ಕ್ಯಾನ್ಸರ್‌ಗೆ ಚಿಕಿತ್ಸೆ ವ್ಯವಸ್ಥೆ ಇಲ್ಲದಿದ್ದರೂ ಬೇರೆ ಕಡೆ ಟ್ರೀಟ್‌ಮೆಂಟ್‌ಗೆ ಪತ್ರ ನೀಡಲು ಜಿಲ್ಲಾಸ್ಪತ್ರೆ ಹಿಂದೇಟು..!

By Kannadaprabha NewsFirst Published Aug 30, 2022, 9:48 AM IST
Highlights

ಚಿಕಿತ್ಸೆಗೆ ವೈದ್ಯಕೀಯ ವ್ಯವಸ್ಥೆ ಇಲ್ಲದಿದ್ದರೂ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚನೆ, ರೋಗಿಗಳಿಗೆ ಪ್ರಾಣಸಂಕಟ

ಕಾರವಾರ(ಆ.30):  ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗೆ ಉತ್ತರ ಕನ್ನಡದಲ್ಲಿ ಚಿಕಿತ್ಸೆ ನೀಡುವ ವೈದ್ಯಕೀಯ ವ್ಯವಸ್ಥೆ ಇಲ್ಲದಿದ್ದರೂ ಇಲ್ಲಿಯೇ ದಾಖಲಾಗಲು ಹೇಳುತ್ತಿದ್ದಾರೆ. ಬೇರೆಡೆ ಹೋಗುವುದಕ್ಕೆ ಜಿಲ್ಲಾಸ್ಪತ್ರೆಯಿಂದ ಪತ್ರ ನೀಡಲು ಹಿಂದೇಟು ಹಾಕುತ್ತಿದ್ದು, ಇದು ರೋಗಿಗಳಿಗೆ ತೀವ್ರ ತೊಂದರೆ ಆಗಿದೆ. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಲ್ಲೆಯ ಮಹಿಳೆ ಆಯುಷ್ಮಾನ್‌ ಭಾರತ- ಆರೋಗ್ಯ ಕರ್ನಾಟ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳಲು ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದು, ಯೋಜನೆಯಡಿ ಚಿಕಿತ್ಸೆ ಬೇಕಾದರೆ ಉತ್ತರ ಕನ್ನಡ ಜಿಲ್ಲಾಸ್ಪತ್ರೆಯಿಂದ ಪತ್ರ ತರುವಂತೆ ತಿಳಿಸಿದ್ದಾರೆ. ಆಕೆ ಪತ್ರ ಪಡೆದುಕೊಂಡು ಹೋಗಲು ಜಿಲ್ಲಾಸ್ಪತ್ರೆಗೆ ಬಂದರೆ ಇಲ್ಲಿಯೇ ದಾಖಲಾಗಿ ಚಿಕಿತ್ಸಾ ವ್ಯವಸ್ಥೆಯಿದ್ದು, ಪತ್ರ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಉತ್ತರ ಕನ್ನಡದಲ್ಲಿ ಮಾರಕ ರೋಗಗಳಿಗೆ ಚಿಕಿತ್ಸೆ ನೀಡುವಂತಹ ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದನ್ನು ತಿಳಿದಿರುವ ಕ್ಯಾನ್ಸರ್‌ ಪೀಡಿತ ಮಹಿಳೆಯ ಕುಟುಂಬದವರು ಇಲ್ಲಿ ಚಿಕಿತ್ಸೆ ಕೊಡಿಸಲು ಹಿಂದೇಟು ಹಾಕಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್‌ನ ಶಸ್ತ್ರಚಿಕಿತ್ಸೆ ಮಾಡಲು ಅವಕಾಶವಿದೆ. ಆದರೆ ಕಿಮೋ ಥೆರಪಿಗೆ ಬೇಕಾದ ತಜ್ಞವೈದ್ಯರಿಲ್ಲ. ಪೆಟ್‌ಸಿಟಿ ಸ್ಕ್ಯಾ‌ನ್‌, ರೇಡಿಯೋಥೆರಫಿ ಒಳಗೊಂಡು ಕ್ಯಾನ್ಸರ್‌ ಚಿಕಿತ್ಸಾ ವ್ಯವಸ್ಥೆ ಇಲ್ಲ. ಇದನ್ನು ಬೇರೆಡೆ ಪಡೆದುಕೊಳ್ಳಬೇಕು. ಅರ್ಧ ಚಿಕಿತ್ಸೆ ಇಲ್ಲಿ, ಅರ್ಧ ಚಿಕಿತ್ಸೆ ಬೇರೆಡೆ ಪಡೆದುಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿಯೇ ಶಸ್ತ್ರಚಿಕಿತ್ಸೆ, ಕಿಮೋಥೆರಫಿ ಒಳಗೊಂಡು ಎಲ್ಲ ಒಂದೆಡೆ ಸಿಗುವ, ಸುಸಜ್ಜಿತ ವ್ಯವಸ್ಥೆ ಇರುವ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದಾಗಿ ಸ್ತನಕ್ಯಾನ್ಸರ್‌ ಬಾಧಿತ ಮಹಿಳೆ ಹೇಳಿದ್ದಾಳೆ.

UTTARA KANNADA ಗಣಪ ಬರಲು ರೆಡಿ, ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಅವರನ್ನು ಭೇಟಿಯಾಗಿ ಪರಿಸ್ಥಿತಿ ತಿಳಿಸಿದ್ದು, ಡಿಸಿಯವರ ಸೂಚನೆ ಮೇರೆಗೆ ಜಿಲ್ಲಾಸ್ಪತ್ರೆಯಿಂದ ಬೇರೆಡೆ ಚಿಕಿತ್ಸೆ ಪಡೆದುಕೊಳ್ಳಲು ಪತ್ರ ನೀಡಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜೊತೆಯಾಗಿ ವೈದ್ಯಕೀಯ ಚಿಕಿತ್ಸೆ ಆರ್ಥಿಕವಾಗಿ ಹಿಂದುಳಿದವರಿಗೂ ಕೈಗೆಟುಕುವ ದರದಲ್ಲಿ ಸಿಗಲಿ ಎನ್ನುವ ಉದ್ದೇಶದಿಂದ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ತಂದಿದ್ದು, ಈ ಯೋಜನೆ ಲಾಭ ಸಿಗಬೇಕಾದಲ್ಲಿ ಆಯಾ ಜಿಲ್ಲಾಸ್ಪತ್ರೆಯಿಂದ ಪತ್ರ ತೆಗೆದುಕೊಂಡು ಹೋಗಿ ಬೇರೆ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಕೆಲವು ಆಯ್ದ ತುರ್ತು ಚಿಕಿತ್ಸೆಗೆ ಮಾತ್ರ ಪತ್ರದ ಅವಶ್ಯಕತೆ ಇರುವುದಿಲ್ಲ. ಈ ಆರೋಗ್ಯ ಸೇವೆ ಯೋಜನೆಯಡಿ ಈ ರೀತಿ ಪತ್ರ ನೀಡದೇ ತೊಂದರೆಗೊಳಗಾದ ಹಲವರು ಉದಾಹರಣೆಗಳು ಜಿಲ್ಲೆಯಲ್ಲಿದೆ. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವ ಉದ್ದೇಶದಿಂದ ಆಯುಷ್ಮಾನ್‌ ಕಾರ್ಡ್‌ ಪತ್ರ ನೀಡಲು ಸತಾಯಿಸದೇ ವೇಳೆಗೆ ಸರಿಯಾಗಿ ನೀಡಬೇಕಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲದಿದ್ದರೆ ಮಾತ್ರ ಆಯುಷ್ಮಾನ್‌ ಭಾರತ ಯೋಜನೆಯ ಪತ್ರ ನೀಡಿ ಬೇರೆಡೆ ಚಿಕಿತ್ಸೆಗೆ ಶಿಫಾರಸು ಮಾಡಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞವೈದ್ಯರೊಂದಿಗೆ ಮಾತುಕತೆ ನಡೆಸಿ ಪತ್ರ ನೀಡುವಂತೆ ಸೂಚಿಸಿದ್ದೇವೆ. ಕೂಡಲೇ ಆಯುಷ್ಮಾನ್‌ ಭಾರತ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಅಧಿಕಾರಿಗಳ ಸಭೆ ಮಾಡಿ ಅಗತ್ಯ ಮಾರ್ಗದರ್ಶನ ನೀಡುತ್ತೇವೆ ಅಂತ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ. 
 

click me!