* ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಲ್ಲಿ ಉರುಳಿದ 26 ವಿದ್ಯುತ್ ಕಂಬ
* ಜಮೀನುಗಳಲ್ಲಿ ಅಪಾರ ಪ್ರಮಾಣದಲ್ಲಿ ನುಗ್ಗಿದ ನೀರು
* ಸ್ಥಳಕ್ಕೆ ಭೇಟಿ ನೀಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು
ಹೂವಿನಹಡಗಲಿ(ಜು.09): ತಾಲೂಕಿನಲ್ಲಿ ಬುಧವಾರ ತಡರಾತ್ರಿ ಭಾರಿ ಪ್ರಮಾಣದ ಮಳೆ ಗಾಳಿಗೆ ಮನೆಗಳಿಗೆ ಹಾನಿ ಉಂಟಾಗಿದ್ದು, 26ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಜತೆಗೆ 300ಕ್ಕೂ ಎಕರೆಗೂ ಅಧಿಕ ಬೆಳೆಹಾನಿ ಉಂಟಾಗಿದೆ.
ಕೋಮಾರನಹಳ್ಳಿ ತಾಂಡಾದಲ್ಲೇ ಅತಿ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, ಗಾಳಿ ರಭಸಕ್ಕೆ ಮನೆಯ ತಗಡುಗಳು ಹಾರಿ ಹೋಗಿದ್ದು, ತಗಡುಗಳು ಮುರಿದಿವೆ. ನಾಗತಿ ಬಸಾಪುರ ಹಾಗೂ ಮಾನ್ಯರ ಮಸಲವಾಡ ಗ್ರಾಮ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಗಾಳಿ ರಭಸಕ್ಕೆ ಕೆಲ ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಆದರೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.
ತಾಲೂಕಿನ ವಿವಿಧ ಕಡೆ ಸುರಿದ ಮಳೆಗೆ ಹತ್ತಾರು ಮನೆಗಳಲ್ಲಿ ವಾಸಕ್ಕೂ ಯೋಗವಾಗದ ರೀತಿಯಲ್ಲಿ ಗೋಡೆಗಳು, ಚಾವಣಿಗಳು ಕುಸಿದು ಬಿದ್ದಿವೆ. ಇದರಿಂದ ರಾತ್ರಿ ವೇಳೆ ಮನೆಯಲ್ಲಿ ಇರದೇ ದೇವಸ್ಥಾನ ಹಾಗೂ ಅಕ್ಕಪಕ್ಕದ ಮನೆಗಳಲ್ಲಿ ಕೆಲ ಕುಟುಂಬಗಳ ಸದಸ್ಯರು ವಾಸವಾಗಿದ್ದರು.
ಮಳೆ- ಗಾಳಿ ರಭಸಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹಿರೇಹಡಗಲಿ ಸೆಕ್ಷನ್‌ನಲ್ಲಿ 6, ಹಿರೇಮಲ್ಲನಕೆರೆ ಸೆಕ್ಷನ್‌ನಲ್ಲಿ 18, ಇಟ್ಟಿಗಿ ಸೆಕ್ಷನ್‌ನಲ್ಲಿ 2 ಸೇರಿದಂತೆ ಒಟ್ಟು 26 ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿದ ಪರಿಣಾಮ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಜೆಸ್ಕಾಂ ಇಲಾಖೆಗೆ 1.50 ಲಕ್ಷ ನಷ್ಟ ಉಂಟಾಗಿದೆ.
ಇನ್ನೂ 4 ದಿನ ಮಳೆ: ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್
ಹೂವಿನಹಡಗಲಿ ಹೋಬಳಿ ವ್ಯಾಪ್ತಿಯ ಕೋಮಾರನಹಳ್ಳಿ ತಾಂಡಾ, ನಾಗತಿ ಬಸಾಪುರ, ಮಾನ್ಯರ ಮಲಸವಾಡ ಸೇರಿದಂತೆ ಇತರೆ ಕಡೆಗಳಲ್ಲಿ 300ಕ್ಕೂ ಹೆಚ್ಚು ಎಕರೆ ವಿವಿಧ ಗಳು ನಾಶವಾಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿದೆ. ಇದರಿಂದ ಬೆಳೆಗಳು ಕೊಚ್ಚಿ ಹೋಗಿವೆ. ಜತೆಗೆ ಮಲೆ ನೀರು ನಿಂತು ಬೆಳೆಯೆಲ್ಲಾ ಕೊಳೆತಿವೆ.
ಹಾನಿ ಉಂಟಾಗಿರುವ ಪ್ರದೇಶಗಳಿಗೆ ತಹಸೀಲ್ದಾರ್ ಎ.ಎಚ್. ಮಹೇಂದ್ರ, ತಾಪಂ ಇಒ ಪ್ರಭುರೆಡ್ಡಿ, ಜೆಸ್ಕಾಂ ಎಇಇ ವೈ. ಸಂತೋಷ ಆನೇಕಲ್ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿ ಎಂ. ಮನೋಹರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತಾಲೂಕಿನ ಕೋಮಾರನಹಳ್ಳಿ ತಾಂಡಾ, ನಾಗತಿ ಬಸಾಪುರ ಹಾಗೂ ಮಾನ್ಯರ ಮಸಲವಾಡ ಗ್ರಾಮಗಳಿಗೆ ಭೇಟಿ ನೀಡಿದ್ದು, ಅಪಾರ ಪ್ರಮಾಣದ ಮಳೆಯಾಗಿದೆ. 15 ಮನೆಗಳು ಭಾಗಶಃ ನಾಶವಾಗಿದೆ. ಕೆಲ ಮನೆಗಳ ತಗಡು ಹಾರಿಹೋಗಿವೆ. ಜತೆಗೆ 250ರಿಂದ 300 ಎಕರೆಯಷ್ಟು ವಿವಿಧ ಬೆಳೆಗಳ ಹಾನಿ ಉಂಟಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಹೂವಿನಹಡಗಲಿ ತಹಸೀಲ್ದಾರ್ ಎ.ಎಚ್. ಮಹೇಂದ್ರ ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಮಳೆ ಗಾಳಿಗೆ ಜೆಸ್ಕಾಂ ಇಲಾಖೆಯ ವಿವಿಧ ಕಡೆ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ಕಂಬಗಳು ಮುರಿದು ಬಿದ್ದಿವೆ. ಇದರಿಂದ 1.50 ಲಕ್ಷ ಹಾನಿ ಉಂಟಾಗಿದೆ ಎಂದು ಹೂವಿನಹಡಗಲಿ ಜೆಸ್ಕಾಂ ಎಇಇ ವೈ. ಸಂತೋಷ ಆನೇಕಲ್ ಹೇಳಿದ್ದಾರೆ.