಲೆ ತೀವ್ರ ಬರಗಾಲಕ್ಕೆ ತುತ್ತಾಗಿ ಎಷ್ಟೇ ಮಳೆಯಾದರೂ ಕೆರೆ, ಕುಂಟೆಗಳಲ್ಲಿ ಸಮರ್ಪಕವಾಗಿ ನೀರು ಸಂಗ್ರಹವಾಗದೇ ಇಂದಿಗೂ ಅದರ ದುಷ್ಪರಿಣಾಮ ಎದುರಿಸುತ್ತಿದೆ. ಮತ್ತೊಂದಡೆ ಜಿಲ್ಲೆಗೆ ಅನುಷ್ಟಾನಗೊಂಡ ನೀರಾವರಿ ಯೋಜನೆಗಳು ಆಮೆಗತಿಯಲ್ಲಿ ಸಾಗಿವೆ.
ಭೂಗಳ್ಳರಿಗೆ ರಕ್ಷಣೆ ಇಲ್ಲ: ಅರಾವಳಿ ಅರಣ್ಯದ 10 ಸಾವಿರ ಮನೆ ಧ್ವಂಸಕ್ಕೆ ಸುಪ್ರೀಂ ಸೂಚನೆ! .
ಮಳೆ, ಬೆಳೆ ಸಮೃದ್ದಿಗೆ ಕಾರಣವಾಗುವ ಅರಣ್ಯ ಪ್ರದೇಶವನ್ನು ಲೂಟಿಕೋರರು ದಶಕಗಳಿಂದಕೂ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬರುತ್ತಿರುವುದು ಮುಂದುವರೆದಿದ್ದು ಅರಣ್ಯ ಇಲಾಖೆಗೆ ಒತ್ತುವರಿ ತೆರವು ಜನಪ್ರತಿನಿದಿಗಳ ಪರೋಕ್ಷ ಅಸಹಕಾರ, ಅಸಡ್ಡೆ ಮನೋಭಾವದಿಂದಾಗಿ ಇಂದಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನುವುದಕ್ಕೆ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ 897.40 ಎಕರೆ ಸರ್ಕಾರಿ ಅರಣ್ಯ ಪ್ರದೇಶವೇ ಇದಕ್ಕೆ ಜೀವಂತ ನಿದರ್ಶನ ಎನ್ನಬಹುದು.
ಒತ್ತುವರಿ ತೆರವುಗೆ ಸಿಗದ ಬೆಂಬಲ:
ಇಂದಿಗೂ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ವಶಕ್ಕೆ ಪಡೆದು ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರ ವಿರುದ್ದ ಜಿಲ್ಲೆಯ ಅರಣ್ಯಾಧಿಕಾರಿಗಳು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಕಳೆದ ಹಲವು ತಿಂಗಳ ಹಿಂದೆ ಜಿಲ್ಲೆಯ ಶಿಡ್ಲಘಟ್ಟದ ತಾಲೂಕಿನಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದ ಮಹಿಳಾ ಅರಣ್ಯಾಧಿಕಾರಿ ಮೇಲೆ ಅಲ್ಲಿನ ಭೂಗಳ್ಳರು ಟ್ರ್ಯಾಕ್ಟರ್ ಹತ್ತಿಸುವ ಪ್ರಯತ್ನ ಮಾಡಿದ್ದರು. ಅಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ಅರಣ್ಯ ಒತ್ತುವರಿದಾರರ ಕಿರುಕುಳ ಅಧಿಕಾರಿಗಳ ಮೇಲೆ ಮುಂದುವರೆದಿದೆ.
ಆದರೆ ಭವಿಷ್ಯದ ದೃಷ್ಟಿಯಿಂದ ಜಿಲ್ಲೆಯನ್ನು ಬರ ಮುಕ್ತ ಮಾಡಬೇಕು, ಅರಣ್ಯೀಕರಣ ಬೆಳೆಸಿ ಮಳೆ, ಬೆಳೆ ಪೂರಕ ವಾತಾವರಣ ನಿರ್ಮಿಸಬೇಕೆಂಬ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯ ಪರಿಣಾಮವು ಏನೋ ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಕ್ಕೆ ಭಾರೀ ಹಿನ್ನಡೆ ಆಗಿದೆ.
ಶಿಡ್ಲಘಟ್ಟದಲ್ಲಿ ಹೆಚ್ಚು ಒತ್ತುವರಿ
ಜಿಲ್ಲೆಯಲ್ಲಿ ಒಟ್ಟು 897/40 ಎಕರೆ ಅರಣ್ಯ ಪ್ರದೇಶ ಒತ್ತುವರಿ ಪೈಕಿ ಶಿಡ್ಲಘಟ್ಟತಾಲೂಕಿನಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಒತ್ತುವರಿ ಆಗಿದ್ದರೆ ಎಡನೇ ಸ್ಥಾನದಲ್ಲಿ ಗೌರಿಬಿದನೂರು ತಾಲೂಕಿನಲ್ಲಿ 255 ಎಕರೆಗಿಂತ ಹೆಚ್ಚು ಸರ್ಕಾರಿ ಅರಣ್ಯ ಪ್ರದೇಶ ಒತ್ತುವರಿಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 77,050 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು ಆ ಪೈಕಿ 897/40 ಎಕೆರೆಯಷ್ಟುಅರಣ್ಯ ಪ್ರದೇಶ ಒತ್ತುವರಿಯಾಗಿ. ಕಳೆದ ತಿಂಗಳಲ್ಲಿ ಒಟ್ಟು 33.2 ಎಕರೆಯಷ್ಟುಅರಣ್ಯ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಹಂತ ಹಂತವಾಗಿ ಅರಣ್ಯ ಒತ್ತುವರಿ ತೆರವುಗೊಳಿಸಲಾಗುವುದು.
ಅರ್ಸಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ.
ತಾಲೂಕು ಒತ್ತುವರಿ ಅರಣ್ಯ (ಎಕರೆಗಳಲ್ಲಿ)
ಶಿಡ್ಲಘಟ್ಟ 335.32
ಗೌರಿಬಿದನೂರು 255.45
ಗುಡಿಬಂಡೆ 2.10
ಬಾಗೇಪಲ್ಲಿ 58.37
ಚಿಂತಾಮಣಿ 70.09
ಚಿಕ್ಕಬಳ್ಳಾಪುರ 176.07