ಚಿಟಗುಪ್ಪ ತಾಲೂಕಿನ ಬನ್ನಳ್ಳಿ ಗ್ರಾಮದಲ್ಲಿರುವ ಪುರಾತನ ರಾಮಲಿಂಗ(ಶಿವಲಿಂಗ) ಮಂದಿರದ ಜೀರ್ಣೋದ್ಧಾರಕ್ಕೆ 2.50 ಕೋಟಿ ರು. ಹೀಗೆ ಒಟ್ಟು 5 ಕೋಟಿ ರು. ಮಂಜೂರಾತಿ ಸಿಕ್ಕಿದೆ ಎಂದು ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.
ಬೀದರ್ (ಫೆ.15): ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೀದರ್ ತಾಲೂಕಿನ ಕಮಠಾಣಾ ಗ್ರಾಮದಲ್ಲಿರುವ ಐತಿಹಾಸಿಕ ಭಗವಾನ್ ಪಾರ್ಶ್ವನಾಥರ ಜೈನ್ ಮಂದಿರದ ಜೀರ್ಣೋದ್ಧಾರಕ್ಕೆ 2.50 ಕೋಟಿ ಹಾಗೂ ಚಿಟಗುಪ್ಪ ತಾಲೂಕಿನ ಬನ್ನಳ್ಳಿ ಗ್ರಾಮದಲ್ಲಿರುವ ಪುರಾತನ ರಾಮಲಿಂಗ(ಶಿವಲಿಂಗ) ಮಂದಿರದ ಜೀರ್ಣೋದ್ಧಾರಕ್ಕೆ 2.50 ಕೋಟಿ ರು. ಹೀಗೆ ಒಟ್ಟು 5 ಕೋಟಿ ರು. ಮಂಜೂರಾತಿ ಸಿಕ್ಕಿದೆ ಎಂದು ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.
ಈ ಎರಡೂ ಪವಿತ್ರವಾದ ಪ್ರಾಚೀನ ಧಾರ್ಮಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಕೋರಲಾಗಿತ್ತು. ಇದಕ್ಕೆ ತಲಾ 2.50 ಕೋಟಿ ರು. ಅನುದಾನ ಲಭ್ಯವಾಗಿದೆ. ಬನ್ನಳ್ಳಿ ಗ್ರಾಮದಲ್ಲಿರುವ ರಾಮಲಿಂಗ ದೇವಸ್ಥಾನ ಜೀರ್ಣೋದ್ಧಾರಕ್ಕೆ ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) 2.50 ಕೋಟಿ ರು.ಅನುದಾನ ಕಲ್ಪಿಸಿದರೆ, ಕಮಠಾಣಾದ ಜೈನ್ ಮಂದಿರದ ಜೀರ್ಣೋದ್ಧಾರಕ್ಕಾಗಿ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2.50 ಕೋಟಿ ರು. ಅನುದಾನ ಕಲ್ಪಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಬೆಲ್ದಾಳೆ ಹೇಳಿದ್ದಾರೆ.
ಸಿದ್ದರಾಮಯ್ಯ ಹತ್ತು ಸಲ ರಾಜಕೀಯ ನಿವೃತ್ತಿ ಪಡಿಬೇಕಿತ್ತು: ಪ್ರಲ್ಹಾದ್ ಜೋಶಿ
ಕಮಠಾಣಾದಲ್ಲಿರುವ 11ನೇ ಶತಮಾನದ ಜೈನ್ ಮಂದಿರವು ಜೈನ್ ಸಮಾಜದವರಿಗೆ ಅತ್ಯಂತ ಪವಿತ್ರ, ಪುಣ್ಯವಾದ ಅತಿಶಯ ಕ್ಷೇತ್ರವಾಗಿದೆ. ಇಲ್ಲಿ ಭಗವಾನ್ ಪಾರ್ಶ್ವನಾಥರ ನಾಲ್ಕೂವರೆ ಅಡಿಯ ಕಪ್ಪುಶಿಲೆಯ ತಪೋನಿರತ ಆಕರ್ಷಕ ಮೂರ್ತಿ ಇದೆ. ಮಂದಿರದ ಎದುರು 35 ಅಡಿ ಎತ್ತರದ ಸುಂದರ ಮಾನಸ್ತಂಭವಿದೆ. ಇಲ್ಲಿಗೆ ಬರುವ ಭಕ್ತರಿಗೆ, ಪ್ರವಾಸಿಗರಿಗೆ ಮೂಲಸೌಕರ್ಯ ಸೇರಿದಂತೆ ಮಂದಿರದಲ್ಲಿನ ವಿವಿಧ ಜೀರ್ಣೋದ್ಧಾರದ ಕೆಲಸಗಳಿಗಾಗಿ ಅನುದಾನ ಒದಗಿಸಲು ಸರ್ಕಾರಕ್ಕೆ ಕೋರಲಾಗಿತ್ತು. ಸರ್ಕಾರವು ಬೇಡಿಕೆಗೆ ಸ್ಪಂದಿಸಿ 2.50 ಕೋಟಿ ರು. ಅನುದಾನಕ್ಕೆ ಮಂಜೂರಿ ನೀಡಿದೆ ಎಂದು ವಿವರಿಸಿದ್ದಾರೆ.
ಬನ್ನಳ್ಳಿ ಗ್ರಾಮದ ಹೊರವಲಯದ ಹಣಮಂತರಾವ ಪಾಟೀಲ್ ಅವರ ತೋಟದಲ್ಲಿ ಪುರಾತನ ಸುಂದರವಾದ ರಾಮಲಿಂಗ ಶಿಲಾ ಮಂದಿರವಿದೆ. ಇಲ್ಲಿ ಮರ್ಯಾದಾ ಪುರುಷೋತ್ತನ ಶ್ರೀರಾಮನೇ ಶಿವಲಿಂಗ ಸ್ಥಾಪನೆ ಮಾಡಿದ್ದಾರೆಂಬ ನಂಬಿಕೆ ಹೊಂದಲಾಗಿದೆ. ಮಂದಿರದಲ್ಲಿ ಹಾಗೂ ಸುತ್ತಮುತ್ತ ಶಿಲ್ಪಕಲೆಯುಳ್ಳ ಆಕರ್ಷಕ ಮೂರ್ತಿಗಳಿವೆ. ಅವಸಾನದ ಅಂಚಿನಲ್ಲಿರುವ ಈ ಮಂದಿರಕ್ಕೆ ಕಾಯಕಲ್ಪ ನೀಡುವಂತೆ ಸ್ಥಳೀಯರು ಗಮನಕ್ಕೆ ತಂದಿದ್ದರು. ಇತ್ತೀಚೆಗೆ ಖುದ್ದು ಈ ಮಂದಿರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಆದಷ್ಟು ಬೇಗ ಜೀರ್ಣೋದ್ಧಾರ ಕಾಮಗಾರಿ ಆರಂಭಿಸಿ ಈ ಮಂದಿರವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.
ಆಡಳಿತ ಸುಧಾರಣೆಗೆ ಗ್ರಾಪಂಗಳಿಗೆ ರೇಟಿಂಗ್ ವ್ಯವಸ್ಥೆ: ಸಚಿವ ಪ್ರಿಯಾಂಕ್ ಖರ್ಗೆ
ಮಂದಿರಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ: ಧಾರವಾಡನಲ್ಲಿನ ಭಾರತೀಯ ಪುರಾತತ್ವ ಇಲಾಖೆ, ಬೀದರ್ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ಮಾಡಿಸಲಾಯಿತು. ಹಂಪಿಯ ಪುರಾತತ್ವ ಇಲಾಖೆಯ ಅಧೀಕ್ಷಕ ಡಾ.ನಿಹೆಲ್ ದಾಸ್, ಅಧೀಕ್ಷಕರ ಅಭಿಯಂತರ ಬರಣಿಧರನ್, ಬೀದರ್ ಉಪ ವಲಯ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ಇತರರು ಮಂದಿರಕ್ಕೆ ಭೇಟಿ ನೀಡಿ ಇಲ್ಲಿರುವ ಲಿಂಗ, ವಿವಿಧ ಶಿಲಾ ಮೂರ್ತಿ, ಶಿಲಾ ಶಾಸನ ಸೇರಿದಂತೆ ಮಂದಿರದ ಸಮೀಕ್ಷೆ ಮಾಡಿದ್ದರು. ಈ ದೇವಸ್ಥಾನ ಯಾವ ಕಾಲದ್ದು ಎಂಬುದರ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದಾರೆ. ಸ್ಥಳೀಯ ಸಂಸದರಾದ ಕೇಂದ್ರ ಸಚಿವ ಭಗವಂತ ಖೂಬಾ ಸಹ ಸಹಕಾರ ನೀಡಿದ್ದಾರೆ. ಬರುವ ದಿನಗಳಲ್ಲಿ ಈ ಮಂದಿರವು ಈ ಭಾಗದ ಧಾರ್ಮಿಕ ಪುಣ್ಯಕ್ಷೇತ್ರವಾಗಲಿದೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.