ಆಧಾರ್ ಕಾರ್ಡ್ ತಿದ್ದುಪಡಿಗೆಂದು ಟಂಟಂ ಆಟೋದಲ್ಲಿ ಚಿತ್ತಾಪುರಕ್ಕೆ ಹೋಗಿದ್ದ ಕುಟುಂಬ ಮರಳಿ ನಾಲವಾರಕ್ಕೆ ತೆರಳುತ್ತಿದ್ದಾಗ ಹಲಕರ್ಟಿ ಸಮೀಪ ವೇಗವಾಗಿ ಬರುತ್ತಿದ್ದ ಬೂದಿ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಶಹಾಬಾದ್(ನ.10): ಚಿತ್ತಾಪುರ ತಾಲೂಕಿನ ಹಲಕರ್ಟಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಟಂಟಂ ಆಟೋ ಹಾಗೂ ಹಾರುಬೂದಿ ತುಂಬಿದ್ದ ಟ್ಯಾಂಕರ್ ಮಧ್ಯೆ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಮೂರು ತಿಂಗಳ ಹಸುಗೂಸು, 4 ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ 6 ಜನ ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ಗುರುವಾರ ಸಂಜೆ 6 ಗಂಟೆಗೆ ನಡೆದಿದೆ.
ಮೃತರು ನಾಲವಾರ ಗ್ರಾಮದ ಒಂದೇ ಕುಟುಂಬದವರಾಗಿದ್ದಾರೆ. ಆಧಾರ್ ತಿದ್ದುಪಡಿಗಾಗಿ ಚಿತ್ತಾಪುರಕ್ಕೆ ಹೋಗಿ ನಾಲವಾರ ಗ್ರಾಮಕ್ಕೆ ಮರಳುತ್ತಿದ್ದಾಗ ದಾರಿಯಲ್ಲಿ ಸಂಭವಿಸಿರುವ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ.
ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ; ಫ್ರೀಡಂ ಪಾರ್ಕ್ ಪ್ರತಿಭಟನೆಗೆ ತೆರಳುತ್ತಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರು ಸಾವು!
ನಜ್ಮಿನ್ ಬೇಗಂ (28), ಬೀಬಿ ಫಾತಿಮಾ (12), ಅಬೂಬಕ್ಕರ್ (4), ಬೀಬಿ ಮರಿಯಮ್ (3 ತಿಂಗಳು ಮಗು), ಮಹ್ಮದ್ ಪಾಷಾ (20) ಹಾಗೂ ಆಟೋ ಚಾಲಕ ಬಾಬಾ (35) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ 10 ವರ್ಷದ ಬಾಲಕ ಮಹ್ಮದ್ ಹುಸೇನ್ ಬದುಕುಳಿದಿದ್ದಾನೆ, ಆದರೆ ಈತನಿಗೂ ತೀವ್ರವಾದಂತಹ ಗಾಯಗಳು ಆಗಿವೆ. ಮೃತರನ್ನು ನಾಲವಾರ ಗ್ರಾಮದ ವಾರ್ಡ್ ನಂ.1 ಅಕಾನಿ ಮಸ್ಜಿದ್ ಹತ್ತಿರದ ಮನೆಯವರು ಎಂದು ಗುರುತಿಸಲಾಗಿದೆ.
ಆಧಾರ್ ಕಾರ್ಡ್ ತಿದ್ದುಪಡಿಗೆಂದು ಟಂಟಂ ಆಟೋದಲ್ಲಿ ಚಿತ್ತಾಪುರಕ್ಕೆ ಹೋಗಿದ್ದ ಕುಟುಂಬ ಮರಳಿ ನಾಲವಾರಕ್ಕೆ ತೆರಳುತ್ತಿದ್ದಾಗ ಹಲಕರ್ಟಿ ಸಮೀಪ ವೇಗವಾಗಿ ಬರುತ್ತಿದ್ದ ಬೂದಿ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಸುಮಾರು 100 ಆಡಿಗೂ ದೂರದವರೆಗೂ ಟಂಟಂ ಆಟೋವನ್ನು ಟ್ಯಾಂಕರ್ ಎಳೆದು ಕೊಂಡು ಹೋಗಿದ್ದು ದೇಹಗಳು ಛಿದ್ರಗೊಂಡು ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.