ಒಂದೇ ದಿನದಲ್ಲಿ ತುಂಗಭದ್ರಾ ಒಡಲಿಗೆ 6 ಟಿಎಂಸಿ ನೀರು..!

By Kannadaprabha News  |  First Published Jul 9, 2022, 9:56 PM IST

*   ಜಲಾಶಯ ಮೇಲ್ಭಾಗದಲ್ಲಿ ಭಾರಿ ಮಳೆ, ಹರಿದುಬರುತ್ತಿದೆ ಹೆಚ್ಚಿನ ನೀರು
*   ಡ್ಯಾಂನ ಒಳ ಹರಿವು ಇನ್ನಷ್ಟು ಹೆಚ್ಚಳ
*   ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ಈ ಜಲಾಶಯ ನೀರು ಪೂರೈಕೆ 
 


ಹೊಸಪೇಟೆ/ಮುನಿರಾಬಾದ್‌(ಜು.09):  ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರಿ ಏರಿಕೆಯಾಗಿದ್ದು, ಒಂದೇ ದಿನದ ಅಂತರದಲ್ಲಿ ಜಲಾಶಯಕ್ಕೆ ಆರು ಟಿಎಂಸಿಯಷ್ಟು ನೀರು ಹರಿದು ಬಂದಿದೆ.

ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ಒಳಹರಿವು ಶುಕ್ರವಾರ 89,103 ಕ್ಯುಸೆಕ್‌ನಷ್ಟಿದ್ದು, ತುಂಗಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಟ್ಟಿರುವುದರಿಂದ ಡ್ಯಾಂನ ಒಳ ಹರಿವು ಇನ್ನಷ್ಟು ಹೆಚ್ಚಳವಾಗಿದೆ.

Latest Videos

undefined

ಕೊಪ್ಪಳ: ತುಂಗಭದ್ರಾ ಡ್ಯಾಂಗೆ 74507 ಕ್ಯುಸೆಕ್‌ ಒಳ ಹರಿವು

ಶಿವಮೊಗ್ಗದ ತೀರ್ಥಹಳ್ಳಿ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಜಲಾಶಯದ ಒಳಹರಿವು ಉತ್ತಮವಾಗಿದೆ. ಜತೆಗೆ ತುಂಗಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ನದಿಪಾತ್ರದ ಹಳ್ಳಿಗಳ ಜನರು ನದಿ ಕಡೆಗೆ ತೆರಳದಂತೆ ವಿಜಯನಗರ ಜಿಲ್ಲಾಡಳಿತ ಈಗಾಗಲೇ ಸೂಚಿಸಿದೆ. ಜಿಲ್ಲೆಯ ಹರಪನಹಳ್ಳಿ, ಹೂವಿನಹಡಲಿ, ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆ ತಾಲೂಕುಗಳ ನದಿಪಾತ್ರದ ಜನರು ಮುನ್ನಚ್ಚರಿಕೆ ವಹಿಸಲು ಈಗಾಗಲೇ ಹಳ್ಳಿ, ತಾಂಡಾಗಳಲ್ಲಿ ಡಂಗುರ ಸಾರಲಾಗಿದೆ. ಜತೆಗೆ ಶಿಕ್ಷಣ ಇಲಾಖೆಯ ಡಿಡಿಪಿಐ ಕೂಡ ಶಾಲಾ ಮಕ್ಕಳು ನದಿಯತ್ತ ತೆರಳದಂತೆ ಶಿಕ್ಷಕರು ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ.

ಜಲಾಶಯದಲ್ಲಿ 1621.19 ಅಡಿಯಷ್ಟು ನೀರು ಸಂಗ್ರಹವಾಗಿದೆ. 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 64.728 ಟಿಎಂಸಿ ನೀರು ತುಂಬಿದೆ. ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯ ಬೇಗನೆ ಭರ್ತಿಯಾಗುವ ಸಾಧ್ಯತೆ ಇದೆ. ಇನ್ನು 40 ಟಿಎಂಸಿ ನೀರು ಬಂದರೆ ಜಲಾಶಯ ತುಂಬಲಿದೆ.

ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಇನ್ನೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ಈ ಜಲಾಶಯ ನೀರು ಒದಗಿಸುತ್ತದೆ.
 

click me!