ಕಲಬುರಗಿ ಬಳಿ ಭೀಕರ ಅಪಘಾತ: ಹೊತ್ತಿ ಉರಿದ ಬಸ್, ಮಗು ಸೇರಿ ಏಳು ಮಂದಿ ಸಜೀವ ದಹನ

Published : Jun 03, 2022, 10:26 AM ISTUpdated : Jun 03, 2022, 03:16 PM IST
ಕಲಬುರಗಿ ಬಳಿ ಭೀಕರ ಅಪಘಾತ: ಹೊತ್ತಿ ಉರಿದ ಬಸ್, ಮಗು ಸೇರಿ ಏಳು ಮಂದಿ ಸಜೀವ ದಹನ

ಸಾರಾಂಶ

*  ಕಲಬುರಗಿ ಜಿಲ್ಲೆಯ ಕಮಲಾಪುರ ಬಳಿ ನಡೆದ ಘಟನೆ *  ಬಸ್‌ನಲ್ಲಿದ್ದ  ಹದಿನೈದು ಜನ ಹರಸಾಹಸ ಪಟ್ಟು ಹೊರಬರುವಲ್ಲಿ ಯಶಸ್ವಿ *  ಗಾಯಾಳುಳಿಗೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ 

ಕಲಬುರಗಿ(ಜೂ.03):  ಖಾಸಗಿ ಬಸ್ ಮತ್ತು 407 ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಏಳು ಮಂದಿ ಸಜೀವವಾಗಿ ದಹನವಾದ ಘಟನೆ ಇಂದು(ಶುಕ್ರವಾರ) ಜಿಲ್ಲೆಯ ಕಮಲಾಪುರ ಬಳಿ ನಡೆದಿದೆ. 

ಅಪಘಾತದ ತೀವ್ರತೆಗೆ ಬಸ್, ರಸ್ತೆ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದು ಸೇತುವೆ ಕೆಳಗಿನ ಕಂದಕಕ್ಕೆ ಉರುಳಿ ಬಿದ್ದಿದೆ. ಡೀಸೆಲ್ ಟ್ಯಾಂಕ್ ಸೋರಿಕೆಯಾದ ಪರಿಣಾಮ ಬಸ್ಸಿಗೆ ಬೆಂಕಿ ತಗುಲಿದೆ. ಅಪಘಾತದ ನಂತರ ಬಸ್‌ನಲ್ಲಿದ್ದ  ಹದಿನೈದು ಜನ ಹರಸಾಹಸಪಟ್ಟು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಗು ಸಹಿತ ಏಳು ಜನ ದಹನ

ಅಪಘಾತದ ತೀವ್ರತೆಯಿಂದ ತೀವ್ರ ಗಾಯಗೊಂಡು ಬಸ್ಸಿನ ಅಡಿಯಲ್ಲಿಯೇ ಸಿಲುಕಿರುವವರು ಸಜೀವವಾಗಿ ದಹನವಾಗಿದ್ದಾರೆ. ಒಂದು ಮಗು ಸೇರಿದಂತೆ ಏಳು ಜನರ ಶವಗಳು ಬಸ್ಸಿನ ಅಡಿ ಸುಟ್ಟು ಕರಕಲಾಗಿವೆ. 

ಬೆಳಗಾವಿ: ಪತ್ನಿ ಸೀಮಂತ ಕಾರ್ಯಕ್ಕೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಕೆಂಡವಾದ ಬಸ್

ಅಪಘಾತ ಸಂಭವಿಸಿ ಮೂರು ಗಂಟೆ ಕಳೆದರೂ ಬಸ್ ಇನ್ನು ಕುದಿಯುತ್ತಿದೆ. ಅಗ್ನಿಶಾಮಕದಳದವರು ಕಾರ್ಯಾಚರಣೆ ನಡೆಸಿ ಬಸ್ ಗೆ ತಗುಲಿರುವ ಬೆಂಕಿ ಆರಿಸಿದ್ದಾರೆ. ಅದಾಗಿಯೂ ಬಸ್ ಇನ್ನು ಕೊತಕೊತ ಕುದಿಯುತ್ತಿದೆ. ಬಸ್ ತಣ್ಣಗಾದ ನಂತರವೇ ಸಿಬ್ಬಂದಿಗಳು ಒಳಗಡೆ ಪ್ರವೇಶಿಸಲು ಸಾಧ್ಯ ವಾಗುತ್ತದೆ. ಈ ಬಸ್  ಸೇರಿದಂತೆ ಒಳಗಿರುವವರೂ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಒಂದು ಮಗು ಸೇರಿದಂತೆ ಏಳು ಜನ ಸುಟ್ಟು ಕರಕಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಈ ಶವಗಳು ಗೋಚರಿಸುತ್ತಿವೆ. 

ಹೈದ್ರಾಬಾದ್ ನಿವಾಸಿಗಳು

ಇವರೆಲ್ಲಾ ಹೈದರಾಬಾದ್ ನಿವಾಸಿಗಳಾಗಿದ್ದು, 2- 3 ಕುಟುಂಬದವರು ಸೇರಿ ಆರೆಂಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಖಾಸಗಿ ಬಸ್ ಮುಗಿಸಿಕೊಂಡು ಟ್ರೀಪಗಾಗಿ ಗೋವಾಕ್ಕೆ ತೆರಳಿದ್ದರು ಎನ್ನಲಾಗಿದೆ. ಹೈದ್ರಾಬಾದನ ಇಂಜಿನಿಯರ್ ಅರ್ಜುನ ಕುಮಾರ ಎನ್ನುವವರ ನಾಲ್ಕು ವರ್ಷದ ಮಗುವಿನ ಹುಟ್ಟು ಹಬ್ಬ ನಿಮಿತ್ಯವಾಗಿ ಇವರೆಲ್ಲಾ ಹೈದ್ರಾಬಾದನಿಂದ ಗೋವಾಗೆ ತೆರಳಿದ್ದರು. 

ನಿನ್ನೆ ಹುಟ್ಟು ಹಬ್ಬದ ಸಂಭ್ರಮ ಇಂದು ಸಮಾಧಿ

ನಿನ್ನೆಯಷ್ಟೆ ಇವರೆಲ್ಲಾ ಗೋವಾದಲ್ಲಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರು. ಮಗುವಿನ ಹುಟ್ಟು ಹಬ್ಬದ ಸಂಭ್ರಮ ಮುಗಿಸಿಕೊಂಡು ಕಲಬುರಗಿ ಮಾರ್ಗವಾಗಿ ಹೈದ್ರಾಬಾದಗೆ ತೆರಳುತ್ತಿರುವಾಗ ಕಮಲಾಪೂರ ಬಳಿ ಈ ಅಪಘಾತ ಸಂಭವಿಸಿದೆ.
ಜೀವದ ಹಂಗು ತೊರೆದು ರಕ್ಷಿಸಿದ ಯುವಕ

ಅಪಘಾತವಾಗಿ ಬಸ್ ಹೊತ್ತಿ ಉರಿಯುತ್ತಿರುವಾಗ ಅದರ ಫೋಟೋ ತೆಗೆಯುತ್ತಾ ನಿಲ್ಲುವವರೇ ಹೆಚ್ಚು. ಆದ್ರೆ ಈ ಅಪಘಾತದ ಸ್ಥಳಕ್ಕೆ ಮೊದಲು ಆಗಮಿಸಿದ ಗಂಗಾವತಿ ಮೂಲದ ರಾಜಶೇಖರ ಮಾಡಿದ್ದು ಹಾಗಲ್ಲ. ಆತ ಬಂದಾಗ ಬಸ್ ಗೆ ಬೆಂಕಿ ತಗುಲಿಕೊಂಡಿತ್ತು. ಒಳಗಿನಿಂದ ನರಳಾಟ, ಚೀರಾಟ ಜೋರಾಗಿ ಕೇಳಿಸುತ್ತಿತ್ತು. ಆಗ ಈ ರಾಜಶೇಖರ ಹೆದರದೇ ಬೆಂಕಿ ಹೊತ್ತಿಕೊಂಡಿರುವ ಬಸ್ ಬಳಿ ತೆರಳಿ ಬಸ್ ನ ಕಿಟಕಿಯ ಗಾಜು ಒಡೆದು ಒಳಗಡೆ ಇರುವವರನ್ನು ರಕ್ಷಿಸುವ ಕೆಲಸ ಮಾಡಿದ. ಮೂವರನ್ನು ಹೊರಗೆಳೆದು ರಕ್ಷಿಸಿದ. ಇದೇ ವೇಳೆ ಕೆಲವರು ತಾನಾಗಿಯೇ ಹೊರ ಬಂದು ಪ್ರಾಣ ಉಳಿಸಿಕೊಂಡರು. 

ಕೆಲವೇ ನಿಮಿಷದಲ್ಲಿ ವ್ಯಾಪಿಸಿದ ಜ್ವಾಲೆ

ಈತ ಒಳಗಡೆ ಹೋಗಿ ಇನ್ನಷ್ಟು ಜನರನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿರುವ ಹೊತ್ತಲೇ ಬೆಂಕಿಯ ಜ್ವಾಲೇ ದಿಡೀರನೇ ದೊಡ್ಡಗಾಗಿ ವ್ಯಾಪಿಸಿತು. ಬಸ್ ನ ಸಮೀಪ ನಿಲ್ಲಲೂ ಆಗದ ಸ್ಥಿತಿ ಕೆಲವೇ ನಿಮಿಷಗಳಲ್ಲಿ ನಡೆದು ಹೋಯಿತು. ನೋಡ ನೋಡುತ್ತಿದ್ದಂತೆಯೇ ವಿಪರೀತ ಚೀತ್ಕಾರದ ಶಬ್ದ ಕ್ಷಿಣಿಸಿ ಬಸ್ ಸಂಪೂರ್ಣ ಸುಟ್ಟು ಕರಕಲಾಯಿತು. 

ಉತ್ತರಪ್ರದೇಶ ಪ್ರವಾಸಕ್ಕೆ ತೆರಳಿದ್ದ ಬೀದರ್‌ನ 7 ಮಂದಿ ದುರ್ಮರಣ

7 ಜನ ಮಿಸ್ಸಿಂಗ್

ಈ ಬಸ್ ನಲ್ಲಿ ಒಟ್ಟು 35 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಆ ಪೈಕಿ 28 ಜನರ ಟಿಕೆಟ್ ಇಂಜಿನಿಯರ್ ಅರ್ಜುನಕುಮಾರ ಒಬ್ಬರ ಹೆಸರಿನಲ್ಲಿಯೇ ಬುಕ್ ಮಾಡಲಾಗಿದೆ. ಗಾಯಾಳುಗಳ ಪೈಕಿ 15 ಜನರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ‌. ಇನ್ನು ಕೆಲವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಪೈಕಿ ಎಲ್ಲವೂ ಪರೀಶೀಲಿಸಲಾಗಿ ಏಳು ಜನರು ಮಿಸ್ಸಿಂಗ್ ಇರುವುದು ಪೊಲೀಸ್ ಮೂಲಗಳಿಂದ ದೃಢವಾಗಿದೆ. ಬಸ್ ನ ಮುಂಭಾಗದಲ್ಲೇ ಐದು ಸುಟ್ಟು ಕರಕಲಾದ ಶವಗಳು ಸ್ಪಷ್ಟವಾಗಿ ಕಾಣುತ್ತಿದ್ದು, ಇನ್ನಿಬ್ಬರೂ ಸಹ ಒಳಗಡೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.‌

ಮಿಸ್ಸಿಂಗ್ ಆದವರ ಹೆಸರು

ಹೈದ್ರಾಬಾದನ ಇಂಜಿನಿಯರ್ ಅರ್ಜುನಕುಮಾರ (37), ಆತನ ಪತ್ನಿ  ಸರಳಾದೇವಿ (32) ಆತನ ಮಗು ಬಿವಾನ್ (4), ಅನಿತಾ ರಾಜು (40), ದೀಕ್ಷಿತ್ (9), ಶಿವಕುಮಾರ (35), ಶಿವಕುಮಾರನ ಹೆಂಡತಿ ರವಾಲಿ (30) ಇವರೆಲ್ಲಾ ಮಿಸ್ಸಿಂಗ್ ಆಗಿದ್ದು, ಬಸ್ ನಲ್ಲಿ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ. 

ಎಸ್ಪಿ ಭೇಟಿ

ಘಟನಾ ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ