ಚಿಕ್ಕಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದ ಸಮೀಪದ ಮೆಹ್ತಾ ಟವರ್ಸ್ ಅಪಾರ್ಟ್‌ಮೆಂಟ್‌ನ 39 ಮಂದಿಗೆ ಸೋಂಕು| ಕಟ್ಟಡದ ಸುತ್ತಮುತ್ತ ಈಗಾಗಲೇ 600 ಕೋವಿಡ್ ಪರೀಕ್ಷೆ| ಕೊರೋನಾ ಪರೀಕ್ಷೆ ಮಾಡಲು ಎಂಟು ಪರೀಕ್ಷಾ ತಂಡ ನಿಯೋಜನೆ| ಹೆಚ್ಚು ಮಂದಿಗೆ ಕೊರೋನಾ ಲಸಿಕೆ|
ಬೆಂಗಳೂರು(ಏ.07): ಕೊರೋನಾ ಸೋಂಕಿನ ಎರಡನೇ ಅಲೆಯ ಕರಿನೆರಳು ಐತಿಹಾಸಿಕ ಕರಗ ಮಹೋತ್ಸವದ ಮೇಲೆ ಬಿದ್ದಿದೆ. ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಧರ್ಮರಾಯಸ್ವಾಮಿ ದೇವಸ್ಥಾನ ಸಮೀಪದ ಕಟ್ಟಡವೊಂದರಲ್ಲಿ ಬರೋಬ್ಬರಿ 39 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಚಿಕ್ಕಪೇಟೆಯ ಧರ್ಮರಾಯನಸ್ವಾಮಿ ದೇವಸ್ಥಾನ ಬಳಿಯಲ್ಲಿರುವ ಶೇರ್‌ಖಾನ್ ಗಲ್ಲಿಯ ಮೆಹ್ತಾ ಟವರ್ಸ್ ಕಟ್ಟಡದಲ್ಲಿ ನೂರ ಇಪ್ಪತ್ತಕ್ಕೂ ಅಧಿಕ ಮಂದಿ ವಾಸ ಮಾಡುತ್ತಿದ್ದಾರೆ. ಅವರಲ್ಲಿ ಸುಮಾರು 39 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರನ್ನು ಸಿ.ವಿ.ರಾಮನ್ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನುಳಿದ 37 ಮಂದಿಯನ್ನು ಮೆಹ್ತಾ ಟವರ್ಸ್ ಕಟ್ಟಡ ಮಾಲಿಕರ ಮತ್ತೊಂದು ಕಟ್ಟಡವನ್ನು ಕೋವಿಡ್ ಆರೈಕೆ ಕೇಂದ್ರನ್ನಾಗಿ ಪರಿವರ್ತಿಸಿ ಅಲ್ಲಿ ಐಸೋಲೇಟ್ ಮಾಡಲಾಗಿದೆ.
ಕಟ್ಟಡದ ಸುತ್ತಮುತ್ತಲು ಈಗಾಗಲೇ 600 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಕೋವಿಡ್ ಪರೀಕ್ಷೆ ಮಾಡಲು ಎಂಟು ಪರೀಕ್ಷಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಕೋವಿಡ್ ಸೋಂಕು ಪತ್ತೆಯಾದ ಸುತ್ತಮುತ್ತಲಿನ ಪ್ರದೇಶದ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡುತ್ತೇವೆ. ಜೊತೆಗೆ ಹೆಚ್ಚು ಮಂದಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಮಾಹಿತಿ ನೀಡಿದರು.
ಬೆಂಗ್ಳೂರಲ್ಲಿ ಕೊರೋನಾರ್ಭಟ: ಬೆಡ್ ಸಂಖ್ಯೆ ಹೆಚ್ಚಿಸಲು ಗೌರವ್ ಗುಪ್ತಾ ಸೂಚನೆ
ಮಹಾರಾಷ್ಟ್ರದಿಂದ ಬಂದಿದ್ದರು!
ಸೋಂಕಿತರಲ್ಲಿ ಹಲವರು ಇತ್ತೀಚೆಗೆ ಮಹಾರಾಷ್ಟ್ರದಿಂದ ನಗರಕ್ಕೆ ಆಗಮಿಸಿದ್ದರು ಎನ್ನಲಾಗಿದ್ದು, ಕೆಲವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಕಾರಣ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಲಾಗುತ್ತಿದೆ. ಇಡೀ ಕಟ್ಟಡವನ್ನು ರಾಸಾಯನಿಕದಿಂದ ಸ್ವಚ್ಛಗೊಳಿಸಲಾಗಿದ್ದು ಸೀಲ್‌ಡೌನ್ ಮಾಡಲಾಗಿದೆ. ಜತೆಗೆ ಕಟ್ಟಡದಲ್ಲಿದ್ದ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಏಳು ದಿನಗಳ ನಂತರ ಪುನಃ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರಗಕ್ಕೆ ಕರಿನೆರಳು!
ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಸೋಮವಾರವಷ್ಟೇ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಜತೆಗೆ ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಸ್ತಿತ್ವದಲ್ಲಿ ಇಲ್ಲದ ಕಾರಣ, ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿದ್ದು, ಉತ್ಸವ ಸಮಿತಿಯನ್ನು ಕೂಡ ರಚಿಸಲಾಗಿತ್ತು. ಇದೀಗ ಧರ್ಮರಾಯಸ್ವಾಮಿ ದೇವಸ್ಥಾನದ ಸಮೀಪವೇ ಕೊರೋನಾ ಕ್ಲಸ್ಟರ್ ಸೃಷ್ಟಿಯಾಗಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕರಗ ಆಚರಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಖ್ಯ ಆಯುಕ್ತರ ಭೇಟಿ
ಸೋಂಕಿತರು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ, ಸುತ್ತಮುತ್ತಲ ಪ್ರದೇಶವನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಜತೆಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಂಪರ್ಕಿತರನ್ನು ಪತ್ತೆ ಮಾಡಿ ಕೋವಿಡ್ ಪರೀಕ್ಷೆ ಮಾಡಿ ಐಸೋಲೇಟ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ವಿಭಾಗದ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಆರೋಗ್ಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.