ಬಿಗಿ ಬಂದೋಬಸ್ತ್‌ಗೆ 4931 ಪೊಲೀಸರ ನಿಯೋಜನೆ, 26 ಚೆಕ್‌ಪೋಸ್ಟ್, 450 ಸಿಸಿಟೀವಿ ಕ್ಯಾಮೆರಾ ಕಣ್ಗಾವಲು
ಬೆಂಗಳೂರು(ಡಿ.18): ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ 30ರವರೆಗೆ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುವರ್ಣಸೌಧದ ಸುತ್ತಮುತ್ತ ಜ.11ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಶನಿವಾರ ಭದ್ರತೆಯ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 450ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಗಡಿಭಾಗಗಳಲ್ಲಿ ಒಟ್ಟು 26 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಅಧಿವೇಶನದ ವೇಳೆ 62 ಪ್ರತಿಭಟನೆ, ಧರಣಿ, ಮುಷ್ಕರಗಳು ನಡೆಯಲಿವೆ. ಈ ಸಂಬಂಧ ಈವರೆಗೆ 9 ಮನವಿಗಳು ಬಂದಿವೆ ಎಂದು ಹೇಳಿದರು.
ನಾಳೆ ಬೆಳಗಾವಿ ಕಲಾಪ ಆರಂಭ: ಚುನಾವಣೆಗೆ ಮುನ್ನ ‘ಕೊನೆ’ ಅಧಿವೇಶನ
ಎಸ್‌ಪಿ-6, ಹೆಚ್ಚುವರಿ ಎಸ್ಪಿ-11, ಡಿವೈಎಸ್ಪಿ-43, ಪಿಐ-95, ಪಿಎಸ್‌ಐ-241, ಎಎಸ್‌ಐ-298, ಎಚ್‌ಸಿ, ಪಿಸಿ -2829, ಕೆಎಸ್‌ಆರ್‌ಪಿ-800, ಸಿಎಆರ್-170, ಕ್ಯೂಆರ್‌ಟಿ-80, ಗರುಡಾ ತಂಡ-35, ಎಎಸ್‌ಸಿ ತಂಡ-130, ವೈರಲೆಸ್ ಸಿಬ್ಬಂದಿ-100 ಹೋಮಗಾರ್ಡ್-100, ಹೀಗೆ ಒಟ್ಟು 4,931 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಗ್ನಿಶಾಮಕ ದಳ-12, ಆ್ಯಂಬುಲೆನ್ಸ್-15, ಗರುಡಾ ಪಡೆ- 1, ಕೆಎಸ್‌ಆರ್‌ಟಿಸಿ ಬಸ್‌ಗಳು-60ಗಳನ್ನು ಭದ್ರತೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಪೊಲೀಸರ ವಾಸ್ತವ್ಯಕ್ಕೆ 7 ಟೆಂಟ್‌ಗಳ ಟೌನ್‌ಶಿಪ್
ಪೊಲೀಸ್ ಸಿಬ್ಬಂದಿ ವಸತಿ ವ್ಯವಸ್ಥೆಗೆ ಸುವರ್ಣ ವಿಧಾನಸೌಧದ ಬಳಿ ಟೌನ್‌ಶಿಪ್ ನಿರ್ಮಿಸಲಾಗಿದ್ದು, ಟೌನ್‌ಶಿಪ್‌ನಲ್ಲಿ 7 ಬೃಹತ್ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಒಂದು ಟೆಂಟ್‌ನಲ್ಲಿ 400ರಿಂದ 500 ಸಿಬ್ಬಂದಿಯ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಊಟಕ್ಕಾಗಿ 28 ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಗೆ ಕಾಟ್, ಬೆಡ್, ಸ್ನಾನಕ್ಕೆ ಬಿಸಿ ನೀರು, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸೌಲಭ್ಯ ಒದಗಿಸಲಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದರು.