ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಜೀವಾಳ. 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಇದು ಮಡಿಕೇರಿ ಬ್ಲಾಕ್ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ.
ಮಡಿಕೇರಿ(ಫೆ.06): ಕಾಂಗ್ರೆಸ್ ಯಾವುದೇ ತತ್ವ ಸಿದ್ಧಾಂತ ಇಲ್ಲದೆ, ನಾವಿಕನಿಲ್ಲದ ಹಡಗಿನಂತಾಗಿದೆ. ಒಂದು ವರ್ಗವನ್ನು ಓಲ್ಯೆಸುವ ಸಲುವಾಗಿ ನೈಜ ಕಾರ್ಯಕರ್ತರನ್ನು ಕಣಿಗಣಿಸಿ ಮೂಲೆಗುಂಪು ಮಾಡುತ್ತಿರುವುದನ್ನು ಮನಗಂಡು ಕದನೂರು, ಚಂಬೆಬೆಳ್ಳೂರು, ಕಾಕೋಟುಪರಂಬು, ಅರಮೆರಿ, ಕೆದಮುಳ್ಳೂರು ಗ್ರಾಮದ 50ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜಿನಾಮೆ ನೀಡುತ್ತಿರುವುದಾಗಿ ವಿರಾಜಪೇಟೆ ಬ್ಲಾಕ್ ಚುನಾವಣಾ ಉಸ್ತುವಾರಿ ಚೇಂದಂಡ ನವೀನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಹಿರಿಯರನ್ನು ಕಡೆಗಣಿಸಿ ಅನರ್ಹರಿಗೆ ಪಕ್ಷದ ಸ್ಥಾನಮಾನಗಳನ್ನು ನೀಡುತ್ತಿದೆ. ಪಕ್ಷದಲ್ಲಿ ಎಲ್ಲರೂ ನಾಯಕರೆ. ಬೂತ್ ಮಟ್ಟದಲ್ಲಿ ಸಂಘಟನೆ ಮಾಡಲು ಯಾರಿಗೂ ಆಸಕ್ತಿ ಇಲ್ಲ. ನೈಜ ಕಾರ್ಯಕರ್ತನ ಮಾತಿಗೆ ಕಿಂಚಿತ್ತು ಬೆಲೆ ನೀಡದ ಇಂತಹ ಪಕ್ಷದಲ್ಲಿ ಸೇವೆ ಸಲ್ಲಿಸಲು ಮನಸ್ಸು ಒಪ್ಪುತ್ತಿಲ್ಲ. ಜಿಲ್ಲಾಧ್ಯಕ್ಷರ ಕಾರ್ಯ ವೈಖರಿಯ ಬಗ್ಗೆ ಸಂಪೂರ್ಣ ಅಸಮಧಾನ ಇದೆ. ಇಂತವರಿಂದ ಪಕ್ಷ ಬೆಳವಣಿಗೆ ಸಂಘಟನೆಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಯೋಗೇಶ್ವರ್ ಕಾರಣದಿಂದ ಕತ್ತಿ, ಲಿಂಬಾವಳಿಗೂ ತಪ್ಪಿತು ಮಂತ್ರಿಗಿರಿ!
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಾಳೇಟಿರ ಬೋಪಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರದ ಆಗು ಹೋಗುಗಳ ಹಾಗೂ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ. ಕೇಂದ್ರದ ಪ್ರತಿ ಯೋಜನೆಗಳಿಗೆ ಪಕ್ಷ ಅಡ್ಡಗಾಲು ಹಾಕುತ್ತಿದ್ದು ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅನಗತ್ಯ ವಿಷಯಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಸಾರ್ವಜನಿಕರ ಎದುರು ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದರು.
ರಾಜಿನಾಮೆ ಘೋಷಿಸಿದವರು:
ಕಾಂಗ್ರೆಸ್‌ನ ಕದನೂರು ಜೋನಲ್ ಮಾಜಿ ಅಧ್ಯಕ್ಷ ಕೋಟೇರ ಗಣೇಶ್ ತಮ್ಮಯ್ಯ, ವಿರಾಜಪೇಟೆ ಬ್ಲಾಕ್ ಕಾರ್ಯದರ್ಶಿ ಬಲ್ಲಟಿಕಾಳಂಡ ರಂಜು ಮಾದಪ್ಪ, ತಾಲೂಕು ಸೇವಾ ದಳದ ಅಧ್ಯಕ್ಷ ಚಾರಿಮಂಡ ಶರಣು ನಂಜಪ್ಪ, ಅರಮೇರಿ ಬೂತ್ ಅಧ್ಯಕ್ಷ ಬಾಚಿರ ಬಿದ್ದಪ್ಪ, ದೇವಣಗೇರಿ ಬೂತ್ ಅಧ್ಯಕ್ಷ ಐಚಂಡ ಕರುಣ್, ಕುಕ್ಲೂರು ಬೂತ್ ಅಧ್ಯಕ್ಷ ಕರ್ನಂಡ ಸೋಮಣ್ಣ, ಮಗ್ಗುಲ ಬೂತ್ ಅಧ್ಯಕ್ಷ ಕುಪ್ಪಚ್ಚಿರ ಮದನ್, ಚಂಬೆಬೆಳ್ಳೂರು ಬೂತ್ ಅಧ್ಯಕ್ಷ ಕುಂದಿರ ನೆಹರು, ಅರಮೇರಿ ಬೂತ್ ಅಧ್ಯಕ್ಷ ಅಮ್ಮಂಡ ಸುಮನ್, ಜೋನಲ್ ಕಾರ್ಯದರ್ಶಿ ಕಾಂಗೀರ ಸತೀಶ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಾಳೇಟಿರ ಸಾಬಾ ಮುತ್ತಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕರಿನರವಂಡ ಮಿಟ್ಟು, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಲ್ಲಚಂಡ ಟಿಟೋ, ವಿರಾಜಪೇಟೆ ಬ್ಲಾಕ್ ಸದಸ್ಯ ಅಲ್ಲಪಂಡ ವೇಣು, ಕಾರ್ಯಕರ್ತರಾದ ಮುಕ್ಕಾಟ್ಟಿರ ಮನು, ಕಾಂಗೀರ ಅರ್ಜುನ್, ಬಲ್ಲಚಂಡ ಸುನೀಲ್, ಮಲ್ಲಂಡ ಜಗದೀಶ್, ಮುಟ್ಟೈರಿರ ಭವಾನಿ ಸೇರಿದಂತೆ 50ಕ್ಕೂ ಅಧಿಕ ಮಂದಿ ರಾಜಿನಾಮೆ ಸಲ್ಲಿಸಿದ್ದಾರೆ.