ಗಾಯಾಳುಗಳಿಗೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಬಳಿ ನಡೆದ ಘಟನೆ| ಲಾರಿಯ ಹಿಂಬದಿಗೆ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದರಿಂದ ನಡೆದ ದುರ್ಘಟನೆ| ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಕೂಡ್ಲಿಗಿ(ನ.23): ಕೂಲಿ ಕೆಲಸಕ್ಕೆಂದು ಕಾರಿನಲ್ಲಿ ಕಲಬುರಗಿಯಿಂದ ಬೆಂಗಳೂರು ಕಡೆ ಹೋಗುತ್ತಿರುವಾಗ ಕೂಡ್ಲಿಗಿ ಹೊರವಲಯದ ಗೌಡ್ರು ಪೆಟ್ರೋಲ್ ಬಂಕ್ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಫ್ಲೈಓವರ್‌ನಲ್ಲಿ ಮುಂದೆ ಹೋಗುತ್ತಿದ್ದ ಲಾರಿಯ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಭಾನುವಾರ ನಸುಕಿನ ಜಾವ 4 ಗಂಟೆಗೆ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾ ಗ್ರಾಮದ ಕಬ್ಬಲಿಗ ಸಮುದಾಯದ ಮಹದೇವಮ್ಮ (52), ಮಲ್ಲಪ್ಪ (40), ಶರಣಪ್ಪ (15) ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ಕಳುಹಿಸಲಾಗಿದ್ದು ವೀರೇಶ (17), ಸಾಬಮ್ಮ (19), ಮರಿಯಮ್ಮ (35) ಹಾಗೂ ಕಾರಿನ ಚಾಲಕ ಸಿದ್ದು (22) ಗಾಯಗೊಂಡು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
'ಆನಂದ ಸಿಂಗ್‌ಗಾಗಿ ಬಳ್ಳಾರಿ ಇಬ್ಭಾಗ'
ಲಾರಿಯ ಹಿಂಬದಿಗೆ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಸಿದ್ದರಿಂದ ಈ ಅಪಘಾತ ಸಂಭವಿಸಿದ್ದು ಘಟನಾ ಸ್ಥಳಕ್ಕೆ ಹೈವೇ ಪೆಟ್ರೋಲಿಂಗ್ ಹಾಗೂ ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಕಾರಿನಲ್ಲಿದ್ದ 7 ಜನರಲ್ಲಿ ಹೆಚ್ಚಿನ ಗಾಯವಾದ ಮೂವರನ್ನು ಬಳ್ಳಾರಿಗೆ ಕಳುಹಿಸಲಾಗಿದ್ದು ಉಳಿದ ನಾಲ್ವರು ಕೂಡ್ಲಿಗಿ ಆಸ್ಪತ್ರೇಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.