
ಚಿಕ್ಕಬಳ್ಳಾಪುರ(ಅ.15): ಮಂತ್ರವಾದಿಯೊಬ್ಬ ಕೊಟ್ಟ ನಾಟಿ ಔಷಧಿ ಸೇವಿಸಿ ಬಾಲಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ಶನಿವಾರ ನಡೆದಿದೆ. ಔಷಧಿ ಸೇವಿಸಿದ ಬಾಲಕನ ತಂದೆ ಹಾಗೂ ಸಹೋದರಿಯನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಲ್ಲಗುಟ್ಟಪಾಳ್ಯ ಗ್ರಾಮದ ಶಶಿಕಲಾ, ಶ್ರೀನಿವಾಸ್ ದಂಪತಿ ಪುತ್ರ ವೇದೇಶ್ (7) ಮೃತ ಬಾಲಕ. ಮಗು ನಾಟಿ ಔಷಧಿ ಕಹಿ ಎಂದು ಕುಡಿಯಲು ಹಿಂದೇಟು ಹಾಕಿದ್ದಾಗ ತಂದೆ ತಾನು ಸ್ವಲ್ಪ ಕುಡಿದು ಮಗುವಿಗೆ ನಂತರ ಕುಡಿಸಿದ್ದಾನೆ. ಇದರಿಂದ ತಂದೆ ಶ್ರೀನಿವಾಸ್ ಸಹ ಅಸ್ವಸ್ಥನಾಗಿದ್ದಾನೆ. ಅಲ್ಲದೇ ಆತನ ಪುತ್ರಿ ವೈಶಾಲಿಗೂ ಸಹ ದಪ್ಪ ಆಗಲು ಬೇರೊಂದು ಔಷಧಿಯನ್ನು ನೀಡಲಾಗಿದೆ. ಇದರಿಂದ ಆಕೆ ಸಹ ಅಸ್ವಸ್ಥಳಾಗಿದ್ದಾಳೆ. ಅಸ್ವಸ್ಥರಾಗಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
Kolar : ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ಬಾಲಕ ವೇದೇಶ್‍ಗೆ ದೇಹದ ಮೇಲೆ ಗುಳ್ಳೆಗಳಾಗಿದ್ದವು. ಇದಕ್ಕೆ ಭೋಯಿನಹಳ್ಳಿಯ ಸತ್ಯನಾರಾಯಣ ಎಂಬ ಮಂತ್ರವಾದಿಯ ಬಳಿ ಔಷಧಿ ಪಡೆದಿದ್ದರು. ಔಷಧಿ ಕುಡಿದ 15 ನಿಮಿಷದಲ್ಲಿ ಬಾಲಕ ತೀವ್ರ ಅಸ್ವಸ್ಥನಾಗಿದ್ದಾನೆ. ಬಾಲಕನ ಸ್ಥಿತಿ ತೀರಾ ಹದಗೆಟ್ಟಾಗ ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕ ವೇದೇಶ್ ಪರೀಕ್ಷ ಮಾಡಿದ ವೈದ್ಯರು ಕರೆತರುವ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಗೆ ಬಾಲಕನ ಪೋಷಕರು ದೂರು ನೀಡಿದ್ದಾರೆ.