
ಮಂಡ್ಯ (ಫಎ.03): ಸಕ್ಕರೆ ನಗರ ಮಂಡ್ಯದಲ್ಲಿ 8 ವರ್ಷದ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಾಗಿದೆ. ಶಾಲೆಯ ಬಳಿ ಶೌಚಾಲಯಕ್ಕೆ ಹೋದಾಗ ಇಬ್ಬರು ಹುಡುಗರು ಬಂದು ಬಾಲಕಿಯನ್ನು ಬಾಯಿ, ಕಣ್ಣು ಮುಚ್ಚಿ ಎಳೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಬಾಲಕರ ವಿರುದ್ಧ ಆರೋಪಿಸಲಾಗಿದೆ.
ಬಾಲಕಿಯನ್ನು ಅದೇ ಶಾಲೆಯ ಇಬ್ಬರು ಅಪ್ರಾಪ್ತ ಬಾಲಕರು ಶೌಚಾಲಯದಲ್ಲಿ ಬಾಯಿ ಮುಚ್ಚಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜನವರಿ 31 ರಂದು ಈ ಘಟನೆ ನಡೆದಿದೆ. ಆದರೆ, ನಿನ್ನೆ ಭಾನುವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಅವರ ತಾಯಿ ಕಾರಣ ಕೇಳಿದಾಗ ಶೌಚಾಲಯದ ಕೋಣೆಯೊಳಗೆ ಬಾಲಕರು ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ. ನಂತರ ಬಾಲಕಿಯ ತಾಯಿ ತನ್ನ ಮಗಳ ಮೇಲೆ ಅತ್ಯಾಚಾರ ಆಗಿರಬಹುದೆಂದು ಪೊಲೀಸರಿಗೆ ದೂರು ದಾಖಲಿಸಿ, ವಿವರಣೆ ಕೇಳಿದಾಗ ಮಾಹಿತಿ ನೀಡಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ಬಾಲಕಿಯನ್ನು ಶೌಚಾಲಯಕ್ಕೆ ಕರೆದೊಯ್ದು ಬೆದರಿಸಿ ಕಿರುಕುಳ ನೀಡಿದ್ದಾರೆ. ಇಬ್ಬರು ಬಾಲಕರಲ್ಲಿ ಒಬ್ಬ ಬಾಲಕಿ ಓದುತ್ತಿದ್ದ ತರಗತಿಯ ವಿದ್ಯಾರ್ಥಿ ಆಗಿದ್ದಾನೆ. ಇನ್ನೊಬ್ಬ ಬಾಲಕ ಪ್ರೌಢಶಾಲಾ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಇಬ್ಬರೂ ಸೇರಿ ಬೆದರಿಸಿದ್ದರು. ಇದೀಗ ಕೆಲವು ದಿನಗಳ ನಂತರ ತಾಯಿಗೆ ವಿಷಯ ತಿಳಿಸಿದ್ದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಇದನ್ನೂ ಓದಿ: ಬಂಡೂರು ಟಗರು ₹1.48 ಲಕ್ಷಕ್ಕೆ ಮಾರಾಟ!
ಬಾಲಕಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಶಾಲಾ ಆವರಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯ ಖಾಸಗಿ ಅಂಗಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಹಾಗೂ ಸತ್ಯಾಸತ್ಯತೆ ಪರಿಶೀಲಿಸಲು ತನಿಖೆ ಮುಂದುವರೆದಿದೆ. ಬಾಲಕರ ಹೇಳಿಕೆಗಳನ್ನು ಪಡೆಯಲಾಗುವುದು ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿ ಬೆಳಕಿಗೆ ಬಂದ ನಂತರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಎಕ್ಸ್‌ನಲ್ಲಿ (ಟ್ವಿಟರ್) ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ದರೋಡೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.