ಮುಂದಿನ 4 ತಿಂಗಳಿನಲ್ಲಿ ಕಲ್ಯಾಣ ಸಾರಿಗೆಗೆ 485 ಹೊಸ ಬಸ್: ಸಚಿವ ರಾಮಲಿಂಗಾರೆಡ್ಡಿ

By Govindaraj SFirst Published Mar 7, 2024, 6:11 PM IST
Highlights

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಈಗಾಗಲೆ 644 ಬಸ್ ನೀಡಿದ್ದು, ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಸಂಸ್ಥೆಗೆ ಇನ್ನು 485 ಬಸ್ ಸೇವೆಗೆ ಸೇರ್ಪಡೆಯಾಗಲಿವೆ ಎಂದು ರಾಜ್ಯದ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. 

ಕಲಬುರಗಿ (ಮಾ.07): ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಈಗಾಗಲೆ 644 ಬಸ್ ನೀಡಿದ್ದು, ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಸಂಸ್ಥೆಗೆ ಇನ್ನು 485 ಬಸ್ ಸೇವೆಗೆ ಸೇರ್ಪಡೆಯಾಗಲಿವೆ ಎಂದು ರಾಜ್ಯದ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕೆ.ಕೆ.ಆರ್.ಟಿ.ಸಿ.ಯಲ್ಲಿ ಹೊಸದಾಗಿ ಆಯ್ಕೆಯಾದ ಚಾಲಕ, ಚಾಲಕ-ಕಂ-ನಿರ್ವಾಹಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯಿಂದ ಮಹಿಳೆಯರ ಪ್ರಯಾಣ ಸಂಖ್ಯೆ ಹೆಚ್ಚಿದೆ. ಇದೂವರೆಗೆ ರಾಜ್ಯದಲ್ಲಿ 165 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ, ಪ್ರತಿದಿನ 1.10 ಕೋಟಿ ಇದರ ಲಾಭ ಪಡೆಯುತ್ತಿದ್ದು, ಹೀಗಾಗಿ ಸರ್ಕಾರ ಬಸ್ ಖರೀದಿಗೆ ಮುಂದಾಗಿದ್ದೇವೆ. ಹೆಚ್ಚಿನ ಬಸ್ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಚುನಾವಣಾ ಪೂರ್ವ ನೀಡಿದ ಭರವಸೆಯನ್ನು ಶಕ್ತಿ ಸೇರಿ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ಶಕ್ತಿ ಯೋಜನೆಯಿಂದ ಇಂಧನವಿಲ್ಲದೆ ಬಸ್ ಡಿಪೋಗಳಲ್ಲಿ ನಿಲ್ತಾವೆ ಎಂದು ಮಾಜಿ ಮುಖ್ಯಮಂತ್ರಿಯೊಬ್ಬರ ಹೇಳಿಕೆ ಉಲ್ಲೇಖಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಪ್ರಸ್ತುತ ಯಾವುದಾದರು ಬಸ್ ಡಿಪೋದಲ್ಲಿ ನಿಂತಿವಿಯೇ ಎಂದು ಪ್ರಶ್ನಿಸಿದರು. ಹಿಂದಿನ ಸರ್ಕಾರದ 4 ವರ್ಷ ಅವಧಿಯಲ್ಲಿ ಒಂದು ಬಸ್ ಖರೀದಿ ಮಾಡಿಲ್ಲ, ನೇಮಕಾತಿ ಸಹ ಜರುಗಿಸಿಲ್ಲ. ನಮ್ಮ ಸರ್ಕಾರ ಬಂದ ಕೂಡಲೆ ನೇಮಕಾತಿಗೂ ಚಾಲನೆ ಕೊಟ್ಟಿದ್ದೇವೆ, ಜೊತೆಗೆ ಬಸ್ ಖರೀದಿಗೂ ಮುಂದಾಗಿದ್ದೇವೆ. ಹಿಂದೆಲ್ಲ ಕಾರ್ಮಿಕರಿಗೆ ತಿಂಗಳು ಮುಗಿದು 20-25ನೇ ದಿನಕ್ಕೆ ಸಂಬಳ ಸಿಕ್ತಿತ್ತು. ಇದೀಗ ಒಂದನೇ ತಾರೀಕಿಗೆ ಸಂಬಳ ಸಿಗುತ್ತಿದೆ. ಕೆ.ಕೆ.ಆರ್.ಟಿ.ಸಿ.ಯಲ್ಲಿ ಇಂದಿನ ನೇಮಕಾತಿ ಹೊರತಾಗಿ ಖಾಲಿ ಇರುವ 1,300 ನಿರ್ವಾಹಕರು, 504 ಇತರೆ ಸಿಬ್ಬಂದಿ ನೇಮಕ ಸಹ ಮುಂದಿನ ದಿನದಲ್ಲಿ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಎಟಿಎಂ ಸರ್ಕಾರವಿದ್ದು, ಡಿಕೆಶಿ ಡಮ್ಮಿ ಡಿಸಿಎಂ: ಗೋವಾ ಸಿಎಂ ಪ್ರಮೋದ್ ಸಾವಂತ್ ವ್ಯಂಗ್ಯ

ಕಲಬುರಗಿ ನಗರ ಸಾರಿಗೆ ಪ್ರಯಾಣಿಕರಿಗೆ ಬಸ್ ಆಗಮನ-ನಿರ್ಗಮನ ಮತ್ತು ರೂಟ್ ಮ್ಯಾಪ್ ಮಾಹಿತಿ ನೀಡುವ “ನಮ್ಮ ಕಲಬುರಗಿ ಸಾರಿಗೆ” ತಂತ್ರಾಂಶ ಇಂದಿಲ್ಲಿ ಬಿಡುಗಡೆಗೊಳಿಸಿದೆ. ಮುಂದಿನ ದಿನದಲ್ಲಿ ವಾಯುವ್ಯ ಸಂಸ್ಥೆ ಮಾದರಿಯಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಸಹ ಇಲ್ಲಿ ಜಾರಿಗೆ ತರಲಾಗುತ್ತದೆ. ಕಾರ್ಮಿಕರ ರಕ್ಷಣೆಗೂ ನಮ್ಮ ಸರ್ಕಾರ ಬದ್ಧವಾಗಿದ್ದು, ಅಪಘಾತದಿಂದ ಮೃತಪಟ್ಟರೆ 1.20 ಕೋಟಿ ರು. ಅಪಘಾತದಲ್ಲಿ ಅಂಗವೈಕಲ್ಯ ಹೊಂದಿದಲ್ಲಿ 1 ಕೋಟಿ ರು., ಸಾಮೂಹಿಕ ಗುಂಪು ವಿಮೆ ಯೋಜನೆಯಡಿ ಇತರೆ ಕಾಯಿಲೆಯಿಂದ ನಿಧನರಾದಲ್ಲಿ 3 ಲಕ್ಷ ರು. ಗಳಿಂದ 10 ಲಕ್ಷ ರು. ಪರಿಹಾರ ಮೊತ್ತ ಹೆಚ್ಚಿಸಿದೆ. ಕಳೆದ 9 ತಿಂಗಳ ಅವಧಿಯಲ್ಲಿ 88 ಜನರಿಗೆ ಅನುಕಂಪದ ಮೇಲೆ ನೌಕರಿ ನೀಡಿದ್ದೇವೆ. ಸುಮಾರು 53 ಪ್ರಶಸ್ತಿಗಳು ನಮ್ಮ ಸಾರಿಗೆ ಸಂಸ್ಥೆಗೆ ಲಭಿಸಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬಡವರ ಹಣ ಬಡವರ ಮನೆಗೆ: ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಇಲ್ಲಸಲ್ಲದ ಮಾತನಾಡುತ್ತಿರುವುದನ್ನು ನೋಡಿದರೆ, ಬಡವರ ಬಗ್ಗೆ ಅವರ ಮನಸ್ಥಿತಿ ತೋರಿಸುತ್ತದೆ. ಬಡವರ ಕಲ್ಯಾಣಕ್ಕೆ ರೂಪಿಸಿರುವ ಮತ್ತು ಬಡವರ ಹಣ ಬಡವರ ಮನೆ ಬಾಗಿಲಿಗೆ ನೀಡುವ ಯೋಜನೆಗಳು ಇವು ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿಯೇ ಕಲ್ಯಾಣ ಕರ್ನಾಟಕ ಭಾಗದವರಿಂದಲೆ 50 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು. ಹಿಂದಿನ ಸರ್ಕಾರದಲ್ಲಿ ಪಿ.ಎಸ್.ಐ. ಹಗರಣದಿಂದ ಆಡಳಿತ ವ್ಯವಸ್ಥೆ ಬುಡವೇ ಮೇಲಾಗಿತ್ತು. ಪ್ರಜಾಪ್ರಭುತ್ವದ ಮೇಲೆ ಅಪನಂಬಿಕೆ ನಿರುದ್ಯೋಗಿ ಯುವಕರಲ್ಲಿ ಮೂಡಿತ್ತು. ನಮ್ಮ ಸರ್ಕಾರ ಇಂದಿಲ್ಲಿ ಚಾಲಕ, ನಿರ್ವಾಹಕರ ನೇಮಕಾತಿ ಅತ್ಯಂತ ಪಾರದರ್ಶಕತೆಯಿಂದ ಮಾಡುವ ಮೂಲಕ ಯುವಕರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದೇವೆ. ಕ.ಕ.ಭಾಗದಲ್ಲಿ ಈಗಾಗಲೆ ವಿವಿಧ ಇಲಾಖೆಯಲ್ಲಿ 15 ಸಾವಿರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಮುಂದಿನ ಆರು ತಿಂಗಳಲ್ಲಿ ನೇಮಕಾತಿಯಾಗಲಿದೆ. 371ಜೆ ಮೀಸಲಾತಿ ಅಡಿಯಲ್ಲಿಯೇ ನೌಕರು,, ಶಿಕ್ಷಣದಲ್ಲಿ ಮೀಸಲಾತಿ, ಕೆ.ಕೆ.ಆರ್.ಡಿ.ಬಿ ಮಂಡಳಿಗೆ ವಾರ್ಷಿಕ 5,000 ಕೊಟಿ ರು. ಹಣ ಹರಿಸು ಬರುತ್ತಿದ್ದು, ಇದಕ್ಕೆ ಕಾರಣೀಭೂತರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾವು ಎಂದಿಗೂ ಮರೆಯಬಾರದೆಂದರು.

ನಮ್ದು ನಗದಿ ಸರ್ಕಾರ: ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ ಮಾತನಾಡಿ, ಬರಗಾಲದ ಇಂತಹ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮ ಭಾಗದ 1,600 ಜನರಿಗೆ ಇಲ್ಲಿ ಉದ್ಯೋಗ ನೀಡಿ ಅವರ ಬದುಕಿನ ಹಣೆಬರಹ ಬರೆದಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಇಂದು ನೇಮಕಾತಿಗೆ ಚಾಲನೆ ಸಿಕ್ಕಿದೆ. ಇದು ನಗದಿ ಸರ್ಕಾರ, ಉದ್ರಿ ಸರ್ಕಾರ ಅಲ್ಲ. ಏನು ಹೇಳ್ತಿವೋ ಅದನ್ನೆ ಮಾಡತ್ತೀವಿ. ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆಂದು ಹೇಳಿದರು, ಯಾರಿಗಾದ್ರು ಉದ್ಯೋಗ ಸಿಕ್ತಾ ಎಂದು ಕೇಂದ್ರದ ಮೇಲೆ ಹರಿಹಾಯ್ದರು. ಕೊನೆಗೆ ಹೊಸದಾಗಿ ನೇಮಕವಾದ ಚಾಲಕರಿಗೆ ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸಬೇಡಿ ಎಂದು ಕಿವಿಮಾತು ಹೇಳಿದರು. ಶಾಸಕ ಎಂ.ವೈ.ಪಾಟೀಲ, ತಿಪ್ಪಣಪ್ಪ ಕಮಕನೂರ ಮಾತನಾಡಿದರು.

ಪ್ರಧಾನಿ ಮೋದಿಯಿಂದ ದೇಶಕ್ಕೆ ಗಂಡಾಂತರ: ಎಸ್.ಆರ್.ಹಿರೇಮಠ

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕೆ.ಕೆ.ಆರ್.ಟಿ.ಸಿ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಆನಂದ ಬಂದರಕಳ್ಳಿ, ಸಿ.ಎಂ.ಇ ಸಂತೋಷಕುಮಾರ ಗೊಗೋರೆ, ಡೆಪ್ಯೂಟಿ ಸಿ.ಎಂ.ಇ. ಮಲ್ಲಿಕಾರ್ಜುನ ದೇಗಲಮಡಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಯಣಪ್ಪ ಕುರುಬಾರ, ಎಸ್.ಜಿ. ಗಂಗಾಧರ, ಕಲಬುರಗಿ ವಿಭಾಗ-1ರ ಡಿ.ಟಿ.ಓ ಈಶ್ವರ ಹೊಸಮನಿ, ಡಿ.ಎಂ.ಇ. ನಾಗರಾಜ ವಾರದ ಸೇರಿದಂತೆ ಸಾರಿಗೆ ಸಂಸ್ಥೆಯ ಇತರೆ ಅಧಿಕಾರಿ-ಸಿಬ್ಬಂದಿ ಇದ್ದರು.

click me!