Bengaluru: ರಸ್ತೆ ಗುಂಡಿ ಮುಚ್ಚಲು ಮಿಲಿಟರಿಗೆ ವಹಿಸ್ತೀವಿ: ಹೈಕೋರ್ಟ್‌ ಸಿಡಿಮಿಡಿ

By Govindaraj SFirst Published Jun 29, 2022, 9:27 AM IST
Highlights

ನ್ಯಾಯಾಲಯ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಪೈಥಾನ್‌ ಯಂತ್ರ ಬಳಸಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲು ಅಮೆರಿಕನ್‌ ರೋಡ್‌ ಟೆಕ್ನಾಲಜಿ ಸಲ್ಯೂಷನ್ಸ್‌ (ಎಆರ್‌ಟಿಎಸ್‌) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳದ ಹಾಗೂ ಕಾರ್ಯಾದೇಶ ಹೊರಡಿಸದ ಪಾಲಿಕೆಯನ್ನು ಹೈಕೋರ್ಟ್‌ ಮತ್ತೆ ತರಾಟೆಗೆ ತೆಗೆದುಕೊಂಡಿದೆ. 

ಬೆಂಗಳೂರು (ಜೂ.29): ನ್ಯಾಯಾಲಯ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಪೈಥಾನ್‌ ಯಂತ್ರ ಬಳಸಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲು ಅಮೆರಿಕನ್‌ ರೋಡ್‌ ಟೆಕ್ನಾಲಜಿ ಸಲ್ಯೂಷನ್ಸ್‌ (ಎಆರ್‌ಟಿಎಸ್‌) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳದ ಹಾಗೂ ಕಾರ್ಯಾದೇಶ ಹೊರಡಿಸದ ಪಾಲಿಕೆಯನ್ನು ಹೈಕೋರ್ಟ್‌ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಬಿಬಿಎಂಪಿಗೆ ಅಂತಿಮವಾಗಿ ಒಂದು ದಿನ ಕಾಲಾವಕಾಶ ನೀಡಿರುವ ಹೈಕೋರ್ಟ್‌, ಅಷ್ಟರೊಳಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಸಂಬಂಧ ಎಆರ್‌ಟಿಎಸ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಯಾದೇಶ ಹೊರಡಿಸಿ, ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. 

ಈ ಹಿಂದೆ ನಿರ್ದೇಶಿಸಿರುವಂತೆ ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ಜಂಟಿ ಸಮೀಕ್ಷಾ ವರದಿಯನ್ನೂ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜೂ.30ಕ್ಕೆ ಮುಂದೂಡಿತು. ಮುಂದಿನ ವಿಚಾರಣೆ ದಿನದಂದು ಬೆಳಗ್ಗೆ 10.30ಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಸಂಬಂಧ ಪಟ್ಟಅಧಿಕಾರಿಗಳು ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿರುವ ಹೈಕೋರ್ಟ್‌, ನ್ಯಾಯಾಲಯದ ಆದೇಶ ಪಾಲಿಸದೆ ಹೋದರೆ ಪಾಲಿಕೆ ಮುಖ್ಯ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್‌ ಸೇರಿ ಎಲ್ಲಾ ಅಧಿಕಾರಿಗಳನ್ನು ಅಮಾನತುಪಡಿಸಲು ಸರ್ಕಾರಕ್ಕೆ ಆದೇಶಿಸುವುದಾಗಿ ಎಚ್ಚರಿಕೆ ನೀಡಿದೆ.

ಲಂಚ ಕೇಸ್‌: ಡೀಸಿ ವಿರುದ್ಧ ತನಿಖೆಗೆ ಇಲ್ಲ ತಡೆ

ಬೆಂಗಳೂರಿನ ರಸ್ತೆಗಳ ದುಸ್ಥಿತಿ ಕುರಿತು ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಿಬಿಎಂಪಿ ಪ್ರಕಾರ ಬೆಂಗಳೂರಿನಲ್ಲಿ ಇನ್ನೂ 2,533 ಗುಂಡಿಗಳನ್ನು ಮುಚ್ಚಬೇಕಿದೆ. ಪೈಥಾನ್‌ ಯಂತ್ರ ಬಳಸಿ ಗುಂಡಿ ಮುಚ್ಚುವ ಕಾಮಗಾರಿ ನಡೆಸಲು ಎಆರ್‌ಟಿಎಸ್‌ಗೆ ಪಾಲಿಕೆ ಈವರೆಗೂ ಕಾರ್ಯಾದೇಶ ನೀಡಿಲ್ಲ. ಪೈಥಾನ್‌ ಯಂತ್ರಕ್ಕೆ ಬದಲಾಗಿ ಹಿಂದಿನ ವಿಧಾನದಲ್ಲೇ ಗುಂಡಿ ಮುಚ್ಚಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಪಾಲಿಕೆ ಪರ ವಕೀಲರು ಉತ್ತರಿಸಿ, ಈಗಾಗಲೇ ತಾತ್ಕಾಲಿಕ ಕಾರ್ಯಾದೇಶ ನೀಡಲಾಗಿದೆ. ಕಾಮಗಾರಿ ಸಹ ನಡೆಯುತ್ತಿದೆ. ರಸ್ತೆ ಗುಂಡಿ ಮುಚ್ಚಲು ಪೈಥಾನ್‌ ಯಂತ್ರ ಬಳಕೆಗೆ ಪ್ರತಿ ಚದರ ಮೀಟರ್‌ಗೆ 598 ರು. ಪಡೆಯಲು ಎಆರ್‌ಟಿಎಸ್‌ ಒಪ್ಪಿಕೊಂಡಿದೆ. ಈ ಸಂಬಂಧದ ಒಪ್ಪಂದ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದ ದರಕ್ಕೆ ಒಪ್ಪಿಗೆ ನೀಡಿರುವುದಾಗಿ ಕಳೆದ ವಿಚಾರಣೆ ವೇಳೆಯೇ ತಿಳಿಸಿದ್ದಿರಿ. ಅದನ್ನು ಪರಿಗಣಿಸಿ ತಕ್ಷಣ ಕಾಮಗಾರಿ ಒಪ್ಪಂದ ಹಾಗೂ ಕಾರ್ಯಾದೇಶ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ, ಪಾಲಿಕೆ ಯಾವುದೇ ಕೆಲಸ ಮಾಡುತ್ತಿಲ್ಲ. ಈಗ ಬಂದು ತಾತ್ಕಾಲಿಕ ಕಾರ್ಯಾದೇಶದ ಬಗ್ಗೆ ಹೇಳುತ್ತಿದ್ದೀರಿ. ಇದು ನಿಜಕ್ಕೂ ಅತಿಯಾಯಿತು, ನ್ಯಾಯಾಲಯದ ತಾಳ್ಮೆ ಪರೀಕ್ಷಿಸಬೇಡಿ ಎಂದು ತೀಕ್ಷ್ಣವಾಗಿ ನುಡಿಯಿತು.

ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದು ವಿರುದ್ಧದ ಚಾರ್ಜ್‌ಶೀಟ್‌ಗೆ ತಡೆ

‘ಕಠಿಣ ಆದೇಶ ನೀಡಲು ಕೋರ್ಟ್‌ ಹಿಂಜರಿಯಲ್ಲ’: ಕಾಮಗಾರಿ ಒಪ್ಪಂದ ಮಾಡಿಕೊಳ್ಳಲಾಗಿದೆಯೇ ಅಥವಾ ಇಲ್ಲವೇ, ತಾತ್ಕಾಲಿಕ ಕಾರ್ಯಾದೇಶ ಎಂದರೇನು ಎಂದು ಬಿಬಿಎಂಪಿಯ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಪಾಲಿಕೆ ಕೈಲಾಗದಿದ್ದರೆ ರಸ್ತೆ ಮುಚ್ಚುವ ಕೆಲಸವನ್ನು ಸೇನೆಯ ಏಜೆನ್ಸಿ ಅಥವಾ ಇನ್ಯಾವುದಾದರೂ ಸಂಸ್ಥೆಗೆ ವಹಿಸಲಾಗುವುದು. ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಸಂಪೂರ್ಣವಾಗಿ ಅಸಮರ್ಥರಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತ, ಎಂಜಿನಿಯರ್‌ ಸೇರಿ ಎಲ್ಲರನ್ನೂ ಅಮಾನತು ಮಾಡಲು ಸರ್ಕಾರಕ್ಕೆ ಕಠಿಣ ಆದೇಶ ಮಾಡಲಾಗುವುದು. ಕಚೇರಿಯಲ್ಲಿ ಆರಾಮವಾಗಿ ಕುಳಿತಿರುವ ಅಧಿಕಾರಿಗಳ ವಿರುದ್ಧ ಕಠಿಣ ಆದೇಶ ಹೊರಡಿಸಲು ಕೋರ್ಟ್‌ ಹಿಂಜರಿಯುವುದಿಲ್ಲ ಎಂದು ಕಟುವಾಗಿ ನುಡಿಯಿತು.

click me!