2 ವರ್ಷದಲ್ಲಿ 42 ಬಾಲ್ಯ ವಿವಾಹ, 259 ಪೋಕ್ಸೋ ಪ್ರಕರಣ

By Kannadaprabha News  |  First Published May 26, 2024, 1:05 PM IST

ಜಿಲ್ಲೆಯಲ್ಲಿ ಮತ್ತೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿದ್ದು, ಕಳೆದ 2 ವರ್ಷಗಳಲ್ಲಿ 42 ಬಾಲ್ಯ ವಿವಾಹಗಳು ನಡೆದಿದ್ದರೆ, 259 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವರ್ಷ (2022 - 23 ಹಾಗೂ 2023-24) ಗಳಲ್ಲಿ ಒಟ್ಟು 139 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 97 ಮದುವೆಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.


ರಾಮನಗರ: ಜಿಲ್ಲೆಯಲ್ಲಿ ಮತ್ತೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿದ್ದು, ಕಳೆದ 2 ವರ್ಷಗಳಲ್ಲಿ 42 ಬಾಲ್ಯ ವಿವಾಹಗಳು ನಡೆದಿದ್ದರೆ, 259 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವರ್ಷ (2022 - 23 ಹಾಗೂ 2023-24) ಗಳಲ್ಲಿ ಒಟ್ಟು 139 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 97 ಮದುವೆಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಈ ಪ್ರಕರಣಗಳಲ್ಲಿ ಅಧಿಕಾರಿಗಳು ಮಧ್ಯ ಪ್ರವೇಶ ಮಾಡುವ ಮೊದಲೇ ನಡೆದಿವೆ. 42 ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಬಾಲಕಿ ಹಾಗೂ ವರನ ಕಡೆಯವರ ವಿರುದ್ಧ ದಾಖಲಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ ನಲ್ಲಿ 3 ಪ್ರಕರಣಗಳಲ್ಲಿ 2 ಬಾಲ್ಯ ವಿವಾಹ ತಡೆಯಲಾಗಿದ್ದರೆ, 1 ಪ್ರಕರಣದಲ್ಲಿ ಮದುವೆ ನೆರವೇರಿದೆ.

Tap to resize

Latest Videos

ಆ 1 ಪ್ರಕರಣದಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

259 ಪೋಕ್ಸೋ ಪ್ರಕರಣ ದಾಖಲು :

2022 - 23ರಲ್ಲಿ 91 ಪ್ರಕರಣ ದಾಖಲಾಗಿದ್ದು, ಇದರಲ್ಲಿ 5 ಪ್ರಕರಣಗಳು ವರ್ಗಾವಣೆಗೊಂಡಿದ್ದರೆ, 22 ಪ್ರಕರಣಗಳು ಇತ್ಯರ್ಥಗೊಂಡಿವೆ. 2023-24ರಲ್ಲಿ ದಾಖಲಾದ 121 ಪ್ರಕರಣಗಲ್ಲಿ 10 ಕೇಸಗಳು ಇತ್ಯರ್ಥಗೊಂಡಿದ್ದರೆ 8 ಪ್ರಕರಣಗಳು ವರ್ಗಾವಣೆಗೊಂಡಿವೆ. ಇನ್ನು 2024-25ನೇ ಸಾಲಿನಲ್ಲಿ 47 ಪ್ರಕರಣ ದಾಖಲಾಗಿದ್ದು, 1 ಪ್ರಕರಣ ವರ್ಗಾವಣೆಗೊಂಡಿದೆ.

ಕೊರೊನಾ ಕಾಲದಲ್ಲೂ ಹೆಚ್ಚಾಗಿದ್ದ ಬಾಲ್ಯ ವಿವಾಹ:

ಮಹಾಮಾರಿ ಕೊರೋನಾ ಸಮಯದಲ್ಲಿ ಬಾಲ್ಯ ವಿವಾಹಗಳ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಅರಿವಿನ ಕೊರತೆ, ಅನಕ್ಷರತೆ, ಮೂಢ ನಂಬಿಕೆ, ಬಡತನದಿಂದಾಗಿ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಡುತ್ತಿದ್ದರು. ಅದರಲ್ಲೂ ಕೊರೋನಾ ಸಮಯದಲ್ಲಿ ಕಿತ್ತು ತಿನ್ನುವ ಬಡತನದಿಂದ ಬೇಸತ್ತ ಪೋಷಕರು ತಮ್ಮ ಆಟ ಆಡುವ ವಯಸ್ಸಿನ ಮಗಳನ್ನು ಮದುವೆ ಮಾಡಿಕೊಟ್ಟ ಆಕೆಯ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳುತ್ತಿದ್ದರು. ಕೊರೋನಾ ಆರಂಭವಾದ ಬಳಿಕ ಎರಡು ವರ್ಷದಲ್ಲಿ ಸುಮಾರು 114 ಪ್ರಕರಣಗಳು ಬಯಲಾಗಿದ್ದವು.

ಇನ್ನು 2017ರಲ್ಲಿ 05 ಬಾಲ್ಯ ವಿವಾಹ ತಡೆ​ದಿ​ದ್ದರೆ 2018ರಲ್ಲಿ 08, 2019ರಲ್ಲಿ 24 ಬಾಲ್ಯ ವಿವಾ​ಹ​ಗ​ಳಿಗೆ ಕಡಿ​ವಾಣ ಹಾಕಿದ್ದರು. ಕೊರೋನಾ ಮೊದಲ ಅಲೆ ಕಾಣಿ​ಸಿ​ಕೊಂಡ ತರು​ವಾಯ 2020ರ ಏಪ್ರಿಲ್‌ನಿಂದ 2021ರ ಮಾರ್ಚ್‌ವರೆಗೆ ಒಟ್ಟು 100 ಬಾಲ್ಯ ವಿವಾ​ಹ​ಗ​ಳ​ನ್ನು ತಡೆ ಹಿಡಿ​ಯ​ಲಾ​ಗಿದ್ದು, 11 ಮದು​ವೆ​ಗಳು ನೆರ​ವೇ​ರಿ​ವೆ. 10 ಮಂದಿ ವಿರುದ್ಧ ಪೋಕ್ಸೊ ಪ್ರಕ​ರಣ ದಾಖ​ಲಾ​ಗಿ​ತ್ತು. ಇನ್ನು ಕೊರೋನಾ ಎರ​ಡನೇ ಅಲೆ ವೇಳೆ ಜನತಾ ಕಫ್ಯೂ, ಲಾಕ್‌ಡೌನ್‌ ಜಾರಿ ಸಂದ​ರ್ಭ​ದ​ಲ್ಲಿಯೇ 2021ರ ಏಪ್ರಿಲ್‌ - ಜೂನ್‌ ವರೆಗೆ 14 ಬಾಲ್ಯ ವಿವಾ​ಹ​ಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟ​ಕ​ ಅ​ಧಿ​ಕಾ​ರಿ​ಗಳು ತಡೆ ಹಿಡಿದು, 02 ಪ್ರಕ​ರ​ಣ​ಗ​ಳಲ್ಲಿ ಎಫ್‌ಐಆರ್‌ ದಾಖ​ಲಿಸಿದ್ದರು.

ದೂರವಾಣಿ ಕರೆ ಮಾಡಿ :

ಇನ್ನು ಬಾಲ್ಯ ವಿವಾಹಕ್ಕೆ ಬಡತನ, ಅಜ್ಞಾನ, ಮೂಢನಂಬಿಕೆ, ಅರಿವಿನ ಕೊರತೆ, ಕಾನೂನು ತಿಳಿವಳಿಕೆ ಇಲ್ಲದೆ ಇರುವುದು, ಹೆಣ್ಣು ಮಕ್ಕಳ ಜವಾಬ್ದಾರಿ ಎನ್ನುವ ಮನೋಭಾವ ಮತ್ತು ವೃದ್ದರ ಹಾಗೂ ಅನಾರೋಗ್ಯದ ಹಿರಿಯರ ಆಸೆ ಇದಕ್ಕೆ ಕಾರಣವಾಗಿದೆ. ಇನ್ನು ಬಾಲ್ಯ ವಿವಾಹ ತಡೆಗಟ್ಟಲು ದೂರು ಸಲ್ಲಿಸಲು 1098 ಸಹಾಯವಾಣಿ 24/7 ಕಾರ್ಯನಿರ್ವಹಣೆ ಮಾಡುತ್ತಿದೆ.

ಜಿಲ್ಲೆಯ ಯಾವುದೇ ಭಾಗದಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದರೆ ಸಾರ್ವಜನಿರು ನಿರ್ಭೀತಿಯಿಂದ ಮಾಹಿತಿ ನೀಡಬೇಕು. ಮಾಹಿತಿದಾರರ ವಿವರಗಳನ್ನು ಗೋಪ್ಯವಾಗಿ ಇಡಬಹುದು. ಜಿಲ್ಲೆಯಲ್ಲಿ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರತಿಕ್ರಿಯಿಸಿದರು.

2 ತಿಂಗಳಿಗೊಂದು ನಿಷೇಧಾಧಿಕಾರಿಗಳ ತಂಡ:

ರಾಮನಗರ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಯಂತ್ರಣಕ್ಕೆ ಜಿಲ್ಲಾಡಳಿತ ವಿನೂತನ ಕ್ರಮಕ್ಕೆ ಮುಂದಾಗಿದೆ. ಪ್ರತಿ ಎರಡು ತಿಂಗಳಿಗೊಂದು ನಿಷೇಧಾಧಿಕಾರಿಗಳ ತಂಡವನ್ನು ರಚನೆ ಮಾಡಿದೆ. ಪ್ರತಿ ತಂಡದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ನಿಷೇಧಾಧಿಕಾರಿಗಳಾಗಿ ಇರಲಿದ್ದು, ಗ್ರಾಪಂ, ಪೊಲೀಸ್, ಶಿಕ್ಷಣ, ಆರೋಗ್ಯ, ಕಾರ್ಮಿಕ, ಕಂದಾಯ ಇಲಾಖೆ ಸಿಬ್ಬಂದಿ ಇರಲಿದ್ದಾರೆ.

ಏಪ್ರಿಲ್ -ಮೇ ತಿಂಗಳಲ್ಲಿ ತಹಸೀಲ್ದಾರ್, ಸಿಡಿಪಿಐ, ಜೂನ್ - ಜುಲೈನಲ್ಲಿ ತಾಪಂ ಇಒ, ಸಿಡಿಪಿಒ, ಆಗಸ್ಟ್ - ಸೆಪ್ಟೆಂಬರ್‌ನಲ್ಲಿ ಬಿಇಒ, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಸಂರಕ್ಷಣಾಧಿಕಾರಿ, ಅಕ್ಟೋಬರ್ - ನವೆಂಬರ್‌ನಲ್ಲಿ ತಾಲೂಕು ವೈದ್ಯಾಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವಿಸ್ತರಣಾಧಿಕಾರಿ, ಡಿಸೆಂಬರ್ - ಜನವರಿಯಲ್ಲಿ ವೃತ್ತ ನಿರೀಕ್ಷಕ, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಸಂರಕ್ಷಣಾಧಿಕಾರಿ ಹಾಗೂ ಫೆಬ್ರವರಿ - ಮಾರ್ಚ್‌ನಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಕಾರ್ಮಿಕಾಧಿಕಾರಿಗಳು ತಂಡ ಬಾಲ್ಯ ವಿವಾಹ ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.

click me!