ವಾಟ್ಸಾಪ್ ಮೂಲಕ ಕೆಡುಕು ಆಗುವುದೇ ಹೆಚ್ಚು ಎಂಬುದು ಹಲವರ ಅಭಿಪ್ರಾಯ. ಆದರೆ ಕೊಡಗು ಜಿಲ್ಲೆಯಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ರಕ್ತದಾನ ಮಾಡುವ ಮೂಲಕ ಹಲವರ ಜೀವ ಉಳಿಸಲಾಗಿದೆ.
ಮಡಿಕೇರಿ(ಮಾ.12): ವಾಟ್ಸಾಪ್ ಮೂಲಕ ಕೆಡುಕು ಆಗುವುದೇ ಹೆಚ್ಚು ಎಂಬುದು ಹಲವರ ಅಭಿಪ್ರಾಯ. ಆದರೆ ಕೊಡಗು ಜಿಲ್ಲೆಯಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ರಕ್ತದಾನ ಮಾಡುವ ಮೂಲಕ ಹಲವರ ಜೀವ ಉಳಿಸಲಾಗಿದೆ. ಕೊಡಗು ಜಿಲ್ಲೆಯ ಯುವಕರು ಸೇರಿದಂತೆ ಇತರ ಜಿಲ್ಲೆಯ ಸ್ನೇಹಿತರನ್ನು ಸಂಪರ್ಕಿಸಿ ಅಗತ್ಯವಿರುವ ಬಡ ರೋಗಿಗಳಿಗೆ ಉಚಿತವಾಗಿ ರಕ್ತದಾನ ಮಾಡುವ ಮೂಲಕ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಕೊಡಗು ಬ್ಲಡ್ ಡೋನರ್ಸ್ ವಾಟ್ಸಾಪ್ ಗ್ರೂಪ್.
ಈ ಬಳಗ ಕಳೆದ ಒಂದು ವರ್ಷದಿಂದ ಆರಂಭಗೊಂಡು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಇದು ಮಡಿಕೇರಿ ಮಾತ್ರವಲ್ಲದೆ ಸುಳ್ಯ, ಪುತ್ತೂರು, ಮಂಗಳೂರು, ಹುಣಸೂರು, ಮೈಸೂರು, ಉಡುಪಿ, ಹಾಸನ, ಶಿವಮೊಗ್ಗ, ಬೆಂಗಳೂರು ಮತ್ತು ರಾಜ್ಯದ ಇತರೆ ಭಾಗಗಳಲ್ಲಿ ರಕ್ತದ ಅವಶ್ಯವಿರುವ ವರಿಗೆ ಸ್ಥಳೀಯ ಸ್ನೇಹಿತರಿಗೆ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕವೇ ವ್ಯವಹರಿಸಿ ರಕ್ತದ ವ್ಯವಸ್ಥೆಯನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
undefined
ಕೊರೋನಾ ಭೀತಿ, ಕೊಲ್ಲೂರಿಗೆ ಬರ್ತಿಲ್ಲ ಕೇರಳದ ಭಕ್ತರು
ದಿನದ 24 ಗಂಟೆಯೂ ಚಾಲ್ತಿಯಲ್ಲಿರುವ ಈ ಗುಂಪು ರಕ್ತದ ವ್ಯವಸ್ಥೆ ಮಾಡುತ್ತಿರುವುದು ಹುಬ್ಬೇರುವಂತೆ ಮಾಡಿದೆ. ಈ ವಾಟ್ಸ್‌ಆ್ಯಪ್ ಗ್ರೂಪ್ ‘ಬನ್ನಿ ರಕ್ತದಾನ ಮಾಡೋಣ ಬಾಂಧವ್ಯದ ಬೆಸುಗೆ ಬೆಳೆಸೋಣ’ ಎಂಬಂತೆ ಕೊಡಗು ಮಾತ್ರವಲ್ಲದೆ ಇತರೆಡೆಯೂ ಯುವಕರನ್ನು ಸಂಪರ್ಕಿಸಿ ರಕ್ತದಾನ ಮಾಡಿ ಜೀವ ಉಳಿಸುತ್ತಿದೆ. ಇವರಿಗೆ ಬೆನ್ನೆಲುಬಾಗಿ ಇತರೆ ಕಡೆಗಳಲ್ಲಿ ಎಲೆಮರೆಯಕಾಯಂತೆ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ(ರಿ) ಪುತ್ತೂರು, ಸೇವಾ ಹೃದಯ ಚಾರಿಟೇಬಲ್ ಟ್ರಸ್ಟ್ ಮೈಸೂರು, ಯಶಸ್ವಿ ರಕ್ತದಾನಿಗಳ ಬಳಗ, ರಕ್ತನಿಧಿ ಒಂದು ಜೀವ ಉಳಿಸಿ ಹೀಗೆ ಹಲವಾರು ಸಂಸ್ಥೆಗಳು ವಾಟ್ಸ್‌ಆ್ಯಪ್ ಗ್ರೂಪ್‌ಗಳು ಕೊಡಗು ಬ್ಲಡ್ ಡೋನರ್ಸ್ ವಾಟ್ಸ್‌ಆ್ಯಪ್ ಗ್ರೂಪ್‌ನೊಂದಿಗೆ ಕೈಜೋಡಿಸಿವೆ. ರಕ್ತದ ವ್ಯವಸ್ಥೆ ಮಾಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸಿ ರಕ್ತ ಬೇಕಾದವರಿಗೆ ಸ್ಪಂದಿಸಿ ರಕ್ತದ ವ್ಯವಸ್ಥೆ ಮಾಡಿಕೊಡುತ್ತಿರುವುದು ಶ್ಲಾಘನೀಯವಾಗಿದೆ.
ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮದಲ್ಲಿ ರಕ್ತದಾನ ಮಾಡುವ ಜೀವ ಉಳಿಸುವ ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಗುಂಪು ಪ್ರಾರಂಭಗೊಂಡ ಒಂದು ವರ್ಷದ ಅವಧಿಯಲ್ಲಿ ಈವರೆಗೆ ಕನಿಷ್ಠ 700ಕ್ಕೂ ಅಧಿಕ ಯೂನಿಟ್ ರಕ್ತದ ವ್ಯವಸ್ಥೆ ಮಾಡಿ ಜೀವದಾನ ಮಾಡಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚನ್ನಕೇಶವ ದೇಗುಲಕ್ಕೂ ತಟ್ಟಿದ ಕೊರೋನಾ
ಒಂದುಕಡೆ ಸಾಮಾಜಿಕ ಜಾಲತಾಣಗಳು ಕೆಟ್ಟಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮತ್ತೊಂದು ಕಡೆ ಇಂತಹ ಯುವಕರು ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಂಡು ಜನರ ಜೀವ ಉಳಿಸುವ ಕಾರ್ಯ ಮಾಡುತ್ತಾ ಸಮಾಜದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆ ನೀಡುವ ಮೂಲಕ ಕಾರ್ಯಪ್ರವೃತ್ತರಾಗಿರುವುದು ಮಾದರಿ ಕೆಲಸವಾಗಿದೆ.
ಇಂದು ವಾರ್ಷಿಕೋತ್ಸವ: ಮಾ.12ರಂದು ಕೊಡಗು ಬ್ಲಡ್ ಡೋನರ್ಸ್ ತನ್ನ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ಬಾಲಭವನದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಅಲ್ಲದೆ ಅರಿವು ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ವ್ಯಾಟ್ಸ್‌ಆ್ಯಪ್ ಗ್ರೂಪನ್ನು ಸಂಸ್ಥೆಯಾಗಿ ರೂಪಿಸಿ ಅಧಿಕೃತವಾಗಿ ನೋಂದಾಯಿಸಿಕೊಳ್ಳುವ ಕಾರ್ಯ ಕೂಡ ಪ್ರಗತಿಯಲ್ಲಿದೆ.
ಕೊಡಗು ಬ್ಲಡ್ ಡೋನರ್ಸ್ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ 180 ಮಂದಿ ಸದಸ್ಯರಿದ್ದಾರೆ. ಇದರಲ್ಲಿ ಶೇ.80ರಷ್ಟುಮಂದಿ ರಕ್ತದಾನ ಮಾಡುತ್ತಿದ್ದಾರೆ. ಬಳಗದಲ್ಲಿ ಜಾತಿ, ಮತ, ಧರ್ಮದ ಬೇಧವಿಲ್ಲ. ಎಲ್ಲರೂ ಸ್ನೇಹ ಜೀವಿಗಳಾಗಿ ಒಂದೇ ಕುಟುಂಬದವರಂತೆ ಕೆಲಸ ಮಾಡುತ್ತೇವೆ. ರಕ್ತವನ್ನು ಅಗತ್ಯ ಬಂದವರಿಗೆ ಉಚಿತವಾಗಿ ನೀಡುತ್ತೇವೆ. ಒಂದು ವರ್ಷದ ಅವಧಿಯಲ್ಲಿ ಈವರೆಗೆ ಕನಿಷ್ಠ 700 ಯೂನಿಟ್ ರಕ್ತದ ವ್ಯವಸ್ಥೆ ಮಾಡಿ ಜೀವದಾನ ಮಾಡಲಾಗಿದೆ ಎಂದು ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ವಿನು ತಿಳಿಸಿದ್ದಾರೆ.
ಸಹಾಯವಾಣಿ
ರಕ್ತದ ಅವಶ್ಯ ಬಂದಲ್ಲಿ ಕೊಡಗು ಬ್ಲಡ್ ಡೋನರ್ಸ್ ವಾಟ್ಸ್‌ಆ್ಯಪ್ ಗ್ರೂಪ್‌ನ ಮೂಲಕ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿದಲ್ಲಿ ರಕ್ತದ ವ್ಯವಸ್ಥೆ ಉಚಿತವಾಗಿ ಮಾಡಿಕೊಡುತ್ತಾರೆ. ಸಹಾಯವಾಣಿ ಸಂಖ್ಯೆಗಳು 7760830077, 9741091808, 9535904123, 9731898768.
ಬಳಗ ಹುಟ್ಟಿದ್ದು ಹೀಗೆ...
ಕಳೆದ ಒಂದು ವರ್ಷದ ಹಿಂದೆ ಮಂಗಳೂರು, ಮೈಸೂರು ಹಾಗೂ ಮಡಿಕೇರಿಯಲ್ಲಿ ರಕ್ತದಾನಕ್ಕೆ ಸಂಬಂಧಿಸಿದಂತೆ ಇದ್ದ ಕೆಲವು ವಾಟ್‌್ಯಆ್ಯಪ್ ಗ್ರೂಪ್‌ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಡಿಕೇರಿಯ ಜಲೀಲ್ ಮತ್ತು ಅಂಜುಮ್ ಅವರು ಕೊಡಗಿನಲ್ಲಿ ಮತ್ತು ಇತರೆ ಕಡೆ ರಕ್ತದ ಅಭಾವ ಉಂಟಾಗಿರುತ್ತಿರುವುದನ್ನು ಮನಗಂಡು ಇದನ್ನು ನೀಗಿಸಬೇಕು, ಯಾರಿಗೂ ರಕ್ತದ ಕೊರತೆ ಉಂಟಾಗಬಾರದು ಎಂಬುವ ಉದ್ದೇಶದೊಂದಿಗೆ ‘ಕೊಡಗು ಬ್ಲಡ್ ಡೋನರ್ಸ್’ ಎಂಬ ಗ್ರೂಪ್ ರಚಿಸಿದರು.
ಎರಡು ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಇವರಿಗೆ ಮಡಿಕೇರಿ, ಸುಳ್ಯ, ಪುತ್ತೂರು, ಮಂಗಳೂರು ಹಾಗೂ ಮೈಸೂರಿನ ರಕ್ತದಾನಿಗಳ ಪರಿಚಯ ಇವರಿಗೆ ಇದ್ದರಿಂದ, ಇವರೆಲ್ಲರೊಂದಿಗೂ ಮಾತನಾಡಿ ಮೈಸೂರಿನ ಆಸರೆ ಪ್ರಭು, ಶೇಖರ್, ಮಡಿಕೇರಿಯ ಉನೈಸ್, ಸಮೀರ್, ಸುಳ್ಯ ಹಾಗೂ ಮಂಗಳೂರು ಭಾಗದಲ್ಲಿ ಸಕ್ರಿಯವಾಗಿರುವ ‘ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ’ದ ಪ್ರತಿನಿಧಿಗಳಾದಂತಹ ಇಫಾಝ್ ಬನ್ನೂರು, ಮನ್ಸೂರ್ ಮಂಗಳೂರು ಇವರನ್ನೊಳಗೊಂಡ ಗ್ರೂಪ್ ರಚಿಸಿದರು.
ಮಡಿಕೇರಿಯಲ್ಲಿ ರಕ್ತದಾನದ ಮಹತ್ವವನ್ನು ಸಾರುವ ಜಾಥಾ ಹಾಗೂ ಭಿತ್ತಿಪತ್ರವನ್ನು ಹಂಚುವ ಕಾರ್ಯ ಕೂಡ ನಡೆದಿದೆ. ಕೊಡಗು ಬ್ಲಡ್ ಡೋನರ್ಸ್ ಈಗ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗದೆ ಸಂಸ್ಥೆಯಾಗಿ ಹೊರಹೊಮ್ಮಿದೆ. ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷರಾಗಿ ವಿನು ಮಡಿಕೇರಿ, ಉಪಾಧ್ಯಕ್ಷರು- ಉನೈಸ್ ಮಡಿಕೇರಿ, ಪ್ರಧಾನ ಕಾರ್ಯದರ್ಶಿ- ಮೈಕಲ್ ವೇಗಸ್ ಮಡಿಕೇರಿ, ಕಾರ್ಯದರ್ಶಿ- ಸುಕುಮಾರ ಹಾಕತ್ತೂರು, ಸಂಘಟನೆ ಕಾರ್ಯದರ್ಶಿ- ಸಮೀರ್ ಕಾರ್ಯನಿರ್ವಹಿಸುತ್ತಿದ್ದಾರೆ.
-ವಿಘ್ನೇಶ್ ಎಂ. ಭೂತನಕಾಡು