ಚಿಕ್ಕಬಳ್ಳಾಪುರ/ಧಾರವಾಡ (ನ.07): ಉಪ ಚುನಾವಣೆ (Karnataka By Election) ಸೋಲಿನ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ (Petrol - Diesel) ದರ ಇಳಿಕೆ ಮಾಡಲಾಗಿದೆ ಎಂಬ ಕಾಂಗ್ರೆಸ್ (Congress) ನಾಯಕರ ಹೇಳಿಕೆಗೆ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹಾಗೂ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Sudhakar) ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದ (Chikkaballapura) ಗೌರಿಬಿದನೂರಿನಲ್ಲಿ ಮಾತನಾಡಿದ ಸುಧಾಕರ್ (Sudhakar), ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕುರಿತಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala sitharaman) ಮೊದಲೇ ನಿರ್ಧರಿಸಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಈ ನಿರ್ಧಾರ ಕೈಗೊಂಡಿಲ್ಲ ಎಂದರು.
ಧಾರವಾಡದಲ್ಲಿ (Dharwad) ಮಾತನಾಡಿದ ಜೋಶಿ, ಕಾಂಗ್ರೆಸ್ ಪಕ್ಷಕ್ಕೆ ಜನಹಿತ ಏನು, ಜನ ಎಲ್ಲಿ ಹೋಗಿ ಓಟು ಹಾಕಿದರು ಅಂತ ಗೊತ್ತಿಲ್ಲ. ದೇಶದ 29 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟ 12 ಸ್ಥಾನಗಳನ್ನು ಗೆದ್ದಿದೆ. ಆಗಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿಯೇ ಇತ್ತು ಎಂದರು.
ಈಗಲೂ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಇಂಧನ ಬೆಲೆ ಏಕೆ ಇಳಿಕೆ ಮಾಡಿಲ್ಲ. ಕಾಂಗ್ರೆಸ್ ಮುಖಂಡರು ಇನ್ನೂ ಯಾಕೆ ಬೆಲೆ ಇಳಿಕೆ ಮಾಡುವಂತೆ ಸೂಚಿಸಿಲ್ಲ ಎಂದು ಪ್ರಶ್ನಿಸಿದರು.
ಈಗ ಎಲ್‌ಪಿಜಿ ಬೆಲೆ ಇಳೊಕೆಗೆ ಒತ್ತಾಯ
ದೀಪಾವಳಿ(Dipavali) ಹಬ್ಬಕ್ಕೆ ಕೇಂದ್ರ ಸರ್ಕಾರ ಬಂಪರ್ ಕೂಡುಗೆ ನೀಡಿದೆ. ಪೆಟ್ರೋಲ್, ಡೀಸೆಲ್(Petrol Diesel) ದರ ಇಳಿಸಿದ ಕೇಂದ್ರ, ಅಡುಗೆ ಎಣ್ಣೆ(Edible Oil) ದರ ಕೂಡ ಇಳಿಸಲಾಗಿದೆ. ಕೇಂದ್ರದ ನಿರ್ಧಾರವನ್ನು ಜನರು ಸ್ವಾಗತಿಸಿದ್ದಾರೆ. ಇದೀಗ ಜನ ಗಗನಕ್ಕೇರಿರುವ LPG ಸಿಲಿಂಡರ್ ಬೆಲೆ ಇಳಿಕಗೆ ಆಗ್ರಹಿಸಿದ್ದಾರೆ. ಇತ್ತ ಕೇಂದ್ರ ಮಾಜಿ ಸಚಿವೆ ಮೇನಕಾ ಗಾಂಧಿ, ಪ್ರಧಾನಿ ಮೋದಿ ಸರ್ಕಾರವನ್ನು LPG ಸಿಲಿಂಡರ್ ಬೆಲೆ ಇಳಿಕೆಗೆ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ನಿರ್ಧಾರವನ್ನು ಮೇನಕಾ ಗಾಂಧಿ(Maneka Gandhi) ಸ್ವಾಗತಿಸಿದ್ದಾರೆ. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದರ ಜೊತೆಗೆ LPG ಸಿಲಿಂಡರ್ ಬೆಲೆ ಕೂಡ ಇಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಮೇನಕಾ ಗಾಂಧಿ ಒತ್ತಾಯಿಸಿದ್ದಾರೆ.
ಮೇನಕಾ ಗಾಂಧಿ ಕ್ಷೇತ್ರವಾದ ದೆಹಲಿ ಬಜಾರ್ ಟೌನ್‌ಶಿಪ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇನಕಾ ಗಾಂಧಿ, LPG ಸಿಲಿಂಡರ್ ಬೆಲೆ ಇಳಿಕೆ ಕುರಿತು ಕೇಂದ್ರವನ್ನು ಒತ್ತಾಯಿಸಿದ್ದಾರೆ. LPG ಸಿಲಿಂಡರ್ ಬೆಲೆ ಇಳಿಕೆ ಮಾಡಿದರೆ ಎಲ್ಲಾ ಕುಟುಂಬಗಳ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.
ಮೇನಕಾ ಗಾಂಧಿ ಮಾತ್ರವಲ್ಲ ಹಲವರು LPG ಸಿಲಿಂಡರ್ ಬೆಲೆ ಇಳಿಕೆಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು LPG ಸಿಲಿಂಡರ್ ಬೆಲೆ ಇಳಿಕೆಗೆ ಒತ್ತಾಯಿಸಿದೆ. ಇದೇ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ದೀಪಾವಳಿ ಗಿಫ್ಟ್ ಅಲ್ಲ, ಇದು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದ ಕಲಿತ ಪಾಠ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಕೇಂದ್ರ ಸರ್ಕಾರದ ತೈಲ ಬೆಲೆ ಇಳಿಕೆ ನಿರ್ಧಾರ ಕೇವಲ ಜನರ ಕಣ್ಣೊರೆಸುವ ತಂತ್ರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೇಂದ್ರ ತೈಲ ಬೆಲೆಯನ್ನು ಗಗನಕ್ಕೆ ಏರಿಸಿ ಇದೀಗ 5 ರೂಪಾಯಿ ಕಡಿಮೆ ಮಾಡಿದರೆ ಪ್ರಯೋಜನವಿಲ್ಲ ಎಂದು ದೀದಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಕಡಿತಗೊಳಿಸಿದೆ. ಇದರ ಜೊತೆಗೆ ಬಿಜೆಪಿ ಆಡಳಿತದ ರಾಜ್ಯದಲ್ಲಿ ರಾಜ್ಯ ಸರ್ಕಾರಗಳು ತೆರಿಗೆ ಕಡಿತಗೊಳಿಸಿದೆ. ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 7 ರೂಪಾಯಿ ಕಡಿತಗೊಳಿಸಲಾಗಿದೆ.
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲಿನ ಸೆಸ್ ಕೂಡ ಕಡಿತಗೊಳಿಸಿದೆ. ಹೀಗಾಗಿ ಅಡುಗೆ ಎಣ್ಣೆ ಮೇಲೆ ಗರಿಷ್ಠ 20 ರೂಪಾಯಿ ಕಡಿತಗೊಳ್ಳಲಿದೆ. ಬೆಲೆ ಏರಿಕೆಯಿಂದ ಜನರ ಜೀವನ ದುಸ್ತರವಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಮೂಲಕ ಬೆಲೆ ಕಡಿತಗೊಳಿಸಿದೆ.
ಕೇಂದ್ರದ ನಿರ್ಧಾರವನ್ನು ಜನರು ಸ್ವಾಗತಿಸಿದ್ದಾರೆ. ಕರ್ನಾಟಕದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಕಡಿತ ದಿಂದ ಪೆಟ್ರೋಲ್ 100 ರೂಪಾಯಿ ಆಸುಪಾಸಿನಲ್ಲಿದ್ದರೆ, ಡೀಸೆಲ್ ಬೆಲೆ 81 ರೂಪಾಯಿ ಆಸುಪಾಸಿನಲ್ಲಿದೆ. ಇದು ಜನಸಾಮಾನ್ಯರಿಗೆ ಕೊಂಚ ರಿಲೀಫ್ ನೀಡಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ದೀಪಾವಳಿ ಹಬ್ಬಕ್ಕೆ ಕೇಂದ್ರ ಉಡುಗೊರೆ ನೀಡಿದೆ,
ಸದ್ಯ ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಿದೆ ನಿಜ. ಆಧರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಕಡಿತಗೊಳಿಸಿದರೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಮತ್ತೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ