ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಬಸ್ ನಿಲ್ದಾಣಗಳಲ್ಲಿನ ಪರಿಸ್ಥಿತಿ ಏನಿದೆ? ಪ್ರಯಾಣಿಕರಿಗೆ ಸರಿಯಾದ ಸೌಲಭ್ಯಗಳು ಎಲ್ಲ ಬಸ್ ನಿಲ್ದಾಣಗಳಲ್ಲಿ ಇವೆಯೋ? ಎಂಬುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನವನ್ನು ‘ಕನ್ನಡಪ್ರಭ’ ಇಂದಿನಿಂದ ಸರಣಿ ಲೇಖನದ ಮೂಲಕ ಮಾಡಲಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಜೂ.24) ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಸರ್ಕಾರ ರಚನೆಯಾದ ಬಳಿಕ ‘ಶಕ್ತಿ’ ಯೋಜನೆಯನ್ನು ಜಾರಿಗೊಳಿಸಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆಲ್ಲ ರಾಜ್ಯಾದ್ಯಂತ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಶುರುವಾಗಿದೆ. ಬಸ್‌ಗಳೆಲ್ಲ ಫುಲ್ ರಶ್ ಆಗುತ್ತಿವೆ. ಇದರಿಂದಾಗಿ ಸಹಜವಾಗಿ ನಿಲ್ದಾಣಗಳೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಆದರೆ, ನಿಲ್ದಾಣಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ.
ನಿಲ್ದಾಣಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಆಸನಗಳ ವ್ಯವಸ್ಥೆ ಇರಲೇಬೇಕು. ಪ್ರಯಾಣಿಕರು ತಮ್ಮ ನೈಸರ್ಗಿಕ ಕರೆಗೆ ಎಲ್ಲಿಗೆ ಹೋಗಬೇಕು? ಅದಕ್ಕಾಗಿಯೇ ಪ್ರತಿ ನಿಲ್ದಾಣಗಳಲ್ಲೂ ಶೌಚಾಲಯಗಳನ್ನು ಮಾಡಲಾಗುತ್ತಿದೆ. ಆದರೆ ನಿರ್ವಹಣೆ ಕೊರತೆಯಿಂದಾಗಿ ಎಲ್ಲ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಶೌಚಾಲಯದೊಳಗೆ ಹೋಗಲು ಮನಸು ಬಾರದಂತಹ ಪರಿಸ್ಥಿತಿ ನಿಲ್ದಾಣಗಳಲ್ಲಿದೆ ಎಂಬುದಕ್ಕೆ ಹುಬ್ಬಳ್ಳಿಯಲ್ಲಿನ ನಿಲ್ದಾಣಗಳೇ ಸಾಕ್ಷಿಯಾಗಿವೆ.
ಶಕ್ತಿ ಯೋಜನೆ: ಚಿಕ್ಕಮಗಳೂರಿನ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ!
ಎರಡೆರಡು ನಿಲ್ದಾಣ;
ರಾಜ್ಯದ ಎರಡನೆಯ ದೊಡ್ಡ ನಗರ ಹುಬ್ಬಳ್ಳಿ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಇರುವುದು ಇಲ್ಲಿ. ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳ ಕಾರ್ಯಸ್ಥಾನ ಇಲ್ಲೇ. ದೊಡ್ಡ ಸಿಟಿ ಆಗಿರುವ ಕಾರಣ ಇಲ್ಲಿ ಗೋಕುಲ ರಸ್ತೆ ಹಾಗೂ ಹೊಸೂರು ಹೀಗೆ ಎರಡು ನಿಲ್ದಾಣಗಳಿವೆ. ಗೋಕುಲ ರಸ್ತೆ ಬಸ್ ನಿಲ್ದಾಣ ಇದನ್ನು ಹೊಸ ಬಸ್ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಹಾಗೆ ನೋಡಿದರೆ ಈ ನಿಲ್ದಾಣ ನಿರ್ಮಿಸಿ 20 ವರ್ಷಗಳಿಗೂ ಅಧಿಕ ಕಾಲವೇ ಗತಿಸಿದರೂ ಈಗಲೂ ಇದರ ಹೆಸರು ಮಾತ್ರ ಹೊಸ ಬಸ್ ನಿಲ್ದಾಣ ಎಂದೇ ಇದೆ. ಆದರೆ, ಸೌಲಭ್ಯ ವಿಷಯಕ್ಕೆ ಬಂದರೆ ಅತ್ಯಂತ ಹಳೆಯ ನಿಲ್ದಾಣ ಎಂದೇ ಹೇಳಬೇಕು. ಇಲ್ಲಿ ಎರಡು ಶೌಚಾಲಯ ಇವೆ. ಆದರೆ ಸ್ವಚ್ಛತೆ ಕೊರತೆಯಿಂದಾಗಿ ಬಹುತೇಕ ಪುರುಷರೆಲ್ಲ ತಮ್ಮ ನೈಸರ್ಗಿಕ ಕರೆಗೆ ನಿಲ್ದಾಣದ ಒಂದು ಬದಿಯ ಖುಲ್ಲಾ ಜಾಗೆಯನ್ನೇ ಆಶ್ರಯಿಸುತ್ತಾರೆ.
ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ಪೂರ್ಣವಾಗಿ ಬಸ್ ನಿಲ್ದಾಣದ ಒಂದು ಸುತ್ತುಹೊಡೆದರೆ ಸಾಕು ಎಲ್ಲೆಡೆ ಬರೀ ಗಲೀಜು, ಉಗುಳಿದ ಕುರುಹುಗಳೇ ಕಾಣಿಸುತ್ತದೆ. ಇಲ್ಲಿ ಉಗುಳಿದರೆ ದಂಡ ವಿಧಿಸಲಾಗುತ್ತದೆ ಎಂಬ ನಾಮಫಲಕ ಕಣ್ಣಿಗೆ ರಾಚುತ್ತದೆ. ಆದರೆ, ಅದರ ಮೇಲೆ ಉಗುಳಿದರೂ ಯಾರೊಬ್ಬರೂ ಈವರೆಗೂ ದಂಡ ವಿಧಿಸಿಲ್ಲವಂತೆ.
ಇನ್ನು ಹೊಸೂರ ಬಸ್ ನಿಲ್ದಾಣವನ್ನು ಕಳೆದ ನಾಲ್ಕೈದು ವರ್ಷಗಳ ಹಿಂದೆಯಷ್ಟೇ ನಿರ್ಮಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 3 ಕಡೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಒಂದು ಬಾಗಿಲು ಮುಚ್ಚಿ ವರ್ಷಗಳೇ ಉರುಳಿವೆ. ಇನ್ನುಳಿದ ಎರಡು ಶೌಚಾಲಯಗಳಲ್ಲಿ ನಿರ್ವಹಣೆ, ಶುಚಿತ್ವದ ಕೊರತೆ ಎದ್ದು ಕಾಣುತ್ತಿರುತ್ತದೆ. ಸಿಂಕ್‌ಗಳಲ್ಲಿನ ನಲ್ಲಿಗಳೆಲ್ಲ ಕಿತ್ತು ಹೋಗಿವೆ. ಮಹಿಳೆಯರ ಶೌಚಾಲಯಗಳ ಬಾಗಿಲು ಕೂಡ ಕಿತ್ತುಕೊಂಡು ಹೋಗಿವೆ. ಅದ್ಹೇಗೆ ಈ ಶೌಚಾಲಯ ಬಳಸುವುದು ಎನ್ನುವುದು ಪ್ರಯಾಣಿಕರ ಪ್ರಶ್ನೆ.
ಪುರುಷರೇನೂ ಗೋಡೆಯೋ, ಗಿಡವೋ ಖುಲ್ಲಾ ಜಾಗೆಯನ್ನು ಆಶ್ರಯಿಸುತ್ತಾರೆ. ಆದರೆ ಮಹಿಳಾ ಪ್ರಯಾಣಿಕರು ಏನು ಮಾಡಬೇಕು? ಎಂಬ ಪ್ರಶ್ನೆಗೆ ನಿಲ್ದಾಣದಲ್ಲಿನ ಸಿಬ್ಬಂದಿಯ ಬಳಿ ಉತ್ತರವಿಲ್ಲ. ಈಗಲಂತೂ ಶಕ್ತಿ ಯೋಜನೆಯಿಂದಾಗಿ ನಿಲ್ದಾಣವೆಲ್ಲ ಮಹಿಳೆಯರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಸೌಲಭ್ಯಗಳ ಕೊರತೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಸ್ಥಾನದಲ್ಲಿರುವ ನಿಲ್ದಾಣಗಳಲ್ಲಿನ ಸೌಲಭ್ಯ ಸುಧಾರಣೆಗೆ ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಅಧಿಕಾರಿಗಳ ತಂಡ ಕ್ರಮ ಕೈಗೊಳ್ಳಬೇಕು ಎಂಬ ಒಕ್ಕೊರಲಿನ ಆಗ್ರಹ ಸಾರ್ವಜನಿಕರದ್ದು.
ವೀಕೆಂಡ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಹೆಚ್ಚುವರಿ ಬಸ್ ಬಿಡುವಂತೆ ಸಾರಿಗೆ ಸಚಿವರು ಸೂಚನೆ
ಶೌಚಾಲಯಗಳ ನಿರ್ವಹಣೆ ಸರಿಯಿಲ್ಲ. ಗಬ್ಬೆದ್ದು ನಾರುತ್ತವೆ. ಈ ಬಗ್ಗೆ ಪ್ರಶ್ನಿಸಿದರೆ ಶೌಚಾಲಯ ನಿರ್ವಹಣೆ ಮಾಡುವವರು ನಮ್ಮನ್ನೇ ದಬಾಯಿಸುತ್ತಾರೆ. ಅಧಿಕಾರಿಗಳು ಗಮನ ಹರಿಸಬೇಕು. ಉಚಿತ ಬಸ್ ಸೇವೆ ನೀಡಿದೆ. ಅದಕ್ಕೆ ತಕ್ಕಂತೆ ಇಲ್ಲಿಗೆ ಬರುವ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳನ್ನಾದರೂ ಕಲ್ಪಿಸಬೇಕು.
- ರಶ್ಮಿ ಪಾಟೀಲ, ಪ್ರಯಾಣಿಕರು
ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ದಾಹವಾದರೆ ಕಡ್ಡಾಯವಾಗಿ ಬಾಟಲ್ ನೀರನ್ನೇ ತೆಗೆದುಕೊಳ್ಳಬೇಕು. ಅರವಟಿಗೆ ವ್ಯವಸ್ಥೆ ಮಾಡುವ ಜ್ಞಾನ ಕೂಡ ಇಲ್ಲಿನ ಅಧಿಕಾರಿಗಳಿಗೆ ಇಲ್ಲ. ನಮ್ಮಂತಹ ಬಡವರು ಏನು ಮಾಡಬೇಕು.
ಮಲ್ಲವ್ವ ಜಾಡರ್, ಪ್ರಯಾಣಿಕರು