ಕುರಿಗಳ ಮೇಲೆ ಹರಿದ ಸಾರಿಗೆ ಬಸ್| 39 ಕುರಿ ಸಾವು, 25 ಕುರಿಗಳಿಗೆ ಗಾಯ| ಬಸ್‌ನ ಚಾಲಕನ ನಿರ್ಲಕ್ಷ್ಯದಿಂದ ನಡೆದ ದುರ್ಘಟನೆ|ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ನಾಗರಾಳದ ಖಾನಪ್ಪ ರಾಮಣ್ಣ ಬೋರಗುಂಡಿ ಎಂಬುವವರಿಗೆ ಸೇರಿದ ಕುರಿಗಳು|
ಕಾರಟಗಿ(ಡಿ.07): ರಸ್ತೆ ಮೇಲೆ ಹೋಗುತ್ತಿದ್ದ ಕುರಿಗಳ ಮೇಲೆ ಸಾರಿಗೆ ಸಂಸ್ಥೆ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ 39 ಕುರಿಗಳು ಮೃತಪಟ್ಟು, 25 ಕುರಿಗಳು ಗಾಯಗೊಂಡ ಘಟನೆ ಪಟ್ಟಣದ ಹೊರವಲಯದ ಸಿದ್ಧಲಿಂಗನಗರದ ಬಳಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಕೊಪ್ಪಳದಿಂದ ರಾಯಚೂರಿಗೆ ತೆರಳುತ್ತಿದ್ದ ಬಸ್‌ನ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದ್ದು ಸುಮಾರು 3 ಲಕ್ಷ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ನಾಗರಾಳದ ಖಾನಪ್ಪ ರಾಮಣ್ಣ ಬೋರಗುಂಡಿ ಎಂಬುವವರಿಗೆ ಸೇರಿದ 200 ಕುರಿಗಳು ಕಳೆದ 4 ದಿನಗಳಿಂದ ಪಟ್ಟಣದಲ್ಲಿಯೇ ಬಿಡಾರ ಹೂಡಿದ್ದವು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶುಕ್ರವಾರ ಬೆಳಗಿನ ಜಾವ 4ರ ಸುಮಾರಿಗೆ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕು ಕಡೆಗೆ ಹೊರಟಿದ್ದವು. ಮಾಲಿಕ ಖಾನಪ್ಪ, ಪತ್ನಿ, ಮಕ್ಕಳೊಂದಿಗೆ ಕುರಿಗಳ ಜತೆಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಸಬ್ ಇನ್‌ಸ್ಪೆಕ್ಟರ್ ವಿಜಯಕೃಷ್ಣ, ಸಿಂಧನೂರ ಗ್ರಾಮೀಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಘವೇಂದ್ರ, ಪಶು ವೈದ್ಯಾಧಿಕಾರಿ ರಾಜವರ್ಧನ ಭೇಟಿ ನೀಡಿ ಪರಿಶೀಲಿಸಿದರು.
ಕುರಿಗಳ ಮಾಲೀಕ ಖಾನಪ್ಪ ನೀಡಿದ ದೂರು ಅನ್ವಯ ಬಸ್ ಚಾಲಕ ಗಂಗಪ್ಪ ಎಂಬುವವರನ್ನು ಕಾರಟಗಿ ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.