ಹಾವೇರಿ: ನಿರಂತರ ಮಳೆ, ಮೂರು ದಿನಗಳಲ್ಲಿ 670 ಮನೆ ಹಾನಿ

By Kannadaprabha NewsFirst Published Aug 30, 2022, 10:58 AM IST
Highlights

ಸೋಮವಾರ ಬೆಳಗ್ಗೆ ವಿರಾಮ ನೀಡಿ, ಮಧ್ಯಾಹ್ನದ ಬಳಿಕ ಮತ್ತೆ ಶುರುವಾಗಿದೆ. ಹಾವೇರಿ, ರಾಣಿಬೆನ್ನೂರು, ಸವಣೂರು, ಹಿರೇಕೆರೂರು ಸೇರಿದಂತೆ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ.

ಹಾವೇರಿ(ಆ.30):  ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 670 ಮನೆಗಳಿಗೆ ಹಾನಿಯಾಗಿದೆ. ಭಾನುವಾರ ಸಂಜೆಯಿಂದ ಸಾಧಾರಣ, ಆಗಾಗ ಜೋರಾಗಿ ಮಳೆ ಸುರಿದು ಸೋಮವಾರ ಬೆಳಗಿನ ವರೆಗೂ ಮುಂದುವರಿದಿತ್ತು. ಸೋಮವಾರ ಬೆಳಗ್ಗೆ ವಿರಾಮ ನೀಡಿ, ಮಧ್ಯಾಹ್ನದ ಬಳಿಕ ಮತ್ತೆ ಶುರುವಾಗಿದೆ. ಹಾವೇರಿ, ರಾಣಿಬೆನ್ನೂರು, ಸವಣೂರು, ಹಿರೇಕೆರೂರು ಸೇರಿದಂತೆ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ.

ಸವಣೂರು ತಾಲೂಕಿನಲ್ಲಿ ಮಳೆಯಬ್ಬರ ಜೋರಾಗಿತ್ತು. ಸವಣೂರು ತಾಲೂಕಿನ ಅಲ್ಲೀಪುರ, ಶಿರಬಡಗಿ ಮುಂತಾದ ಗ್ರಾಮಗಳಲ್ಲಿ ಮಳೆ ಅವಾಂತರ ಸೃಷ್ಟಿಯಾಗಿದೆ. ಅಲ್ಲಿಪುರ ಗ್ರಾಮದಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿದೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮಸ್ಥರು ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದಾರೆ. ಅಧಿಕಾರಿಗಳು ಭೇಟಿ ನೀಡಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.

ಹುಬ್ಬಳ್ಳಿ: ಉಕ್ಕಿದ ಬೆಣ್ಣೆಹಳ್ಳ, 32 ಜನರ ರಕ್ಷಣೆ ಓರ್ವ ನಾಪತ್ತೆ

ಶಿರಬಡಗಿ ಗ್ರಾಮದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಊರಿನ ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಅರ್ಧ ಅಡಿಯಷ್ಟುನೀರು ರಸ್ತೆ ಮೇಲೆ ನಿಂತಿದ್ದು, ಕೃಷಿ ಕಾರ್ಯಕ್ಕೂ ಹೋಗದೇ ಗ್ರಾಮಸ್ಥರು ಮನೆಯಲ್ಲೇ ಕುಳಿತಿದ್ದಾರೆ. ಊರ ಮಧ್ಯೆಯೇ ನೀರು ರಭಸವಾಗಿ ಹರಿಯುತ್ತಿದ್ದು, ಆತಂಕದಲ್ಲಿ ಗ್ರಾಮಸ್ಥರು ಕಾಲ ಕಳೆಯುತ್ತಿದ್ದಾರೆ.

ನಿರಂತರ ಮಳೆಗೆ ಮೂರು ದಿನಗಳಲ್ಲಿ ಹಾವೇರಿ ತಾಲೂಕಿನಲ್ಲಿ 250, ರಾಣಿಬೆನ್ನೂರ 45, ಬ್ಯಾಡಗಿ 54, ಹಿರೇಕೆರೂರು 54, ರಟ್ಟಿಹಳ್ಳಿ 8, ಸವಣೂರ 227, ಹಾನಗಲ್ಲ 35 ಮನೆಗಳು ಸೇರಿ ಒಟ್ಟು 670 ಮನೆಗಳಿಗೆ ಹಾನಿಯಾಗಿದೆ.
ಗಣೇಶ ಹಬ್ಬದ ಹಿನ್ನೆಲೆ ವಿವಿಧ ವಸ್ತುಗಳ ಖರೀದಿಗೆ ನಗರದ ಮಾರುಕಟ್ಟೆಗೆ ಆಗಮಿಸುತ್ತಿರವ ಜನತೆಗೆ ಜಿಟಿಜಿಟಿ ಮಳೆ ತೊಂದರೆ ಉಂಟು ಮಾಡುತ್ತಿದ್ದು, ಈ ನಡುವೆಯೂ ಗಣೇಶ ಹಬ್ಬದ ತಯಾರಿಯಲ್ಲಿ ಜನತೆ ತೊಡಗಿರುವುದು ಕಂಡು ಬಂದಿತು.

ಅರ್ಧ ಕರ್ನಾಟಕದಲ್ಲಿ ಭರ್ಜರಿ ಮಳೆ: ಇಬ್ಬರ ಸಾವು

ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದ್ದರಿಂದ ಬೆಳ್ಳುಳ್ಳಿ, ಈರುಳ್ಳಿ ಇತ್ಯಾದಿ ಬೆಳೆಗಳನ್ನು ಕಟಾವು ಮಾಡಿದ್ದ ರೈತರು ಸಂಕಷ್ಟಕ್ಕೆ ತುತ್ತಾಗುವಂತಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೆಳ್ಳುಳ್ಳಿ, ಈರುಳ್ಳಿ ಕೊಳೆಯುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಇವರೆಗೆ 60.122 ಹೆಕ್ಟೇರ್‌ ಕೃಷಿ ಬೆಳೆ, 1,271.15ಹೆಕ್ಟೇರ್‌ ತೋಟಗಾರಿಕೆ ಬೆಳೆ ಸೇರಿ ಒಟ್ಟು 61,393 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ಮಳೆ ವಿವರ:

ಕಳೆದ 24 ಗಂಟೆಗಳ ಅವಧಿಯಲ್ಲಿ ಹಾವೇರಿ ತಾಲೂಕಿನಲ್ಲಿ 54.6 ಮಿಮೀ, ರಾಣಿಬೆನ್ನೂರ 10.8 ಮಿಮೀ, ಬ್ಯಾಡಗಿ 4.4 ಮಿಮೀ, ಹಿರೇಕೆರೂರ 8.6 ಮಿಮೀ, ರಟ್ಟಿಹಳ್ಳಿ 14 ಮಿಮೀ, ಸವಣೂರ 95 ಮಿಮೀ, ಶಿಗ್ಗಾವಿ 41.2 ಮಿಮೀ, ಹಾನಗಲ್ಲ 16.2 ಮಿಮೀ ಮಳೆಯಾಗಿದೆ.
 

click me!