* ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಹೆಬ್ಬಾಳಕರ
* ಕಾಂಗ್ರೆಸ್ ಪಕ್ಷದಿಂದ ಬೀದಿಗಿಳಿದು ಹೋರಾಟ
* ಒಂದು ವರ್ಷದಲ್ಲಿ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿಸಿದ ಕೇಂದ್ರ
ಬೆಳಗಾವಿ(ಜು.09): ಕ್ರೆಡಿಟ್ ರಾಜಕೀಯ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲ. ಅನಿವಾರ್ಯವೂ ಇಲ್ಲ ಎಂದು ಕೆಪಿಸಿಸಿ ವಕ್ತಾರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಬಿಜೆಪಿಯವರು ವಿರೋಧಿಸುತ್ತಲೇ ಬಂದಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ಅದೇ ಯೋಜನೆಗಳನ್ನು ಮುಂದುವರಿಸಿದರು. ಅವುಗಳನ್ನು ತಮ್ಮ ಯೋಜನೆಗಳು ಎಂದು ಪ್ರಚಾರ ಪಡೆದರು ಎಂದು ಟೀಕಿಸಿದ್ದಾರೆ.
undefined
ಮೊಸರಲ್ಲಿ ಕಲ್ಲು ಹುಡುಕುತ್ತಿರುವ ಸಿದ್ದರಾಮಯ್ಯ: ಕಾರಜೋಳ
ಜನಸಾಮಾನ್ಯರ ಬೆವರಿನ ದುಡ್ಡನ್ನು ವಾಪಸ್ ಪಡೆಯಲು ಬಿಜೆಪಿ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಕಳೆದ ಮೂರು ದಿನಗಳಿಂದ ಅಡುಗೆ ಅನಿಲದ ಬೆಲೆ 20 ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೇಶದ ಜನರಿಗೆ ಇಪ್ಪತ್ತು ಲಕ್ಷ ಕೋಟಿ ರುಪಾಯಿ ಕೊರೋನಾ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಅದನ್ನು ಪೂರ್ತಿ ಮಾಡಲಿಲ್ಲ. ಒಂದೆರಡು ಸಾವಿರ ಕೋಟಿ ಹಣವನ್ನು ಜನರಿಗೆ ಕೊಟ್ಟಿದೆ. ಅದರ ಹೊರೆ ಜನರ ಮೇಲೆಯೇ ಹಾಕಿ ಅವರ ಬೆವರಿನ ದುಡ್ಡನ್ನು ವಾಪಸ್ ಪಡೆಯಲು ಬೆಲೆ ಏರಿಕೆ ಮಾಡುತ್ತಿದೆ. ಹೀಗಾಗಿ ಜನರ ಸಂಕಷ್ಟ ದೂರ ಮಾಡುವ ಸಲುವಾಗಿ ಕಾಂಗ್ರೆಸ್ ಪಕ್ಷದಿಂದ ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.