* 21 ಸಕ್ಕರೆ ಕಾರ್ಖಾನೆಗಳಿಂದ 889 ಕೋಟಿ ಬಾಕಿ
* ನಿಯಮಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ
* ಕಬ್ಬಿನ ಬಾಕಿ ಬಿಲ್ ನೀಡುವಂತೆ ರೈತರ ಹೋರಾಟ
ಶ್ರೀಶೈಲ ಮಠದ
ಬೆಳಗಾವಿ(ಮೇ.14): ರೈತರ ಕಬ್ಬಿನ ಬಾಕಿ ಬಿಲ್(Sugarcane Bill Dues) ಪಾವತಿಗೆ ಸರ್ಕಾರ ಸೂಚನೆ ಕೊಟ್ಟರೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕ್ಯಾರೆ ಎನ್ನುತ್ತಿಲ್ಲ. ಕಬ್ಬು ಪೂರೈಸಿದ 15 ದಿನಗಳಲ್ಲಿ ರೈತರಿಗೆ(Farmers) ಕಬ್ಬಿನ ಬಿಲ್ ಪಾವತಿಸಬೇಕೆಂಬ ನಿಯಮಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲ. ಈ ನಿಯಮಗಳು ಕಾಗದಕ್ಕೆ ಮಾತ್ರ ಸೀಮಿತ. ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಹಣ ಕೊಡದೇ ಸಕ್ಕರೆ ಕಾರ್ಖಾನೆಗಳು(Sugar Factories) ರೈತರ ಗಾಯದ ಮೇಲೆ ಬರೆ ಎಳೆದಿವೆ. ಬೆಳಗಾವಿ(Belagavi) ಜಿಲ್ಲೆಯ ಒಟ್ಟು 21 ಸಕ್ಕರೆ ಕಾರ್ಖಾನೆಗಳು 2021-22ನೇ ಸಾಲಿನಲ್ಲಿ ರೈತರ ಕಬ್ಬಿನ ಬಾಕಿ ಉಳಿಸಿಕೊಂಡಿರುವ ಮೊತ್ತ ಬರೋಬ್ಬರಿ 889.61 ಕೋಟಿ ಎಂಬುವುದು ಇದೀಗ ಬಹಿ ರಂಗಗೊಂಡಿದೆ. ಕೇವಲ ಒಂದೇ ಜಿಲ್ಲೆಯಲ್ಲಿ ಇಷ್ಟೊಂದು ಇರುವಾಗ ಬೇರೆ ಜಿಲ್ಲೆಗಳಲ್ಲಿನ ಇನ್ನೆಷ್ಟು ಇರಬಹುದು?
ಪ್ರಭಾವಿ ರಾಜಕಾರಣಿಗಳದ್ದೇ ಸಕ್ಕರೆ ಕಾರ್ಖಾನೆಗಳಿವೆ ಎಂದು ಬೇರೆ ಹೇಳಬೇಕಿಲ್ಲ. ಎರಡು ವರ್ಷ ಕೋವಿಡ್(Covid-19) ಸಂಕಷ್ಟದಿಂದ ನಲುಗಿಹೋಗಿರುವ ರೈತರಿಗೆ ಕಬ್ಬಿನ ಬಾಕಿ ಬಿಲ್ ಬಾರದಿರುವುದು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಕಬ್ಬಿನ ಬಾಕಿ ಬಿಲ್ ನೀಡುವಂತೆ ರೈತರ ಹೋರಾಟವಂತೂ ನಿಂತಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಮಾತ್ರ ಬಾಕಿ ಬಿಲ್ ನೀಡದೇ ರೈತರನ್ನು ಸತಾಯಿಸುವುದು ತಪ್ಪಿಲ್ಲ. ಸಾಲ ಮಾಡಿ ಕಬ್ಬು ಬೆಳೆದು, ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರು ಸಂಕಷ್ಟದಲ್ಲಿದ್ದಾರೆ. ಕಬ್ಬಿನ ಬಾಕಿ ಬಿಲ್ ಕೊಡುವಂತೆ ಸಕ್ಕರೆ ಸಚಿವರು ಆದೇಶ ಮಾಡಿದ್ದರೂ ಆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಸಕ್ಕರೆ ಕಾರ್ಖಾನೆಗಳು ತಮ್ಮ ಹಠಮಾರಿತನ ನೀತಿಯನ್ನು ಮುಂದುವರಿಸಿವೆ. ರೈತರು ಸಂಕಷ್ಟದಲ್ಲಿದ್ದರೂ ಕಾರ್ಖಾನೆಗಳು ಬಾಕಿ ಬಿಲ್ ನೀಡುತ್ತಿಲ್ಲ! ಕಬ್ಬಿನ ಬಾಕಿ ಬಿಲ್ ಪಾವತಿಗೆ ರೈತರು ಗಡುವು ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಕುಡುಕ ಗಂಡ ಹೆಂಡತಿಯ ಹೆಣ ಮಲಗಿಸಿದ, ಪಾಪ ಪ್ರಜ್ಞೆಯಲ್ಲಿ ನೇಣಿಗೆ ಶರಣಾದ!
ಸಹಕಾರ ಕ್ಷೇತ್ರಗಳಿಂದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೋಟ್ಯಂತರ ರುಪಾಯಿ ಸಾಲ(Loan) ಪಡೆದಿದ್ದಾರೆ. ಸಾಲ ಪಡೆದಿದ್ದರೂ ರೈತರ ಕಬ್ಬಿನ ಬಾಕಿ ಬಿಲ್ ಪಾವತಿಸುತ್ತಿಲ್ಲ. ತಾವು ಸಾಲ ಪಡೆದುಕೊಂಡ ಬ್ಯಾಂಕಿಗೂ ಸಾಲ ಹಾಗೂ ಬಡ್ಡಿಯನ್ನೂ ಕೆಲವನ್ನು ಹೊರತುಪಡಿಸಿ ಮತ್ತೆ ಕಲವು ಕಾರ್ಖಾನೆಗಳು ಪಾವತಿಗೇ ಮುಂದಾಗದಿರುವುದು ಕಂಡುಬಂದಿದೆ. ಅನೇಕ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಅವುಗಳ ಪಾವತಿ ಎಂದು ಎಂಬ ಪ್ರಶ್ನೆ ರೈತರದ್ದು.
ಯಾವ ಕಾರ್ಖಾನೆ ಮಾಲೀಕರು ಎಷ್ಟುರೈತರ ಬಾಕಿ ಬಿಲ್ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ
ಅರಿಹಂತ ಶುಗರ್ಸ- ಉತ್ತಮ್ ಪಾಟೀಲ್ - 18.60 ಕೋಟಿ
ಅಥಣಿ ಶುಗರ್ಸ್- ಮಾಜಿ ಸಚಿವ ಶ್ರೀಮಂತ ಪಾಟೀಲ್ - . 62.61 ಕೋಟಿ
ಬೆಳಗಾಮ್ ಶುಗರ್ಸ್ - ಸತೀಶ್ ಜಾರಕಿಹೊಳಿ- .23.60 ಕೋಟಿ
ಚಿದಾನಂದ ಬಸವಪ್ರಭು ಕೋರೆ - ಪ್ರಭಾಕರ ಕೋರೆ - .30.16ಕೋಟಿ
ಗೋಕಾಕ ಶುಗರ್ಸ್- ವಿದ್ಯಾ ಮರಕುಂಬಿ - .7.33 ಕೋಟಿ
ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಪ್ಪಾಣಿ - .4.70 ಕೋಟಿ
ಹರ್ಷ ಶುಗರ್ಸ್- ಲಕ್ಷ್ಮೀ ಹೆಬ್ಬಾಳ್ಕರ - .28.62 ಕೋಟಿ
ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ - ನಿಖಿಲ… ಉಮೇಶ ಕತ್ತಿ - .15.49 ಕೋಟಿ
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ - ಲಕ್ಷ್ಮಣ ಸವದಿ ಸಹೋದರ -. 47.22 ಕೋಟಿ
ಖಾನಾಪುರದ ಭಾಗ್ಯ ಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಲೀಸ್ ಪಡೆದಿರುವ ಲೈಲಾ ಶುಗರ್ಸ್ - .27.02 ಕೋಟಿ
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ - ನಾಸೀರ ಭಾಗವಾನ -. 32.98 ಕೋಟಿ
ರೇಣುಕಾ ಶುಗರ್ಸ್ ಲೀಸ್ ಆಫ್ ರಾಯಬಾಗ - ವಿದ್ಯಾ ಮರಕುಂಬಿ - .7.38 ಕೋಟಿ
ರೇಣುಕಾ ಶುಗರ್ಸ್ ಗುರ್ಲಟ್ಟಿ, ಅಥಣಿ - ವಿದ್ಯಾ ಮರಕುಂಬಿ - .67.51 ಕೋಟಿ
ರೇಣುಕಾ ಶುಗರ್ಸ್ ಮುನವಳ್ಳಿ, ಸವದತ್ತಿ - ವಿದ್ಯಾ ಮುರಕುಂಬಿ - .79.09 ಕೋಟಿ
ಸತೀಶ ಶುಗರ್ಸ್, ಗೋಕಾಕ - ಸತೀಶ ಜಾರಕಿಹೊಳಿ - .35 ಕೋಟಿ
ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಹಿಡಕಲ… ಡ್ಯಾಂ - ಅಧ್ಯಕ್ಷ ರಾಜೇಂದ್ರ ಪಾಟೀಲ… - .24.58 ಕೋಟಿ
ಶಿವಶಕ್ತಿ ಶುಗರ್ಸ - ಪ್ರಭಾಕರ ಕೋರೆ - .93.57 ಕೋಟಿ
ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ, ಬೈಲಹೊಂಗಲ - ಅಧ್ಯಕ್ಷ ಮಹಾಬಳೇಶ್ವರ ಘೂಳಪ್ಪಣವರ -. 43.84 ಕೋಟಿ
ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆ - ಅಧ್ಯಕ್ಷ ಅವಿನಾಶ್ ಪೋತದಾರ - .25.65 ಕೋಟಿ
ಉಗಾರ ಶುಗರ್ಸ್ - ಬಾಬುರಾವ ಶಿರಗಾಂವಕರ - .138.31 ಕೋಟಿ
ವಿಶ್ವರಾಜ ಶುಗರ್ಸ್ - ಉಮೇಶ ಕತ್ತಿ - .76.34 ಕೋಟಿ