ಉಡುಪಿಯಲ್ಲಿ ಕೊರೋನಾ ಮಹಾಸ್ಫೋಟ: ಒಂದೇ ದಿನ 73 ಪಾಸಿಟಿವ್‌ ಕೇಸ್

Kannadaprabha News   | Asianet News
Published : Jun 02, 2020, 08:08 AM IST
ಉಡುಪಿಯಲ್ಲಿ ಕೊರೋನಾ ಮಹಾಸ್ಫೋಟ: ಒಂದೇ ದಿನ 73 ಪಾಸಿಟಿವ್‌ ಕೇಸ್

ಸಾರಾಂಶ

ಜಿಲ್ಲೆಯಲ್ಲಿ ಇದುವರೆಗಿನ ಅತಿ ಹೆಚ್ಚು, 73 ಕೊರೋನಾ ಪಾಸಿಟಿವ್‌ ಪ್ರಕರಣಗಳು ಸೋಮವಾರ ಒಂದೇ ದಿನ ದೃಢಪಟ್ಟಿವೆ, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 260 ಆಗಿದೆ.

ಉಡುಪಿ(ಜೂ 02): ಜಿಲ್ಲೆಯಲ್ಲಿ ಇದುವರೆಗಿನ ಅತಿ ಹೆಚ್ಚು, 73 ಕೊರೋನಾ ಪಾಸಿಟಿವ್‌ ಪ್ರಕರಣಗಳು ಸೋಮವಾರ ಒಂದೇ ದಿನ ದೃಢಪಟ್ಟಿವೆ, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 260 ಆಗಿದೆ.

ಅವರಲ್ಲಿ 53 ಮಂದಿ ಪುರುಷರು, 16 ಮಂದಿ ಮಹಿಳೆಯರು, 10 ವರ್ಷದೊಳಗಿನ 3 ಬಾಲಕಿಯರು ಮತ್ತು ಒಬ್ಬ ಬಾಲಕರಿದ್ದಾರೆ. ಈ 73 ಮಂದಿಯಲ್ಲಿ ನಿರೀಕ್ಷೆಯಂತೆ ಹೆಚ್ಚು ಸಂಖ್ಯೆಯಲ್ಲಿ ಅಂದರೇ 61 ಮಂದಿ ಮಹಾರಾಷ್ಟ್ರದಿಂದ ಬಂದವರು, 3 ಮಂದಿ ದುಬೈಯಿಂದ ಬಂದವರಾಗಿದ್ದಾರೆ. 5 ಮಂದಿಯ ವಿವರಗಳು ಇನ್ನೂ ಪತ್ತೆಯಾಗಿಲ್ಲ. 4 ಮಂದಿ ಸ್ಥಳೀಯ ಪೊಲೀಸರಾಗಿದ್ದಾರೆ.

ಎಚ್ಚರ.. ಸಮುದಾಯಕ್ಕೆ ಹರಡುತ್ತಿದೆ ಕೊರೋನಾ, ನಿಯಂತ್ರಣಕ್ಕೆ 11 ಶಿಫಾರಸು!

ಈ ಎಲ್ಲರೂ ಸರ್ಕಾರಿ ಕ್ವಾರಂಟೈನ್‌ನಿಂದ ಬಿಡುಗಡೆಯಾಗಿ ಅವರವರ ಮನೆಯಲ್ಲಿ ಹೋಮ್‌ ಕ್ವಾರಂಟೈನ್‌ನಲ್ಲಿದ್ದವರು, ಪಾಸಿಟಿವ್‌ ವರದಿ ಬಂದ ತಕ್ಷಣ ಅವರನ್ನು ಕರೆದುಕೊಂಡು ಬಂದು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಬಾರಿ ತೀವ್ರ ಚಿಕಿತ್ಸೆ ಅಗತ್ಯ ಇಲ್ಲದ ಸೋಂಕಿತರನ್ನು ಅವರವರ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸೋಂಕಿತ ಪೊಲೀಸ್‌ ಸಿಬ್ಬಂದಿ, ಮಕ್ಕಳು, ಗರ್ಭಿಣಿಯರು ಮತ್ತು 60 ವರ್ಷ ಮೇಲ್ಪಟ್ಟವರನ್ನು ಮಾತ್ರ ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 260 ಮಂದಿ ಸೋಂಕಿತರು ಪತ್ತೆಯಾಗಿದ್ದು, ಅವರಲ್ಲಿ 63 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 196 ಮಂದಿ ಉಡುಪಿ ಕೋವಿಡ್‌ ಆಸ್ಪತ್ರೆ, ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಒಬ್ಬರು ಮರಣ ಹೊಂದಿದ್ದಾರೆ.

ಇನ್ನೂ ಹೆಚ್ಚಲಿದೆ ಸಂಖ್ಯೆ:

ಸಾಕಷ್ಟುಮಂದಿ ಹೊರರಾಜ್ಯಗಳಿಂದ ಬಂದವರು ವರದಿ ಬರುವುದಕ್ಕೆ ಮೊದಲೇ ಮನೆ ಸೇರಿರುವುದರಿಂದ, ಅವರಿಗೆ ಸೋಂಕಿದ್ದಲ್ಲಿ ಅದು ಸಹಜವಾಗಿಯೇ ಮನೆಯವರಿಗೂ ಹರಡುತ್ತದೆ. ಆದ್ದರಿಂದ ಮುಂದಿನ ವಾರಗಳಲ್ಲಿ ಮನೆಯಲ್ಲಿ ಸೋಂಕು ಹರಡಿರುವವರ ಸಂಖ್ಯೆ ಹೆಚ್ಚಾಗಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಕೊರೋನಾದ ನಾಗಾಲೋಟ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ.

ಮತ್ತೆ 4 ಮಂದಿ ವಾರಿಯರ್ಸ್‌ಗೆ ಸೋಂಕು

ಉಡುಪಿ: ಜಿಲ್ಲೆಯಲ್ಲಿ ಮತ್ತೇ 4 ಮಂದಿ ಪೊಲೀಸ್‌ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಹಿಂದೆ 4 ಪೊಲೀಸ್‌ ಸಿಬ್ಬಂದಿಗಳಿಗೆ ಸೋಂಕು ಪತ್ತೆಯಾಗಿದ್ದು ಅವರು ಕಳೆದವಾರವಷ್ಟೇ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಭಾನುವಾರ ಶಂಕರನಾರಾಯಣ ಪೊಲೀಸ್‌ ಠಾಣೆಯ ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಈಗ ಮತ್ತೆ 4 ಮಂದಿಗೆ ಸೋಂಕು ಪತ್ತೆಯಾಗಿರುವುದು, ಮುಂಚೂಣಿಯಲ್ಲಿದ್ದುಕೊಂಡು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಪೊಲೀಸರಲ್ಲಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.

ಶಂಕರನಾರಾಯಣ ಪೊಲೀಸ್‌ ಠಾಣೆಯನ್ನು ಸೋಮವಾರ ರಾಸಾಯನಿಕಗಳನ್ನು ಬಳಸಿ ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಬುಧವಾರದಿಂದ ಠಾಣೆ ಮತ್ತೆ ಕಾರ್ಯಾರಂಭ ಮಾಡಲಿದೆ. ಸೋಮವಾರ ಪತ್ತೆಯಾದ 4 ಮಂದಿ ಪೊಲೀಸರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಇಡಿ ಸಶಸ್ತ್ರ ಮೀಸಲು ಪಡೆಯ ಕೇಂದ್ರವನ್ನು ಸ್ಯಾನಿಟೈಸ್‌ ಮಾಡಲಾಗುತ್ತದೆ ಎಂದು ಎಸ್ಪಿ ಎನ್‌. ವಿಷ್ಣುವರ್ಧನ್‌ ತಿಳಿಸಿದ್ದಾರೆ.

ಪರಿಣಾಮದ ಬಗ್ಗೆ ಯೋಚಿಸುತ್ತಿಲ್ಲ:

ಪೊಲೀಸರು ಚೆಕ್‌ಪೋಸ್ವ್‌ಗಳಲ್ಲಿ ಹೊರ ಜಿಲ್ಲೆ- ರಾಜ್ಯದಿಂದ ಬರುವವರೊಂದಿಗೆ ನೇರ ಸಂಪರ್ಕದಲ್ಲಿರುವುದರಿಂದ ಅವರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ. ಆದರೆ ನಾವು ಪರಿಣಾಮದ ಬಗ್ಗೆ ಯೋಚಿಸದೆ ಕರ್ತವ್ಯವನ್ನು ನಿಭಾಯಿಸುತಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.

PREV
click me!

Recommended Stories

ರಾಜ್ಯದಲ್ಲಿ ವಿಪರೀತ ಚಳಿ ಹಲವು ದಿನ ಮುಂದುವರಿಕೆ, ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ! 17 ಜಿಲ್ಲೆಗಳಿಗೆ ಎಚ್ಚರಿಕೆ
ಮಾಜಿ ಪ್ರೇಯಸಿ ಬರ್ತಿದ್ದಂತೆ ನವ ವಧು-ವರರು ಎಸ್ಕೇಪ್; ನಾನು ಇವನನ್ನೇ ಮದುವೆಯಾಗಬೇಕು ಎಂದು ರಂಪಾಟ!