ಯಾದಗಿರಿಯಲ್ಲಿ ದಾಖಲೆಯ ಬಿಸಿಲು: ಕರ್ನಾಟಕದಲ್ಲೇ ಅತ್ಯಧಿಕ 45.6 ಡಿಗ್ರಿ ತಾಪ..!

By Kannadaprabha NewsFirst Published May 21, 2023, 10:44 AM IST
Highlights

ರಣಬಿಸಿಲಿಗೆ 26 ನವಜಾತ ಶಿಶುಗಳು ಅಸ್ವಸ್ಥ, ಜಿಲ್ಲಾಡಳಿತದಿಂದ ಹೆಲ್ಪಲೈನ್‌: ರಸ್ತೆಗಳಿಗೆ ನೀರು ಸಿಂಪರಣೆಗೆ ಸೂಚನೆ, ಎಳನೀರು, ಕಲ್ಲಂಗಡಿ, ಜ್ಯೂಸ್‌ಗಳಿಗೆ ಬೇಡಿಕೆ. 

ಯಾದಗಿರಿ(ಮೇ.21): ರಾಜ್ಯದಲ್ಲಿ ಈ ಬಾರಿ ಇದೇ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕದ ಯಾದಗಿರಿಯಲ್ಲಿ ಬಿಸಿಲಿನ ತಾಪಮಾನ 45.4 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಬಿಸಿಲಿನ ತಾಪಕ್ಕೆ ಜನ ತತ್ತರಿಸುವಂತಾಗಿದೆ. ಹಿಂದಿನ ವರ್ಷಗಳಲ್ಲಿ ತಾಪಮಾನ 41-42 ಡಿಗ್ರಿ ಸೆಲ್ಸಿಯಸ್‌ ದಾಟುತ್ತಿರಲಿಲ್ಲ. ಆದರೆ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತಾಪಮಾನ 45.4 ಡಿಗ್ರಿ ತಲುಪಿದೆ. ಮುಂದಿನ 2-3 ದಿನಗಳಲ್ಲಿ ಬಿಸಿಗಾಳಿಯ ಪ್ರಭಾವ ಹೆಚ್ಚಲಿದ್ದು, ಉಷ್ಣಾಂಶ 46 ಡಿಗ್ರಿ ಸೆಲ್ಸಿಯಸ್‌ ದಾಟುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯ ಇದಕ್ಕೆ ಕಾರಣ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ರಣಬಿಸಿಲಿಗೆ 26 ನವಜಾತ ಶಿಶುಗಳು ಅಸ್ವಸ್ಥ:

ಹೆಚ್ಚುತ್ತಿರುವ ತಾಪಮಾನದಿಂದಾಗಿ ನವಜಾತ ಶಿಶುಗಳಿಗೆ ನಿರ್ಜಲೀಕರಣದ (ಡಿ-ಹೈಡ್ರೇಶನ್‌) ಸಮಸ್ಯೆ ಎದುರಾಗಿದ್ದು, ಮಕ್ಕಳ ಆಸ್ಪತ್ರೆಗೆ ಪಾಲಕರು ದೌಡಾಯಿಸುತ್ತಿರುವುದು ಕಂಡು ಬರುತ್ತಿದೆ. ಮಕ್ಕಳಲ್ಲಿ ಜ್ವರ, ವಾಂತಿ ಕಾಡುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗುತ್ತಿರುವುದರ ಜೊತೆಗೆ, ಅನೇಕರು ಚಿಕಿತ್ಸೆ ಪಡೆದು ಮನೆಗೆ ಮರಳಿ ಅಲ್ಲಿಯೇ ಆರೈಕೆ ಮಾಡುತ್ತಿದ್ದಾರೆ. ಮಹಿಳೆಯರು, ವಯೋವೃದ್ಧರಲ್ಲಿ ಆತಂಕ ಮನೆ ಮಾಡಿದೆ.

ತಾಪಮಾನಕ್ಕೆ ತತ್ತರಿಸಿದ ಕೊಪ್ಪಳ ಮಂದಿ, ತಂಪಾಗಿಸಲು ಎಳನೀರೂ ಸಿಗ್ತಿಲ್ಲ!

ಈ ಮಧ್ಯೆ, ನಗರದ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳ ಅವಧಿಯಲ್ಲಿ 26 ನವಜಾತ ಶಿಶುಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆ ಪೈಕಿ, 19 ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 7 ಶಿಶುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇದೇ ಅವಧಿಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ 2 ವರ್ಷ ಮೇಲ್ಪಟ್ಟ10ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ.

ಇದೇ ವೇಳೆ, ಶನಿವಾರ ಬಳ್ಳಾರಿಯಲ್ಲಿ 41.9 ಡಿಗ್ರಿ ಸೆಲ್ಸಿಯಸ್‌, ಕಲಬುರಗಿಯಲ್ಲಿ 41.5 ಡಿಗ್ರಿ ಸೆಲ್ಸಿಯಸ್‌, ಕೊಪ್ಪಳದಲ್ಲಿ 41.5 ಡಿಗ್ರಿ ಸೆಲ್ಸಿಯಸ್‌, ವಿಜಯನಗರದಲ್ಲಿ 41 ಡಿಗ್ರಿ ಸೆಲ್ಸಿಯಸ್‌, ರಾಯಚೂರಿನಲ್ಲಿ 40.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಕಲಬುರಗಿಯಲ್ಲಿ ಬಿಸಿಲ ಬೆಂಕಿಗೆ ಜನರು ತತ್ತರ..!

ಬಿಕೋ ಎನ್ನುತ್ತಿರುವ ರಸ್ತೆಗಳು:

ಬಿಸಿಲಿನಿಂದಾಗಿ ಜನ ಬೆಳಗ್ಗೆ 11 ಗಂಟೆಯಿಂದ ಸಂಜೆ 4ರವರೆಗೆ ಮನೆ ಬಿಟ್ಟು ಹೊರಕ್ಕೆ ಬರುತ್ತಿಲ್ಲ. ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಎಳೆನೀರು, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು ಸೇರಿದಂತೆ ತಂಪು ಪಾನೀಯಗಳಿಗಾಗಿ ಜನರು ಹಾತೊರೆಯುತ್ತಿದ್ದಾರೆ.

ಮರದ ಕೆಳಗಡೆ, ಈಜುಕೊಳಗಳಿಗೆ ತೆರಳಿ ರಣಬಿಸಿಲಿನಿಂದ ಪಾರಾಗಲು ಜನ ಯತ್ನಿಸುತ್ತಿದ್ದಾರೆ. ಈ ಮಧ್ಯೆ, ಶನಿವಾರ ಜಿಲ್ಲಾಧಿಕಾರಿ ಆರ್‌.ಸ್ನೇಹಲ್‌ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ತಾಪಮಾನದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಜನರಿಗಾಗಿ ಜಿಲ್ಲಾಡಳಿತ ಸಹಾಯವಾಣಿ 08473-253950 ಸಂಖ್ಯೆ ತೆರೆದಿದೆ.

click me!