* ಖಚಿತ ಮಾಹಿತಿ ಮೇರೆಗೆ ಖುದ್ದು ಎಸ್ಪಿ ಟಿ. ಶ್ರೀಧರ, ಡಿಸಿ ವಿಕಾಸ ಕಿಶೋರ ಸುರಳ್ಕರ್ ದಾಳಿ
* ಆರು ಜನ ವಶಕ್ಕೆ ಪಡೆದು ವಿಚಾರಣೆ, ಇನ್ನು 6 ಜನರಿಗಾಗಿ ಶೋಧಕಾರ್ಯ
* ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಯಲ್ಲಿ ಪತ್ತೆ
ಕೊಪ್ಪಳ(ಮೇ.09): ಗಂಗಾಗವತಿಯ ಔಷಧಿ ಅಂಗಡಿ ಮತ್ತು ಖಾಸಗಿ ಆಸ್ಪತ್ರೆಯೊಂದರಲ್ಲಿ ರೆಮ್‌ಡಿಸಿವಿರ್ ಅಕ್ರಮ ದಾಸ್ತಾನು ಪತ್ತೆಯಾಗಿದ್ದು, ಸುಮಾರು ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಕಾರ್ಯಾಚರಣೆ ಇನ್ನು ಮುಂದುವರೆದಿದೆ. ಶುಕ್ರವಾರ ತಡರಾತ್ರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ, ಡಿಸಿ ವಿಕಾಸ್ ಕಿಶೋರ ಸುರಳ್ಕರ್ ಹಾಗೂ ಆರೋಗ್ಯ ಇಲಾಖೆಯ ಜಂಬಯ್ಯ ನೇತೃತ್ವದ ತಂಡವೇ ದಾಳಿ ಮಾಡಿ, ಬಯಲು ಮಾಡಿದೆ ಎನ್ನಲಾಗಿದೆ.
ಕಾರ್ಯಾಚರಣೆ ವೇಳೆ ಸುಮಾರು 150 ಯುನಿಟ್ ರೆಮ್‌ಡಿಸಿವಿರ್ ಔಷಧಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಇದುವರೆಗೂ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಪ್ರಕರಣದ ಜಾಲ ದೊಡ್ಡದಿದ್ದು, ಕೊಪ್ಪಳ, ಗಂಗಾವತಿ ಹಾಗೂ ಕುಷ್ಟಗಿಯಲ್ಲಿಯೂ ಜಾಲದ ಆರೋಪಿಗಳು ಇದ್ದಾರೆ. ಕಾರ್ಯಾಚರಣೆ ವೇಳೆ 6 ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇನ್ನು 6 ಆರೋಪಿಗಳು ವಶಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆ ಕ್ಷಿಪ್ರವಾಗಿ ನಡೆಯುತ್ತಿದೆ.
undefined
ಜಾಲ ಬಹುದೊಡ್ಡದಿದ್ದು, ಇದರಲ್ಲಿ ಘಟಾನುಘಟಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ನಾನಾ ಆಸ್ಪತ್ರೆಗಳು ಸುಮಾರು ದಿನಗಳಿಂದ ಇದರಲ್ಲಿ ಭಾಗಿಯಾಗಿವೆ. ಇದಕ್ಕಿಂತ ಮಿಗಿಲಾಗಿ ಇದರ ನಿಖರತೆಯನ್ನು ಪತ್ತೆ ಮಾಡುವ ವೇಳೆ ಸರ್ಕಾರಿ ಆಸ್ಪತ್ರೆಯಿಂದಲೂ ಸಾಗಾಟವಾಗಿರುವ ಸಾಧ್ಯತೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಾಗಿದೆ.
ಕೊಪ್ಪಳದಲ್ಲಿ ರಾಜ್ಯದ ಪ್ರಥಮ ಗ್ರಾಮೀಣ ಕೋವಿಡ್ ಸೆಂಟರ್ ಉದ್ಘಾಟನೆ
ಜಾಲ ಕೇವಲ ಕೊಪ್ಪಳ, ಗಂಗಾವತಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ನಾನಾ ಕಡೆಯೂ ಇದು ವ್ಯಾಪಿಸಿದೆ. ಹೀಗಾಗಿ, ಇದರ ಜಾಡು ಹಿಡಿದು ಕಳೆದ 24 ಗಂಟೆಗಳಿಂದ ನಿರಂತರ ತನಿಖೆ ನಡೆದಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಪ್ರತ್ಯೇಕ ತಂಡ ರಚನೆ ಮಾಡಿದ್ದು, ಇದನ್ನು ಗೌಪ್ಯವಾಗಿ ಇಡಲಾಗಿದೆ.
ತನಿಖೆಯ ಬಗ್ಗೆ ಮಾಹಿತಿ ನೀಡಿದರೆ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಎಲ್ಲವನ್ನು ಗೌಪ್ಯವಾಗಿಯೇ ಕಾರ್ಯಚರಣೆ ನಡೆಸುತ್ತಿದೆ. ಭಾನುವಾರದ ವೇಳೆಗೆ ಸ್ಪಷ್ಟಚಿತ್ರಣ ದೊರೆಯಲಿದ್ದು, ಜಿಲ್ಲಾಧಿಕಾರಿಗಳೇ ಖುದ್ದು ಮಾಹಿತಿ ಬಿಡುಗಡೆ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ. ಅಷ್ಟಕ್ಕೂ ಜಿಲ್ಲಾಧಿಕಾರಿಗಳೇ ಇದೆಲ್ಲವನ್ನು ನೋಡಿಕೊಳ್ಳುತ್ತಿದ್ದು, ಅವರಿಂದಲೇ ಮಾಹಿತಿ ಬಿಡುಗಡೆಯಾಗಬಹುದು ಎಂದು ಕೊಪ್ಪಳ ಎಸ್ಪಿ ಟಿ. ಶ್ರೀಧರ ಹೇಳಿದ್ದಾರೆ.
ರೆಮ್‌ಡಿಸಿವಿರ್ ಪತ್ತೆಯಾಗಿರುವುದು ನಿಜ, ಇದರ ಬಗ್ಗೆ ತನಿಖೆ ಪ್ರಗತಿಯಲ್ಲಿ ಇದ್ದು, ಈಗಲೇ ಏನೂ ಹೇಳಲು ಆಗುವುದಿಲ್ಲ. ಭಾನುವಾರದ ವೇಳೆಗೆ ಸ್ಪಷ್ಟಚಿತ್ರಣ ದೊರೆಯುತ್ತಿದ್ದಂತೆ ಮಾಹಿತಿ ಬಿಡುಗಡೆ ಮಾಡಲಾಗುವುದು ಎಂದು ಕೊಪ್ಪಳ ಡಿಸಿ ವಿಕಾಸ ಕಿಶೋರ ಸುರಳ್ಕರ್ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona