
ಸಂಪತ್ ತರೀಕೆರೆ
ಬೆಂಗಳೂರು (ಜೂ.29): ಬಿಬಿಎಂಪಿಯ ಕಸ ಸಂಸ್ಕರಣಾ ಘಟಕಗಳಲ್ಲಿ ಉತ್ಪಾದಿಸಿದ ಸಾವಯವ ಗೊಬ್ಬರವನ್ನು (ಕಾಂಪೋಸ್ಟ್) ಖರೀದಿಸುವ ರೈತರಿಗೆ ಸಬ್ಸಿಡಿಯನ್ನು ಕೃಷಿ ಇಲಾಖೆ ಕಳೆದ ಐದಾರು ತಿಂಗಳಿನಿಂದ ನಿಲ್ಲಿಸಿದೆ. ಹಾಗಾಗಿ ಅಂದಾಜು 4 ಸಾವಿರ ಟನ್‌ಗೂ ಅಧಿಕ ಕಾಂಪೋಸ್ಟ್ ಗೊಬ್ಬರ ಕಸ ಸಂಸ್ಕರಣಾ ಘಟಕಗಳಲ್ಲಿ ಮಾರಾಟವಾಗದೆ ಉಳಿದಿದ್ದು, ದಾಸ್ತಾನು ಮಾಡುವುದು ಸವಾಲಾಗಿದೆ.
2016ರಿಂದ ಪಾಲಿಕೆ ವ್ಯಾಪ್ತಿಯ ಕಸ ಸಂಸ್ಕರಣಾ ಘಟಕಗಳು ಉತ್ಪಾದಿಸುವ ಕಾಂಪೋಸ್ಟ್ ಗೊಬ್ಬರ ವರ್ಷಕ್ಕೆ 10ರಿಂದ 12 ಸಾವಿರ ಟನ್ ಮಾರಾಟವಾಗುತ್ತಿತ್ತು. ಆದರೆ, ಕಳೆದ ಐದಾರು ತಿಂಗಳಿನಿಂದ ಕೃಷಿ ಇಲಾಖೆ ಸಬ್ಸಿಡಿ ನಿಲ್ಲಿಸಿರುವುದರಿಂದ ದಿನಕ್ಕೆ 10 ಟನ್ ಗೊಬ್ಬರವೂ ಮಾರಾಟವಾಗುತ್ತಿಲ್ಲ. ರಾಜ್ಯ ಸರ್ಕಾರ ಕಾಂಪೋಸ್ಟ್ ಗೊಬ್ಬರ ಖರೀದಿಸುವ ರೈತರಿಗೆ ಸಬ್ಸಿಡಿ ನೀಡಲೆಂದೇ ಕೃಷಿ ಇಲಾಖೆಗೆ .3 ಕೋಟಿ ಅನುದಾನ ನೀಡುತ್ತಿತ್ತು. ಆದರೆ, ಕೋವಿಡ್ ಕಾರಣವೊಡ್ಡಿ ಈ ಬಾರಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ(ಕೆಸಿಡಿಸಿ) ಪ್ರತಿ ಟನ್ ಕಾಂಪೋಸ್ಟ್ ಗೊಬ್ಬರಕ್ಕೆ .2300 ದರ ವಿಧಿಸಿದ್ದು, ಈ ಪೈಕಿ ಕೃಷಿ ಇಲಾಖೆ ರೈತರಿಗೆ ಪ್ರತಿ ಟನ್‌ಗೆ .1,150 ಸಬ್ಸಿಡಿ ನೀಡುತ್ತಿತ್ತು.
ಪ್ರಧಾನಿ ಹೋದ ಬೆನ್ನಲ್ಲೇ ಬಿದ್ದ ರಸ್ತೆ ‘ಗುಂಡಿ’: ಬಿಬಿಎಂಪಿ- ಜಲಮಂಡಳಿ ಮಧ್ಯೆ ಕಿತ್ತಾಟ ಶುರು..!
ಬಾಕಿ .1,150 ರು.ಗಳನ್ನು ರೈತರು ಭರಿಸಿದರೆ, ಕೆಸಿಡಿಸಿ ಸಿಬ್ಬಂದಿಯೇ ಲಾರಿ ಅಥವಾ ಟ್ರ್ಯಾಕ್ಟರ್‌ಗೆ ಗೊಬ್ಬರವನ್ನು ತುಂಬಿಸಿಕೊಂಡು ರೈತರ ಜಮೀನಿಗೆ ಹಾಕಿ ಬರುತ್ತಿದ್ದರು. ಕಸ ಸಂಸ್ಕರಣಾ ಘಟಕಗಳು ತಯಾರಿಸುವ ಕಾಂಪೋಸ್ಟ್ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ನಿತ್ಯ ನೂರಾರು ಟನ್ ಗೊಬ್ಬರವನ್ನು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಖರೀದಿಸುತ್ತಿದ್ದರು. ರೈತರು ಒಂದು ಪಹಣಿಗೆ 7 ಟನ್ ಕಾಂಪೋಸ್ಟ್ ಗೊಬ್ಬರ ಖರೀದಿ ಮಾಡಬಹುದಿತ್ತು. ಕೆಲವೊಬ್ಬರು ಎರಡು ಪಹಣಿ ಕೊಟ್ಟು 14 ಟನ್ ಗೊಬ್ಬರವನ್ನು ಖರೀದಿಸುತ್ತಿದ್ದರು.
ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ: ಇದೀಗ ಕೃಷಿ ಇಲಾಖೆ ಸಬ್ಸಿಡಿ ನಿಲ್ಲಿಸಿದ್ದರಿಂದ ರೈತರು ಕಾಂಪೋಸ್ಟ್ ಗೊಬ್ಬರ ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಟನ್‌ಗೆ .1,525 ಗಳಂತೆ ದಿನಕ್ಕೆ 10ರಿಂದ 15 ಟನ್ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ. ಬೆರಳೆಣಿಕೆಯಷ್ಟುರೈತರು ಮಾತ್ರ ಗೊಬ್ಬರ ಖರೀಗೆ ಮುಂದಾಗುತ್ತಿದ್ದಾರೆ ಎಂದು ಕೆಸಿಡಿಸಿ ಮೂಲಗಳು ಮಾಹಿತಿ ನೀಡಿವೆ.
ಜಮೀನುಗಳಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಜೈವಿಕ ಮತ್ತು ಸಾವಯವ ರಸಗೊಬ್ಬರ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ 2016ರಲ್ಲಿ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ) ಉತ್ಪಾದಿಸುವ ಸಾವಯವ ಗೊಬ್ಬರ ಖರೀದಿಸುವ ರೈತರಿಗೆ ಕೃಷಿ ಇಲಾಖೆ ಸಬ್ಸಿಡಿ ಕೊಡುವ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು.
ಮೂರು ಹಂತದಲ್ಲಿ ಸಂಸ್ಕರಣೆ: ಪಾಲಿಕೆಯ ಕಸ ಸಂಸ್ಕರಣಾ ಘಟಕಗಳಲ್ಲಿ ಪ್ರತಿದಿನ ಸ್ವೀಕರಿಸುವ ವಿಂಗಡಿಸಿದ ಹಸಿ ಕಸವನ್ನು ವಿಂಡ್ರೋ ವಿಧಾನದಲ್ಲಿ ಸಂಸ್ಕರಿಸಲಾಗುತ್ತದೆ. ಅದನ್ನು ಟ್ರೋಮೆಲ್‌ಗಳಲ್ಲಿ ಜರಡಿಯಾಡಿದಾಗ 4 ಮಿ.ಮೀ, 16 ಮಿ.ಮೀ ಹಾಗೂ 35 ಮಿ.ಮೀ ಅಳತೆಯ ಉಪ ಉತ್ಪನ್ನಗಳು ಲಭಿಸುತ್ತವೆ. ಹಸಿ ಕಸದಿಂದ ಶುದ್ಧ ಕಾಂಪೋಸ್ಟ್ (4 ಮಿ.ಮೀ ದಪ್ಪದ ಸಾವಯವ ಗೊಬ್ಬರ) ಉತ್ಪಾದನೆಯಾಗುವ ಪ್ರಮಾಣ ಶೇ.13ರಷ್ಟುಮಾತ್ರ. ಉಳಿದಂತೆ 16 ಮಿ.ಮೀ ಮತ್ತು 35 ಮಿ.ಮೀ ದಪ್ಪದ ಎರಡನೇ ದರ್ಜೆಯ ಕಾಂಪೋಸ್ಟ್ ಉತ್ಪಾದನೆಯಾಗುತ್ತದೆ.
ಈ ಪೈಕಿ 4 ಮಿ.ಮೀ ದಪ್ಪದ ಸಾವಯವ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಕೃಷಿ ಇಲಾಖೆ ಸಬ್ಸಿಡಿ ನೀಡುತ್ತಿದ್ದರಿಂದ ರೈತರು ಖರೀದಿಸಿ ಜಮೀನುಗಳಿಗೆ ಬಳಕೆ ಮಾಡುತ್ತಿದ್ದರು. ಎರಡನೇ ದರ್ಜೆ ಕಾಂಪೋಸ್ಟ್‌ಗೆ ಅಷ್ಟಾಗಿ ಬೇಡಿಕೆ ಇಲ್ಲ. ಕಸ ಸಂಸ್ಕರಣೆ ಘಟಕಗಳ ಬಳಿ ಇದನ್ನು ದಾಸ್ತಾನು ಮಾಡುವುದು ಕಷ್ಟ. ಹಾಗಾಗಿ ರೈತರಿಗೆ ಉಚಿತವಾಗಿ ಕೊಡುವುದಾಗಿ ಈ ಹಿಂದೆ ಬಿಬಿಎಂಪಿ ತಿಳಿಸಿತ್ತು. ಆದರೆ, ಬಹುತೇಕ ಲ್ಯಾಂಡ್ ಫಿಲ್ಲಿಂಗ್‌ಗೆ ಬಳಕೆ ಮಾಡಲಾಗುತ್ತಿದೆ.
ಪೂರಕ ಬಜೆಟ್‌ನಲ್ಲಿ ಅನುದಾನ?: ರೈತರಿಗೆ ಕಾಂಪೋಸ್ಟ್ ಖರೀದಿಸಲು ಅನುಕೂಲವಾಗುವಂತೆ ಸಬ್ಸಿಡಿ ಕೊಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಪೂರಕ ಬಜೆಟ್‌ನಲ್ಲಿ ಗೊಬ್ಬರ ಖರೀದಿಗೆ ಸಬ್ಸಿಡಿಗೆ ಅಗತ್ಯವಾದಷ್ಟುಅನುದಾನ ನೀಡುವ ಭರವಸೆಯನ್ನು ಸರ್ಕಾರ ಕೊಟ್ಟಿದ್ದು, ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಬಿಬಿಎಂಪಿ ವಾರ್ಡ್ ವಿಂಗಡಣೆ: ಜೆಡಿಎಸ್-ಬಿಜೆಪಿ ಜಟಾಪಟಿ
ಕಾಂಪೋಸ್ಟ್ ಗೊಬ್ಬರಕ್ಕೆ ಸರ್ಕಾರ ಸಬ್ಸಿಡಿ ಕೊಡುತ್ತಿದ್ದರಿಂದ ರೈತರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಸಿಗುತ್ತಿತ್ತು. ಇದರಿಂದ ಜಮೀನುಗಳ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಿತ್ತು. ಕಳೆದ ಐದು ತಿಂಗಳಿನಿಂದ ಸಬ್ಸಿಡಿ ನಿಲ್ಲಿಸಿದ್ದರಿಂದ ರೈತರಿಗೆ ತೊಂದರೆಯಾಗಿದೆ. ಸರ್ಕಾರ ಪುನಃ ಸಬ್ಸಿಡಿ ನೀಡುವುದನ್ನು ಆರಂಭಿಸಿ ರೈತರ ನೆರವಿಗೆ ಬರಬೇಕು.
-ಚಂದ್ರಶೇಖರ್, ರೈತ, ದೊಡ್ಡಬಳ್ಳಾಪುರ