Bengaluru Mysuru Highway: ಬೆಂಗ್ಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ 800 ಕೋಟಿ ಲೂಟಿ: ಮಂಜುನಾಥ್‌

By Kannadaprabha News  |  First Published Sep 4, 2022, 8:15 AM IST

800 ಕೋಟಿ ಗೋಲ್‌ಮಾಲ್‌, ಸಿಬಿಐ ತನಿಖೆಯಾಗಲಿ, ಒಂದು ಕಿ.ಮೀ.ಗೆ 80 ಕೋಟಿ ವ್ಯಯಿಸಲು ಇದೇನು ಚಿನ್ನದ ರಸ್ತೆಯಾ?: ಮಂಜುನಾಥ್‌


ಬೆಂಗಳೂರು(ಸೆ.04):  ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿಯಲ್ಲಿ ಸುಮಾರು 800 ಕೋಟಿ ರು. ಲೂಟಿಯಾಗಿದ್ದು, ಈ ಹಗರಣ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಜೆಡಿಎಸ್‌ ಶಾಸಕ ಎ. ಮಂಜುನಾಥ್‌ ಆಗ್ರಹಿಸಿದ್ದಾರೆ. ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಪರಿಹಾರ ಮತ್ತು ಹೆದ್ದಾರಿ ಅವ್ಯವಹಾರದ ಬಗ್ಗೆ ‘ಇಡಿ’ ಮತ್ತು ಸಿಬಿಐ ತನಿಖೆಯಾಗಬೇಕು. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ನೇತೃತ್ವದಲ್ಲಿ ಶಾಸಕರ ನಿಯೋಗ ಸೆ.7ರಂದು ದೆಹಲಿಗೆ ತೆರಳಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ದೂರು ನೀಡಿ ಚರ್ಚಿಸಲಿದೆ. ಅದಕ್ಕಾಗಿ ಗಡ್ಕರಿ ಅವರ ಸಮಯಾವಕಾಶ ಕೇಳಲಾಗಿದೆ ಎಂದು ಹೇಳಿದರು.

ಮಳೆಯಿಂದಾಗಿ ಹೆದ್ದಾರಿ ಹಾನಿಯಾಗಿದೆ. ಇಡೀ ರಸ್ತೆ ಉದ್ದಕ್ಕೂ ಮಳೆಯಿಂದ ನೀರು ತುಂಬಿದೆ. ಆ ಭಾಗದ ರೈತರು, ಜನರಿಗೆ ಅನಾನುಕೂಲವಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಲಾಗಿತ್ತು. ಅವರ ದುರ್ನಡತೆಯಿಂದಾಗಿ ಈ ಸ್ಥಿತಿ ತಲುಪಿದೆ. ಭೂ ಸ್ವಾಧೀನ ವೇಳೆ ರೈತರ ಮನವೊಲಿಸಿ ಭೂ ಪರಿಹಾರ ಕೊಡಿಸುತ್ತೇವೆ ಎಂದು ಮನವಿ ಮಾಡಲಾಗಿತ್ತು. ಆದರೆ, ಭೂ ಸ್ವಾಧೀನ ಪರಿಹಾರದಲ್ಲಿಯೂ ಲೋಪವಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‌ ಎಂಬುವವರಿಂದ ಭಾರೀ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

Tap to resize

Latest Videos

ಪ್ರವಾಹ: ಬೆಂಗಳೂರು-ಮೈಸೂರು ಹೆದ್ದಾರಿ ಪ್ಲಾನ್‌ ಮಾಡಿದವನಿಗೆ ಪ್ರಶಸ್ತಿ ಕೊಡಿ, ಡಿಕೆಶಿ

ಸಂಸದ ಪ್ರತಾಪ್‌ ಸಿಂಹ ವಿರುದ್ಧ ಆಕ್ರೋಶ:

ಸಂಸದ ಪ್ರತಾಪ್‌ ಸಿಂಹ ಬಂದು ರಸ್ತೆ ನಾವೇ ಮಾಡಿರುವುದು ಎಂದು ಪೋಸ್‌ ಕೊಡುತ್ತಿದ್ದರು ಎಂದು ಟೀಕಿಸಿದ ಶಾಸಕ ಮಂಜುನಾಥ್‌, ನೀವು ಯಾರಿಗೆ ಬ್ರಾಂಡ್‌ ಅಂಬಾಸಿಡರ್‌ ಹೇಳಿ, ಹೆದ್ದಾರಿ ಮಾಡುವ ಸಂಸ್ಥೆಯವರಿಗಾ ಎಂದು ಪ್ರಶ್ನಿಸಿದರು. ಅವೈಜ್ಞಾನಿಕವಾಗಿ ಹೆದ್ದಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆಯಲ್ಲಿ ಪ್ರಯಾಣಿಕರು ಓಡಾಡುವುದಕ್ಕೂ ಆಗುತ್ತಿಲ್ಲ. ಪ್ರಯಾಣಿಕರಿಗೆ ಯಾವುದೇ ವ್ಯವಸ್ಥೆ ಇಲ್ಲ. ಪೆಟ್ರೋಲ್‌ ಹಾಕಿಸಿಕೊಳ್ಳುವ ವ್ಯವಸ್ಥೆಯೂ ಇಲ್ಲ. ಬೇರೆ ಎಕ್ಸ್‌ಪ್ರೆಸ್‌ ಹೈವೇಗಳನ್ನು ಇದೇ ರೀತಿ ಮಾಡಿದ್ದಾರಾ? ಅಪಘಾತವಾದರೆ ಟ್ರಾಮಾ ಸೆಂಟರ್‌ ಮಾಡಿಲ್ಲ. ಸಾರ್ವಜನಿಕರಿಗೆ ಇದರಿಂದ ಏನು ಲಾಭ? ನಾವೆಲ್ಲ ಶಾಸಕರು ಬರುತ್ತೇವೆ, ಬನ್ನಿ ರಸ್ತೆ ನೋಡಿ ಎಂದು ಸವಾಲು ಹಾಕಿದರು.

ಹೆದ್ದಾರಿಯಲ್ಲಿ ಕ್ರಾಸಿಂಗ್‌ ಕೊಟ್ಟಿಲ್ಲ. ಟ್ರ್ಯಾಕ್ಟರ್‌ಗಳನ್ನು ಎಲ್ಲಿ ಕ್ರಾಸ್‌ ಮಾಡಬೇಕು. 50 ಕಡೆ ಕ್ರಾಸಿಂಗ್‌ ಇದ್ದರೂ ನೀರು ತುಂಬಿವೆ. ರೈತರಿಗೆ ಬರಬೇಕಾದ ಭೂಪರಿಹಾರ ಕೊಡಿಸಬೇಕು. ಭೂ ಪರಿಹಾರ ನೀಡದಿದ್ದರೆ ರಸ್ತೆಯಲ್ಲಿಯೇ ಕೂರುತ್ತೇವೆ. ಒಂದು ಕಿ.ಮೀ.ಗೆ 80 ಕೋಟಿ ರು. ಖರ್ಚು ಮಾಡಲಾಗಿದೆ. ಇದು ಡಾಂಬರ್‌ ರಸ್ತೆನಾ, ಚಿನ್ನ-ಬೆಳ್ಳಿಯಿಂದ ಮಾಡಿರೋದಾ? ಯಾರದ್ದೋ ಭೂಮಿ, ಇನ್ನಾರಿಗೋ ಪರಿಹಾರ ನೀಡಲಾಗಿದೆ. ಯಾರಿಗೆ ಪರಿಹಾರ ಕೊಟ್ಟಿದ್ದಾರೆ. ಭೂ ಪರಿಹಾರ ಕೇಳಿದರೆ ಜೈಲಿಗೆ ಹಾಕಿಸ್ತಾರಂತೆ, ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಪ್ರತಾಪ್‌ಸಿಂಹ ಬಿಡದಿಗೆ ಬರಬೇಕು ಎಂದು ಆಗ್ರಹಿಸಿದರು.

ದಶಪಥದ ರಾಷ್ಟ್ರೀಯ ಹೆದ್ದಾರಿ ವಿಚಾರದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಎರಡು ಬಾರಿ ಪ್ರಶ್ನೆ ಕೇಳಲು ಪ್ರಯತ್ನ ಪಟ್ಟಿದ್ದರೂ ಪ್ರಶ್ನೋತ್ತರ ವೇಳೆಗೆ ಬಾರದಂತೆ ಸಭಾಧ್ಯಕ್ಷರ ಕಚೇರಿಯನ್ನು ಮ್ಯಾನೇಜ್‌ ಮಾಡಲಾಗಿದೆ ಎಂದು ಅವರು ಇದೇ ವೇಳೆ ದೂರಿದರು.
 

click me!