ಚಿಕ್ಕಮಗಳೂರು ಜಿಲ್ಲೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ: ಸಚಿವ ಸಿ.ಟಿ.ರವಿ

By Kannadaprabha News  |  First Published Jun 29, 2020, 10:22 AM IST

ಸರ್ಕಾರದ ಅನುಧಾನವನ್ನು ಸಮರ್ಪಕವಾಗಿ ಬಳಸಿಕೊಂಡು ಚಿಕ್ಕಮಗಳುಉ ಜಿಲ್ಲೆಯನ್ನು ಅಭಿವೃದ್ದಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಚಿಕ್ಕಮಗಳೂರು(ಜೂ.29): ವಿವಿಧ ಯೋಜನೆಯಡಿ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಬರುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಕಡೂರು ತಾಲೂಕಿನ ಸಖರಾಯಪಟ್ಟಣ ಹಾಗೂ ಬಾಣೂರಿನಲ್ಲಿ ಗ್ರಾಮ ಪಂಚಾಯಿತಿಯ ಮಳಿಗೆ, ರಸ್ತೆಗಳು ಹಾಗೂ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಮತ್ತು ಸ್ತ್ರೀಶಕ್ತಿ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಖರಾಯಪಟ್ಟಣಕ್ಕೆ ಅದರದೇ ಆದ ಇತಿಹಾಸವಿದೆ. ಈ ಪಟ್ಟಣಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕರಿಸಲಾಗಿದೆ. ಕಳೆದ ಬಾರಿ ಭೇಟಿ ನೀಡಿದಾಗ ಮಸೀದಿ ರಸ್ತೆ ಮಾಡಿಕೊಡುವುದಾಗಿ ತಿಳಿಸಿದ ಕಾರಣ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 30 ಲಕ್ಷ ರುಪಾಯಿ ಅನುದಾನವನ್ನು ಬಿಡುಗಡೆಗೊಳಿಸಿ ರಸ್ತೆ ನಿರ್ಮಿಸಲಾಗಿದೆ ಎಂದರು.

Tap to resize

Latest Videos

ಅಯ್ಯನಕೆರೆ ಅಭಿವೃದ್ಧಿಗೆ ಈ ಹಿಂದೆ 2 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಬಾರಿ ಪ್ರವಾಸೋದ್ಯಮವನ್ನು ಹೆಚ್ಚಿನದಾಗಿ ಅಭಿವೃದ್ಧಿಗೊಳಿಸುವ ಸದುದ್ದೇಶದಿಂದ ಪುನಃ 2 ಕೋಟಿ ರುಪಾಯಿ ಬಿಡುಗಡೆಗೊಳಿಸಲಾಗಿದೆ. ಜೊತೆಗೆ ಸಖರಾಯಪಟ್ಟಣ, ಹಸ್ತಿನಾಪುರ ಮತ್ತು ಕುಮಾರಗಿರಿ ರಸ್ತೆಗೆ .3 ಕೋಟಿ ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಯನ್ನು ಕೆಲವೇ ದಿನಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ಒಂದೇ ದಿನ ಕಾಫಿನಾಡಲ್ಲಿ 3 ಪ್ರಕರಣ ಪತ್ತೆ

ಸಖರಾಯಪಟ್ಟಣದ ಶಕುನಗಿರಿ ರಂಗನಾಥಸ್ವಾಮಿ ದೇವಾಲಯದ ಅಭಿವೃದ್ಧಿ ಹಾಗೂ ರಸ್ತೆ ನಿರ್ಮಾಣಕ್ಕಾಗಿ 3 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಪಟ್ಟಣದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸವು ಕಳಪೆ ಕಾಮಗಾರಿಯಿಂದ ಕೂಡಿರುವ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಅಧಿಕಾರಿಗಳಿಗೆ ಕ್ರಮ ವಹಿಸುವುದಾಗಿ ತಿಳಿಸಲಾಗುವುದು. ತಾಂಡಾಭಿವೃದ್ಧಿ ನಿಗಮದಿಂದ ಕೆಲವೆಡೆ ಸಮುದಾಯ ಭವನದ ಕಟ್ಟಡಗಳು ಮುಕ್ತಾಯದ ಹಂತಕ್ಕೆ ಬಂದಿದೆ ಎಂದರು.

ವಿಧಾನ ಪರಿಷತ್ತು ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ತಮಗೆ ಸಿಕ್ಕ ಅವಕಾಶದಲ್ಲಿ ಹೆಚ್ಚು ಶ್ರಮವಹಿಸಿ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಜನಪ್ರತಿನಿಧಿಗಳಾಗಿ ಅಭಿವೃದ್ಧಿ ಕಾರ್ಯಕ್ಕೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ತು ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಮುಖ್ಯಮಂತ್ರಿ ಗ್ರಾಮ ವಿಕಾಸಯೋಜನೆ ಅಡಿಯಲ್ಲಿ .1 ಕೋಟಿ ಅನುದಾನವನ್ನು ಮಂಜೂರು ಮಾಡಿಸಿ ಬಿಡುಗಡೆಗೊಳಿಸಲಾಗಿದ್ದಾರೆ. ಸಖರಾಯಪಟ್ಟಣಕ್ಕೆ ಉತ್ತಮವಾದ ಸೊಸೈಟಿ ಇಲ್ಲದ ಕಾರಣ 25 ಲಕ್ಷ ರುಪಾಯಿಗಳನ್ನು ನೀಡಲಾಗಿದೆ. ಉಳಿದ ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸುವುದಾಗಿ ತಿಳಿಸಿದ ಅವರು, ಒತ್ತುವರಿ ಆಗಿರುವ ಸ್ಮಶಾನ ಜಾಗವನ್ನು ಶೀಘ್ರದಲ್ಲಿಯೇ ತೆರವುಗೊಳಿಸಲು ಸಚಿವರಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಮ್ಮ, ಕಡೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಆನಂದ್‌ ನಾಯ್ಕ, ಸಖರಾಯಪಟ್ಟಣದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಣಿ ಉಪಸ್ಥಿತರಿದ್ದರು.


 

click me!