ಪಟ್ಟಣದ ಕಂಠೇನಹಳ್ಳಿಯ ಬಳಿ ಚಾಮರಾಜ ಬಲದಂಡೆನಾಲೆಯ 9ನೇ ಬ್ರಾಂಚ್‌ನ ಆಕ್ವಿಡೇಟ್ ಕುಸಿದು ದುರಸ್ತಿಗೊಂಡರು 22 ದಿನಗಳಿಂದ 5 ಸಾವಿರ ಎಕರೆ ಭತ್ತದ ಬೆಳೆಗೆ ನೀರಿಲ್ಲದೆ ಈ ಭಾಗದ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಪ್ಪೆ ಮಹದೇವಸ್ವಾಮಿ
ಕೆ.ಆರ್. ನಗರ (ಅ.30): ಪಟ್ಟಣದ ಕಂಠೇನಹಳ್ಳಿಯ ಬಳಿ ಚಾಮರಾಜ ಬಲದಂಡೆನಾಲೆಯ 9ನೇ ಬ್ರಾಂಚ್‌ನ ಆಕ್ವಿಡೇಟ್ ಕುಸಿದು ದುರಸ್ತಿಗೊಂಡರು 22 ದಿನಗಳಿಂದ 5 ಸಾವಿರ ಎಕರೆ ಭತ್ತದ ಬೆಳೆಗೆ ನೀರಿಲ್ಲದೆ ಈ ಭಾಗದ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅ. 9ರಂದು ಸುರಿದ ಭಾರಿ ಮಳೆಗೆ ತಾಲೂಕಿನ ಹಲವೆಡೆ ಸಾಕಷ್ಟುಹಾನಿಯಾಗಿ ಪಟ್ಟಣದ ಕಂಠೇನಹಳ್ಳಿಯ ಬಳಿ ಚಾಮರಾಜ ಬಲದಂಡೆನಾಲೆಯ 9ನೇ ಬ್ರಾಂಚ್‌ನ ಆಕ್ವೀಡೇಟ್ ಕುಸಿದಿತ್ತು.
ಇದು ರೈಲ್ವೆ ಸೇತುವೆ ಮೇಲೆ ನಿರ್ಮಾಣಗೊಂಡ ಹಳೆಯ ಸೇತುವೆಯಾದ್ದರಿಂದ ಸಂಬಂಧಪಟ್ಟನೀರಾವರಿ ಇಲಾಖೆ ಅಧಿಕಾರಿಗಳು ಕುಸಿದ ನಂತರ ದುರಸ್ತಿ ಕಾರ್ಯ ಮಾಡಲು ಸರಿಸುಮಾರು 15 ದಿನ ತೆಗೆದುಕೊಂಡರು. ಈ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದರಿಂದ ಬೆಳೆಗೆ ನೀರಿನ ಅವಶ್ಯಕತೆ ಇಲ್ಲದ ಕಾರಣ ರೈತರೂ ಸಹ ಸುಮ್ಮನಿದ್ದರು, ಆದರೆ ಆಕ್ವೀಡೇಟ್ ದುರಸ್ತಿಗೊಳಿಸಿ ಈ ಭಾಗದ ಭತ್ತದ ಬೆಳೆಗಳಿಗೆ ನೀರು ಬಿಟ್ಟು ಒಂದು ವಾರ ಕಳೆಯುತ್ತಾ ಬಂದರೂ ನಾಲೆಗೆ ಸಮರ್ಪಕವಾದ ನೀರು ಹರಿಯದ ಕಾರಣ ಭತ್ತದ ಬೆಳೆಗೆ ನೀರಿಲ್ಲದೆ ರೈತರು ಪರಿತಪಿಸುವಂತಾಗಿದೆ.
ವೈದ್ಯರ ಹಾಜರಾತಿ ಮೇಲೆ ನಿಗಾಕ್ಕೆ ಬಯೋಮೆಟ್ರಿಕ್: ಸಚಿವ ಸುಧಾಕರ್
ಕುಸಿದ ಜಾಗದಲ್ಲಿ ಮೂರು ಭಾರಿ ಗಾತ್ರದ ಕಬ್ಬಿಣದ ಪೈಪ್‌ಗಳನ್ನು ಅಳವಡಿಸಿ ನಾಲೆಗೆ ನೀರು ಹರಿಯಬಿಟ್ಟಿದ್ದು, ಈ ಮೂರು ಪೈಪ್‌ಗಳಲ್ಲಿ ಹರಿಯುವ ನೀರು ಸುಮಾರು 5 ಸಾವಿರ ಎಕರೆ ಪ್ರದೇಶಕ್ಕೆ ಸಾಲದಾಗಿದ್ದು, ನಾಲೆಯ ಸೌತನಹಳ್ಳಿ, ಹೊಸೂರು ಕಲ್ಲಹಳ್ಳಿ, ಬೋರೆಕಲ್ಲಹಳ್ಳಿ ಸೇರಿದಂತೆ ಈ ಭಾಗದ ನಾಲೆಗಳಿಗೆ ಇನ್ನೂ ನೀರು ಹರಿಯದ ಕಾರಣ ಬೆಳೆಗೆ ಸಮರ್ಪಕವಾಗಿ ನೀರಿಲ್ಲದೆ ನಷ್ಟಅನುಭವಿಸುವಂತಾಗಿದೆ. ಭತ್ತದ ತೆನೆ ಕಡೆಯುವ ಹಂತದಲ್ಲಿ ಬೆಳೆ ಇದ್ದು, ತೆನೆ ಕಡೆದರೂ ಸಹ ನೀರಿಲ್ಲದ ಕಾರಣ ಭತ್ತದ ಬೆಳೆಯ ಇಳುವರಿ ಕಡಿಮೆಯಾಗುವ ಆತಂಕ ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ಬೆಳೆಗೆ ನೀರಿಲ್ಲದೆ ಹೋದರೆ ಭತ್ತ ಜೊಳ್ಳಾಗಿ ರೈತರು ನಷ್ಟಅನುಭವಿಸಬೇಕಾಗುತ್ತದೆ ಎಂದು ಈ ಭಾಗದ ರೈತರು ನೋವು ತೋಡಿಕೊಂಡಿದ್ದಾರೆ.
ಈ ಪ್ರದೇಶದಲ್ಲಿ ಹಲವೆಡೆ ಭತ್ತದ ಬೆಳೆ ಒಣಗಲಾರಂಭಿಸಿದ್ದು ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಯದ ಕಾರಣ ಹಲವಾರು ರೈತರಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ಸಣ್ಣ ಹಿಡುವಳಿ ಬಡರೈತರು ಪರಿತಪಿಸುವಂತಾಗಿದೆ. ಲಕ್ಷಾಂತರ ರುಪಾಯಿಗಳಲ್ಲಿ ಸೇತುವೆ ದುರಸ್ತಿ ಮಾಡಿದರೂ ಭತ್ತದ ಬೆಳೆಗೆ ನೀರು ಬಾರದ ಕಾರಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವ ರೈತರು, ಈ ಭಾಗದಲ್ಲಿ ಭತ್ತದ ಬೆಳೆ ಜೊಳ್ಳಾಗಿ ಇಳುವರಿ ಬಾರದೆ ಇದ್ದರೆ ಅದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Mysuru: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟ: ನಳಿನ್‌ಕುಮಾರ್ ಕಟೀಲ್
ಕಗ್ಗೆರೆ, ಚಾಮಲಾಪುರ, ಕನುಗನಹಳ್ಳಿ ದೆಗ್ಗನಹಳ್ಳಿ ಕಡೆ ನೀರು ನೀಡಿದ್ಧೇವೆ, ನಾಳೆ ಸೌತನಹಳ್ಳಿ, ಹೊಸೂರುಕಲ್ಲಹಳ್ಳಿ, ಬೋರೆಕಲ್ಲಹಳ್ಳಿ ಭಾಗಕ್ಕೆ ನೀರು ನೀಡಲಾಗುವುದು, ಒಂದೊಂದು ಭಾಗಕ್ಕೆ ಎರಡೆರಡು ದಿನ ನೀರು ನೀಡಲಾಗುವುದು, ಒಣಗಿದ ಕಾರಣ ನೀರು ಜಾಸ್ತಿ ತೆಗೆದುಕೊಳ್ಳುತ್ತಿದೆ ಮುಂದೆ ಸರಿ ಹೋಗುತ್ತದೆ, ರೈತರು ಇಲಾಖೆಯೊಂದಿಗೆ ಸಹಕರಿಸಿ ನಾವು ಸಹ ತುರ್ತಾಗಿ ಕಾಮಗಾರಿ ಮಾಡಿ ಬೆಳೆಗಳಿಗೆ ನೀರು ಹರಿಸಿದ್ದೇವೆ. ಮುಂದೆ ಎಲ್ಲವನ್ನು ಸರಿಪಡಿಸಲಾಗುವುದು.
-ಜಿ.ಜೆ. ಈರಣ್ಣ, ಇಇ, ಕಾವೇರಿ ನೀರಾವರಿ ನಿಗಮ, ಸಾಲಿಗ್ರಾಮ ಉಪವಿಭಾಗ