ಧಾರವಾಡ: ಗೃಹಜ್ಯೋತಿ ಯೋಜನೆಗೆ ಈವರೆಗೆ 7 ಲಕ್ಷ ಅರ್ಜಿ!

By Kannadaprabha News  |  First Published Jun 24, 2023, 2:30 PM IST

  ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ‘ಗೃಹಜ್ಯೋತಿ’ ಗ್ಯಾರಂಟಿ ಯೋಜನೆಗೆ ಸರ್ವರ್‌ ಕಾಟದ ಮಧ್ಯೆಯೇ ಹೆಸ್ಕಾಂ ವ್ಯಾಪ್ತಿಯಲ್ಲಿ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಅರ್ಜಿಗಳು ನೋಂದಣಿಯಾಗಿವೆ.


ಶಿವಾನಂದ ಗೊಂಬಿ

ಹುಬ್ಬಳ್ಳಿ j(ಜೂ.24) :  ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ‘ಗೃಹಜ್ಯೋತಿ’ ಗ್ಯಾರಂಟಿ ಯೋಜನೆಗೆ ಸರ್ವರ್‌ ಕಾಟದ ಮಧ್ಯೆಯೇ ಹೆಸ್ಕಾಂ ವ್ಯಾಪ್ತಿಯಲ್ಲಿ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಅರ್ಜಿಗಳು ನೋಂದಣಿಯಾಗಿವೆ.

Tap to resize

Latest Videos

ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೂ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಸರ್ವರ್‌, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಲೇ ಅರ್ಜಿ ಗುಜರಾಯಿಸುತ್ತಿದ್ದಾರೆ. ಸರ್ವರ್‌ ಅನ್ನು ಇನ್ನಷ್ಟುಸದೃಢವನ್ನಾಗಿಸಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ.

ಕಾಂಗ್ರೆಸ್‌ ಪಕ್ಷ ಚುನಾವಣೆಗೂ ಮುನ್ನ ಘೋಷಿಸಿರುವಂತೆ ಪ್ರತಿಮನೆಗೂ 200 ಯುನಿಟ್‌ ವಿದ್ಯುತ್‌ ಉಚಿತ ಪೂರೈಕೆಗೆ ಅರ್ಜಿ ಸಲ್ಲಿಕೆ ಬಲು ಜೋರಿನಿಂದ ನಡೆಯುತ್ತಿದೆ. ಆದರೆ, ಎಲ್ಲೆಡೆ ಸರ್ವರ್‌ ಕಿರಿಕಿರಿ ಜನರನ್ನು ಹೈರಾಣು ಮಾಡುತ್ತಿದೆ. ಸಿಬ್ಬಂದಿ ಹಾಗೂ ಸಾರ್ವಜನಿಕರು ಸರ್ವರ್‌ ಕಾಟದಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಗೊಣಗಾಟ ನಡೆಯುತ್ತಲೇ ಇದೆ.

ಧಾರವಾಡ: ಬಸ್‌ ನಿಲ್ದಾಣಗಳಲ್ಲಿನ ಸೌಲಭ್ಯಗಳಿಗಿಲ್ಲ‘ಶಕ್ತಿ’!

ಹೇಗಾದರೂ ಮಾಡಿ ಜನರಿಗೆ ಈ ಗೃಹ ಜ್ಯೋತಿಯ ಅರ್ಜಿ ಗುಜರಾಯಿಸುವ ಕೆಲಸ ಸರಳಗೊಳಿಸಬೇಕು ಎಂದು ಹೆಸ್ಕಾಂ ಕೂಡ ಹರಸಾಹಸ ಪಡುತ್ತಿದೆ. ಕರ್ನಾಟಕ ಒನ್‌, ಗ್ರಾಮ ಒನ್‌ನಲ್ಲಿ ಇದರ ಕೌಂಟರ್‌ ಇವೆ. ಜನರ ಅನುಕೂಲಕ್ಕಾಗಿ ಹೆಸ್ಕಾಂ ತನ್ನ ಕಚೇರಿಗಳಲ್ಲೆಲ್ಲ ಪ್ರತ್ಯೇಕವಾಗಿ ಕೌಂಟರ್‌ಗಳನ್ನು ತೆರೆದಿದೆ. ಇದೀಗ ಎಲ್ಲೆಡೆ ಬಲು ಜೋರಿನಿಂದಲೇ ಅರ್ಜಿ ಸಲ್ಲಿಸುವ ಕೆಲಸ ನಡೆದಿದೆ.

ಕಳೆದ ಐದು ದಿನಗಳಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಅಪ್ಲೋಡ್‌ ಮಾಡಿಸಲು ಜನರು ಅಲೆದಾಡಿ ಹೈರಾಣಾಗಿದ್ದಾರೆ. ವೃದ್ಧರು, ಮಹಿಳೆಯರು, ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು ಸರ್ವರ್‌ಗಾಗಿ ಕಾದು ಕಾದು ಸುಸ್ತಾಗುತ್ತಿದ್ದಾರೆ. ಸರ್ಕಾರದ ಈ ಯೋಜನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವುದುಂಟು. ಬಹಳಷ್ಟುಜನರು ನಾಳೆ ಬಂದರಾಯ್ತು ಎಂದು ಮನೆಗಳಿಗೆ ತೆರಳಿದರೆ, ಮನೆ ಕೆಲಸ ಬಿಟ್ಟು ಮತ್ತೆಲ್ಲಿ ನಾಳೆ ಬರುವುದು ಎಂದು ಸಂಜೆವರೆಗೂ ಕಾಯುತ್ತಾ ಸರತಿ ಸಾಲಿನಲ್ಲೇ ನಿಲ್ಲುತ್ತಿರುವ ದೃಶ್ಯಗಳು ಗೋಚರವಾಗುತ್ತಿವೆ.

ಕೌಂಟರ್‌ ಎಷ್ಟು?

ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಹೀಗೆ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದೊಡ್ಡ ನಿಗಮ ಹೆಸ್ಕಾಂ. ಹೆಸ್ಕಾಂ 443, ಗ್ರಾಮ್‌ ಒನ್‌ 1783, ಕರ್ನಾಟಕ ಒನ್‌ 195 ಹೀಗೆ ಬರೋಬ್ಬರಿ 2421 ಕೌಂಟರ್‌ಗಳಲ್ಲಿ ಗೃಹಜ್ಯೋತಿಯ ಅರ್ಜಿ ಪಡೆಯಲಾಗುತ್ತಿದೆ. ಎಲ್ಲೆಡೆ ಸರ್ವರ್‌ ಡೌನ್‌ ಎಂಬ ಮಾಮೂಲಿ ಡೈಲಾಗ್‌ ಕೇಳಿ ಬರುತ್ತಿದೆ. ಇದರ ನಡುವೆಯೇ ಈ ವರೆಗೆ ಬರೋಬ್ಬರಿ 706059 ಅರ್ಜಿಗಳ ಸಲ್ಲಿಕೆಯಾಗಿರುವುದು ವಿಶೇಷ.

ಕಳೆದ ಐದು ದಿನಗಳಿಂದ ಶುರುವಾಗಿರುವ ಅರ್ಜಿ ಸಲ್ಲಿಕೆಗೆ ಮೊದಲ ಮೂರು ದಿನಗಳ ಸರ್ವರ್‌ ಕಾಟ ವಿಪರೀತವಾಗಿತ್ತು. ಇದೀಗ ಕೊಂಚ ಸುಧಾರಣೆ ಕಂಡಿದೆ. ಜತೆಗೆ ಹೆಸ್ಕಾಂ ಕೂಡ ಕೌಂಟರ್‌ ತೆರೆದಿರುವುದು ಅನುಕೂಲವಾದಂತಾಗಿದೆ ಎಂಬುದು ಸಾರ್ವಜನಿಕರ ಅಂಬೋಣ.

ಗೃಹಜ್ಯೋತಿಗೆ ಅರ್ಜಿ ಸಲ್ಲಿಕೆಗೆ ಯಾವುದೇ ಬಗೆಯ ಕೊನೆಯ ದಿನಾಂಕ ನಿಗದಿಪಡಿಸಿಲ್ಲ. ಸಾರ್ವಜನಿಕರು ಗಡಿಬಿಡಿ ಮಾಡಿಕೊಳ್ಳದೇ, ನಿಧಾನವಾಗಿ ಅರ್ಜಿ ಸಲ್ಲಿಸಲು ಮುಂದಾಗಬೇಕು ಎಂಬ ಮನವಿಯನ್ನು ಹೆಸ್ಕಾಂ ಮಾಡಿಕೊಂಡಿದೆ. ಅರ್ಜಿ ಸಲ್ಲಿಸಲು ಸಮಸ್ಯೆಯಾದರೆ ಮಾಹಿತಿಗಾಗಿ 1912 ಸಹಾಯವಾಣಿ ಸಂಖ್ಯೆಗೆ ಕಾಲ್‌ ಮಾಡುವಂತೆ ಕೋರಿದೆ.

ಒಟ್ಟಿನಲ್ಲಿ ಸರ್ವರ್‌ ಕಾಟದ ಮಧ್ಯೆಯೇ ಅರ್ಜಿ ಸಲ್ಲಿಕೆ ಕೂಡ ತಡೆ ಉಂಟಾಗುತ್ತಿಲ್ಲ. ಆದರೂ ತಾಂತ್ರಿಕತೆ ಬಹಳ ಸ್ಲೋ ಆಗುತ್ತಿದೆ. ಇದನ್ನು ಇನ್ನಷ್ಟುಸ್ಪೀಡ್‌ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

 

ದೋಷಯುಕ್ತ ವಿಸ್ಕಿ ಮಾರಾಟ: ಪಿಂಟೋ ವೈನ್‌ಲ್ಯಾಂಡ್‌ಗೆ ಲಕ್ಷ ರು. ದಂಡ

ಈವರೆಗೆ ನೋಂದಣಿ ಆಗಿರುವ ಅರ್ಜಿ- 706059

ಎಲ್ಲೆಲ್ಲಿ ಎಷ್ಟೆಷ್ಟುಕೌಂಟರ್‌

ಜಿಲ್ಲೆ ಹೆಸ್ಕಾಂ ಗ್ರಾಮ ಒನ್‌ ಕರ್ನಾಟಕ ಒನ್‌ ಒಟ್ಟು

  • ಧಾರವಾಡ 33 175 31 239
  • ಗದಗ 25 145 5 175
  • ಹಾವೇರಿ 58 232 20 310
  • ಉತ್ತರ ಕನ್ನಡ 66 79 22 167
  • ಬೆಳಗಾವಿ 121 693 69 883
  • ವಿಜಯಪುರ 63 239 22 319
  • ಬಾಗಲಕೋಟೆ 77 220 22 319
  • ಒಟ್ಟು 443 1783 195 2421

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಆದರೆ ಪದೇ ಪದೇ ಸರ್ವರ್‌ ಸಮಸ್ಯೆಯಾಗುತ್ತಿದೆ. 3 ದಿನದ ಹಿಂದೆ ಅರ್ಜಿ ಸಲ್ಲಿಸಲು ಬಂದಿದ್ದೆ. ಆದರೆ ಆಗ ಸಾಧ್ಯವಾಗಿರಲಿಲ್ಲ. ಆದರೆ ಇವತ್ತು ಸರ್ವರ್‌ ಕೊಂಚ ಉತ್ತಮವಾಗಿದೆ. ಇವತ್ತು ಸಲ್ಲಿಕೆಯಾಗಿದೆ. ಸರ್ವರ್‌ನ್ನು ಇನ್ನಷ್ಟುಸದೃಢಗೊಳಿಸುವ ಕೆಲಸವಾಗಬೇಕು

ರಮೇಶ ಪಾಟೀಲ, ಹೆಸ್ಕಾಂ ಗ್ರಾಹಕ

click me!