Deepavali| ಪಟಾಕಿ ಸಿಡಿತದಿಂದ ಮೂರೇ ದಿನದಲ್ಲಿ 52 ಮಂದಿಗೆ ಗಾಯ

By Kannadaprabha NewsFirst Published Nov 7, 2021, 6:59 AM IST
Highlights

*  ಶೇ.90 ಮಕ್ಕಳು: ಮೂವರು ಗಂಭೀರ
*  ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿತಕ್ಕೆ 52ಕ್ಕೂ ಹೆಚ್ಚು ಮಂದಿಗೆ ಗಾಯ
*  ಬೇರೆಯವರು ಹೊತ್ತಿಸಿದ ಪಟಾಕಿಯಿಂದ ಬಾಲಕನ ಕಣ್ಣಿಗೆ ತೀವ್ರ ಹಾನಿ
 

ಬೆಂಗಳೂರು(ನ.07):  ನಗರದಲ್ಲಿ(Bengaluru) ದೀಪಾವಳಿ(Deepavali) ಸಂಭ್ರಮದಲ್ಲಿ ಸಿಡಿಸಿದ ಪಟಾಕಿಗಳಿಂದ(Fireworks) ಕಳೆದ ಮೂರು ದಿನಗಳಿಂದ 52ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಪೈಕಿ 8 ವರ್ಷ ಹಾಗೂ 14 ವರ್ಷದ ಇಬ್ಬರು ಮಕ್ಕಳಿಗೆ ದೃಷ್ಟಿಮರಳುವ(Eyesight) ಸಾಧ್ಯತೆ ಇಲ್ಲ. 70 ವರ್ಷದ ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆ(Surgery) ನಡೆಸಬೇಕಿದೆ. ಅವರ ದೃಷ್ಟಿ ಮರಳುವ ಬಗ್ಗೆಯೂ ಖಾತರಿ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಪಟಾಕಿ ಸಿಡಿತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಮವಾರದವರೆಗೂ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ಶನಿವಾರ ರಾತ್ರಿ 9ರ ವೇಳೆಗೆ 52ಕ್ಕೂ ಹೆಚ್ಚು ಮಂದಿಗೆ ಹಾನಿಯಾಗಿದೆ. ಇದರಲ್ಲಿ ನಾಲ್ಕು ಮಂದಿಯ ದೇಹ ಹಾಗೂ ಮುಖಕ್ಕೆ ಗಂಭೀರವಾದ ಸುಟ್ಟಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಗಳ ವಾರ್ಡ್‌ಗಳಲ್ಲಿ ದಾಖಲು ಮಾಡಲಾಗಿದೆ.

Diwali: ಪಟಾಕಿಯಿಂದ ಗಾಯಗೊಂಡರೆ ಈ ಮನೆ ಮದ್ದು ತಕ್ಷಣವೇ ಮಾಡಿ

ಇಬ್ಬರು ಮಕ್ಕಳಿಗೆ ದೃಷ್ಟಿಹಾನಿ:

ಪಟಾಕಿ ಸಿಡಿತದಿಂದ ಗಾಯಗೊಂಡವರಲ್ಲಿ ಶೇಕಡ 90ರಷ್ಟು ಮಕ್ಕಳೇ(Children) ಇದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮೂವರ ಪೈಕಿ ಇಬ್ಬರು ಮಕ್ಕಳು ಹಾಗೂ ಒಬ್ಬರು 70 ವರ್ಷದ ವೃದ್ಧ ಮಹಿಳೆ ಇದ್ದಾರೆ.

14 ವರ್ಷದ ಸಕ್ಕರೆಗೊಲ್ಲಹಳ್ಳಿ ಬಾಲಕನಿಗೆ ಬೇರೆಯವರು ಬಿಜಲಿ ಪಟಾಕಿ ಹೆಚ್ಚುವ ವೇಳೆ ಕಣ್ಣಿಗೆ(Eye) ಹಾನಿಯಾಗಿದೆ. ರೆಟಿನಾ ಪೊರೆಗೆ ಪೆಟ್ಟಾಗಿದ್ದು, ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ದೃಷ್ಟಿವಾಪಸು ಬರುವ ಸಾಧ್ಯತೆ ಇಲ್ಲ. ಇನ್ನು ಮತ್ತೊಬ್ಬ ಎಂಟು ವರ್ಷದ ಬಾಲಕನಿಗೂ ಕಣ್ಣಿಗೆ ತೀವ್ರ ಹಾನಿಯಾಗಿದ್ದು, ಎಡಗಣ್ಣು ಬಹುತೇಕ ದೃಷ್ಟಿಹೋಗಿದೆ. ಸೋಮವಾರ ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌ ತಿಳಿಸಿದ್ದಾರೆ.

ಇನ್ನು ವಿವೇಕಾನಂದ ಸೇವಾಶ್ರಮದ 70 ವರ್ಷದ ವೃದ್ಧೆಗೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಪಟಾಕಿ ಕಿಡಿ ತಾಗಿ ಗಂಭೀರವಾದ ಗಾಯವಾಗಿದೆ. ಒಳ ರೋಗಿಯಾಗಿ ಚಿಕಿತ್ಸೆ(Treatment) ಪಡೆಯುತ್ತಿರುವ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ದೃಷ್ಟಿಯ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಜಾಗೃತಿ ಮೂಡಿಸಿದರೂ ವ್ಯರ್ಥ

ನೇತ್ರತಜ್ಞರು, ಸರ್ಕಾರ(Government), ಮಾಧ್ಯಮಗಳು(Media) ಅರಿವು ಮೂಡಿಸಿದರೂ ಪೋಷಕರು ನಿರ್ಲಕ್ಷ್ಯ ಮುಂದುವರೆಸುತ್ತಿದ್ದಾರೆ. ಪಟಾಕಿ ಸಿಡಿಸುವಾಗ ಪೋಷಕರು ಜೊತೆಯಲ್ಲಿರಿ ಎಂದು ಎಷ್ಟೆಲ್ಲಾ ಜಾಗೃತಿ ಮೂಡಿಸಿದರೂ ಪ್ರಯೋಜನ ಆದಂತಿಲ್ಲ. ಪಟಾಕಿ ಹಚ್ಚಲು ಹೋಗಿ ಕೆಲವರಿಗೆ ಗಾಯವಾದರೆ, ಪಟಾಕಿ ಹಚ್ಚುವುದನ್ನು ನೋಡಲು ಹೋಗಿ ಕೆಲವರು ಹಾನಿ ಮಾಡಿಕೊಂಡಿದ್ದಾರೆ.

ಪಟಾಕಿ ಸಿಡಿಸುವುದನ್ನು ನೋಡುತ್ತ ನಿಂತಿದ್ದ 9 ವರ್ಷದ ಫರಾನ್‌ ಖಾನ್‌ನನ್ನು ಅದೇ ವಯಸ್ಸಿನ ಬಾಲಕ ಹೊತ್ತಿಸಿದ್ದ ಪಟಾಕಿ ಮೇಲೆ ತಳ್ಳಿದ್ದಾನೆ. ಈ ವೇಳೆ ಪಟಾಕಿ ಸಿಡಿದು ಅದರ ಕಿಡಿಯಿಂದ ಫರಾನ್‌ ಕಣ್ಣಿಗೆ ಗಾಯವಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ ಪಡೆದುಕೊಂಡಿದ್ದಾನೆ.

ಮುಖ ಸುಟ್ಟುಕೊಂಡ ಸಿರಾಜ್‌

ಬನ್ನೇರುಘಟ್ಟಬಳಿಯ ಕೊಪ್ಪಗೇಟ್‌ ನಿವಾಸಿ 9 ವರ್ಷದ ಬಾಲಕ ಸಿರಾಜ್‌ ಚಕ್ರ ಹಚ್ಚುವ ವೇಳೆ ಕಣ್ಣಿನ ಜತೆಗೆ ಮುಖವನ್ನು ಸುಟ್ಟುಕೊಂಡಿದ್ದಾನೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಸಣ್ಣ ಪ್ರಮಾಣದ ಪ್ಲಾಸ್ಟಿಕ್‌ ಸರ್ಜರಿ ಮಾಡುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಉಳಿದಂತೆ ನಗರದ ಮೈಸೂರು ರಸ್ತೆಯ ಅಂಚೆಪಾಳ್ಯ 13 ವರ್ಷದ ಸುಪ್ರೀತ್‌ ಸರಪಟಾಕಿ ಹಚ್ಚಲು ಹೋಗಿ ಅದರ ಕಿಡಿ ಕಣ್ಣಿಗೆ ತಾಗಿ ಗಾಯಗೊಂಡು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಒಂದರಲ್ಲೇ ಕಳೆದ ಮೂರು ದಿನಗಳಲ್ಲಿ 23 ಪ್ರಕರಣಗಳು ವರದಿಯಾಗಿವೆ.

Diwali 2021: ಮಕ್ಕಳು ಪಟಾಕಿ ಸಿಡಿಸುವಾಗ ತಡೆಯದಿರಿ: ಸದ್ಗುರು

ನಾರಾಯಣ ನೇತ್ರಾಲಯದಲ್ಲಿ 20 ಮಂದಿಗೆ ಚಿಕಿತ್ಸೆ

ಇನ್ನು ನಗರದ ನಾರಾಯಣ ನೇತ್ರಾಲಾಯದಲ್ಲಿ 12 ಮಂದಿ ಮಕ್ಕಳು ಹಾಗೂ 8 ಮಂದಿ ಹಿರಿಯರು ಸೇರಿದಂತೆ 20 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಎಲ್ಲರೂ ಹೊರ ರೋಗಿಗಳಾಗಿ(Patients) ಚಿಕಿತ್ಸೆ ಪಡೆದುಕೊಂಡಿದ್ದು, ಯಾರಿಗೂ ಗಂಭೀರ ಹಾನಿಯಾಗಿಲ್ಲ. ಉಳಿದಂತೆ ನಗರದ ಅಗರ್‌ವಾಲ್‌ ಆಸ್ಪತ್ರೆಯಲ್ಲಿ ಎರಡು ಪ್ರಕರಣಗಳು ವರದಿಯಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಮೂರು ಮಂದಿ ಕಣ್ಣಿಗೆ ಗಾಯ ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವಲ್ಲದೆ ಇತರೆ ಕಣ್ಣಿನ ಆಸ್ಪತ್ರೆಗಳಲ್ಲೂ ಕೆಲವರು ಸಣ್ಣ ಪುಟ್ಟಗಾಯಗಳಿಗೆ ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಮುಖ, ಮೈ ಕೈ ಸುಟ್ಟುಕೊಂಡು ನಾಲ್ವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪಟಾಕಿಯಿಂದ ಹಾನಿ ಪ್ರಕರಣ
ಮಿಂಟೋ ಕಣ್ಣಿನ ಆಸ್ಪತ್ರೆ - 23 (ಮೂರು ಗಂಭೀರ)
ನಾರಾಯಣ ನೇತ್ರಾಲಯ - 20
ಅಗರ್‌ವಾಲ್‌ ಕಣ್ಣಿನ ಆಸ್ಪತ್ರೆ - 2

ವಿಕ್ಟೋರಿಯಾದ ಮಹಾಬೋಧಿ ಸುಟ್ಟಗಾಯಗಳ ಕೇಂದ್ರ (ಬನ್ಸ್‌ರ್‍ ವಾರ್ಡ್‌) - 04 ಇತರೆ ಆಸ್ಪತ್ರೆ: 3 ಒಟ್ಟು = 52

ಮಿಂಟೋ ಆಸ್ಪತ್ರೆಯಲ್ಲಿ 23 ಮಂದಿ ಪಟಾಕಿ ಸುಟ್ಟಗಾಯಗಳಿಂದ ಆಗಮಿಸಿದ್ದಾರೆ. ಈ ಪೈಕಿ 17 ಮಂದಿ ಮಕ್ಕಳು ಹಾಗೂ 5 ಮಂದಿ ಹಿರಿಯರಿದ್ದಾರೆ. ಮಕ್ಕಳಲ್ಲಿ ಬಹುತೇಕರು ಗಂಡು ಮಕ್ಕಳೇ ಆಗಿದ್ದು ಒಬ್ಬ ಹೆಣ್ಣು ಮಗುವಿಗೆ ಮಾತ್ರ ಗಾಯವಾಗಿದೆ(Injured). ಮಕ್ಕಳಲ್ಲಿ ಇಬ್ಬರು ಕಣ್ಣಿಗೆ ತೀವ್ರ ಹಾನಿ ಉಂಟಾಗಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ, ಡಾ. ಸುಜಾತ ರಾಥೋಡ್‌ ತಿಳಿಸಿದ್ದಾರೆ.  
 

click me!