ಶಿಗ್ಗಾಂವಿ: ಸಿಎಂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ 50 ಸಾವಿರ ಜನ..!

By Kannadaprabha NewsFirst Published Dec 18, 2022, 11:30 AM IST
Highlights

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನರಿಗೆ ಉತ್ತರ ಕರ್ನಾಟಕ ಶೈಲಿಯ ಗೋದಿಹುಗ್ಗಿ ಹಾಗೂ ಅನ್ನಸಾರು ಊಟದ ವ್ಯವಸ್ಥೆ 

ಶಿಗ್ಗಾಂವಿ(ಡಿ.18):  ಕನಕದಾಸರ ಜನ್ಮಭೂಮಿ ಶಿಗ್ಗಾಂವಿಯ ಬಾಡ ಗ್ರಾಮ ಅಕ್ಷರಶಃ ಜನಸಾಗರದಿಂದ ತುಂಬಿತ್ತು. ಮುಖ್ಯಮಂತ್ರಿ ಬೊಮ್ಮಾಯಿ, ಕಂದಾಯ ಸಚಿವ ಆರ್‌.ಅಶೋಕ ಅವರ ಸಾರಥ್ಯದಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ನೆರೆದಿದ್ದ ಈ ಮಟ್ಟಿಗಿನ ಜನಸ್ತೋಮ ಬಹುಶಃ ಬಾಡ ಗ್ರಾಮದ ಪಾಲಿಗೆ ಮೊದಲ ಬಾರಿ ಎಂದರೂ ಅತಿಶಯೋಕ್ತಿಯಲ್ಲ.

ಬಸವರಾಜ ಬೊಮ್ಮಾಯಿ ಅವರನ್ನು 3 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಲ್ಲದೆ ಮುಖ್ಯಮಂತ್ರಿ ಪಟ್ಟಕೊಡಿಸಿದ ಕೀರ್ತಿ ಶಿಗ್ಗಾಂವಿ ಜನರಿಗೆ ಸಲ್ಲುತ್ತದೆ. ಅಂತೆಯೇ ಶನಿವಾರ ಕ್ಷೇತ್ರದ ಬಾಡ ಗ್ರಾಮಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ‍್ಯಕ್ರಮದ ಅಭೂತ ಪೂರ್ವ ಯಶಸ್ಸಿಗೆ ಕಾರಣರಾದರು. ಶಿಗ್ಗಾಂವಿ ಸೇರಿ ಜಿಲ್ಲೆಯ ಪ್ರತಿಯೊಂದು ಗ್ರಾ.ಪಂ.ನಿಂದ ಒಂದೆರಡು ಬಸ್‌ ಹೊರಡಿಸಲಾಗಿತ್ತು. ಪ್ರತಿಯೊಂದು ವಾಹನದ ಮೇಲೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಆರ್‌. ಅಶೋಕ ಅವರ ಫೋಟೋಗಳು ರಾರಾಜಿಸುತ್ತಿದ್ದವು.

72 ತಾಸಲ್ಲಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಬದಲಾವಣೆ ತಂದಿದ್ದೇವೆ: ಸಚಿವ ಅಶೋಕ್‌

2 ಕಿ.ಮೀ. ಹಿಂದೆಯೇ ಪಾರ್ಕಿಂಗ್‌:

ಎಲ್ಲಾ ವಾಹನಗಳನ್ನು ವೇದಿಕೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿ ನಿಲ್ಲಿಸಲಾಗಿತ್ತು. ಐದಾರು ಎಕರೆ ವಿಶಾಲ ಪ್ರದೇಶದಲ್ಲಿ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ವಿಐಪಿ ಸೇರಿ ಪೊಲೀಸ್‌ ವಾಹನಗಳನ್ನು ಮಾತ್ರ ವೇದಿಕೆಯವರೆಗೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ವಾಹನಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು.

40 ಸಾವಿರ ಜನರಿಗೆ ಊಟದ ವ್ಯವಸ್ಥೆ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನರಿಗೆ ಉತ್ತರ ಕರ್ನಾಟಕ ಶೈಲಿಯ ಗೋದಿಹುಗ್ಗಿ ಹಾಗೂ ಅನ್ನಸಾರು ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖ್ಯ ವೇದಿಕೆಯ 200 ಮೀ. ದೂರದಲ್ಲಿ ಬಹುದೊಡ್ಡ ಪೆಂಡಾಲ್‌ ನಿರ್ಮಿಸಲಾಗಿತ್ತು. ಹತ್ತಾರು ಕಡೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಐದಾರು ಕಡೆಗಳಲ್ಲಿ ಊಟ ಬಡಿಸಲು ಸಿದ್ಧತೆ ಮಾಡಿಕೊಂಡಿದ್ದ ಬಾಣಸಿಗರು ಸರತಿಯಂತೆ ಊಟವನ್ನು ಬಡಿಸಿದರು. ಹುಬ್ಬಳ್ಳಿಯ ಬಾಣಸಿಗ ಶಂಭುಲಿಂಗ ಗೋಕಲ್‌ ಅವರ ಮುನ್ನೂರಕ್ಕೂ ಹೆಚ್ಚು ತಂಡದವರು ರುಚಿಯಾದ ಊಟ ಸಿದ್ಧಪಡಿಸಿದ್ದರು.

ಬಂಕಾಪುರದಿಂದ ಬಾಡದವರೆಗೆ ಅಲ್ಲಲ್ಲಿ ಬ್ಯಾರಿಕೇಡ್‌ ನಿರ್ಮಿಸಿದ್ದ ಪೊಲೀಸರು ಕಾರ್ಯಕ್ರಮಕ್ಕೆ ಸಂಬಂಧವಿರದ ವಾಹನಗಳನ್ನು ಮಾರ್ಗ ಬದಲಾಯಿಸಿ ಬಿಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅನಗತ್ಯ ವಾಹನಗಳಿಗೆ ತಡೆಯನ್ನು ನೀಡುತ್ತಿದ್ದ ಪೊಲೀಸರು ಕೆಲವರಿಂದ ತಕರಾರನ್ನು ಎದುರಿಸಬೇಕಾಯಿತು.
 

click me!