ಮಳೆ ಬಂತೆಂದು ಬಸ್‌ ನಿಲ್ದಾಣದಲ್ಲಿ ಕುಳಿತ ವ್ಯಕ್ತಿ ವಿದ್ಯುತ್ ಶಾಕ್‌ಗೆ ಬಲಿ!

By Suvarna NewsFirst Published May 16, 2022, 4:52 AM IST
Highlights

* ಜಾಹೀರಾತು ಫಲಕದ ವಿದ್ಯುತ್‌ ಶಾಕ್‌ ಹೊಡೆದು ಅಪರಿಚಿತ ಸಾವು

* ಚಪ್ಪಲಿ ಬಿಟ್ಟು ಕುಳಿತ್ತಿದ್ದ ವ್ಯಕ್ತಿ

* ಹೆಬ್ಬಾಳ ಬಸ್‌ ನಿಲ್ದಾಣದಲ್ಲಿ ಘಟನೆ

ಬೆಂಗಳೂರು(ಮೇ.16): ಹೆಬ್ಬಾಳದ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವ್ಯಕ್ತಿಗೆ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಮೃತನ ಗುರುತು ಪತ್ತೆಯಾಗಿಲ್ಲ. ಆತನಿಗೆ 25ರಿಂದ 30 ವರ್ಷ ಇರಬಹುದು. ಶನಿವಾರ ರಾತ್ರಿ 9.30ರ ಸುಮಾರಿಗೆ ಜೋರಾಗಿ ಮಳೆ ಬರುತ್ತಿದ್ದಾಗ ಹೆಬ್ಬಾಳ ಬಸ್‌ ನಿಲ್ದಾಣದಲ್ಲಿ ನಾಲ್ವರು ಕುಳಿತಿದ್ದರು. ಈ ವೇಳೆ ನಿಲ್ದಾಣದ ಸೀಟಿನ ಹಿಂಭಾಗದಲ್ಲಿ ಅಳವಡಿಸಿದ್ದ ಜಾಹೀರಾತು ಫಲಕದ ಬೋರ್ಡ್‌ನಿಂದ ಸಣ್ಣದಾಗಿ ವಿದ್ಯುತ್‌ ಶಾಕ್‌ ಹೊಡೆದ ಅನುಭವ ಆಗಿದೆ. ಈ ವೇಳೆ ಮೂವರು ಬಸ್‌ ನಿಲ್ದಾಣದಿಂದ ಎದ್ದು ಹೊರಗೆ ಓಡಿ ಬಂದಿದ್ದಾರೆ. ಆಗ ಚಪ್ಪಲಿ ಕೆಳಗೆ ಬಿಟ್ಟು ಕುಳಿತಿದ್ದ ಅಪರಿಚಿತ ವ್ಯಕ್ತಿ ವಿದ್ಯುತ್‌ ಪ್ರವಹಿಸಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ.

ಈ ಸಂಬಂಧ ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜಾಹೀರಾತು ಸಂಸ್ಥೆ ನಿರ್ಲಕ್ಷ್ಯ: ಬೆಸ್ಕಾಂ

ಈ ಬಗ್ಗೆ ಹೆಬ್ಬಾಳದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಡಿ.ಚೆನ್ನಕೇಶವ ಪ್ರತಿಕ್ರಿಯಿಸಿ, ಟೈಮ್ಸ್‌ ಇನೋವೇಟಿವ್‌ ಮೀಡಿಯಾ ಹೆಸರಿನ ಖಾಸಗಿ ಜಾಹೀರಾತು ಕಂಪನಿಯೊಂದು ಅಕ್ರಮವಾಗಿ ಬಸ್ಸು ನಿಲ್ದಾಣದ ಸಮೀಪದ ವಿದ್ಯುತ್‌ ಕಂಬದಿಂದ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದು ಬಸ್‌ ನಿಲ್ದಾಣದ ಸುತ್ತಲು ಜಾಹೀರಾತು ಫಲಕ ಅಳವಡಿಸಿತ್ತು. ಹಾಹೀರಾತು ಫಲಕದ ಮೆಟಲ್‌ ವೈರ್‌ ಸಂಪರ್ಕಕ್ಕೆ ಬಂದು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಜಾಹೀರಾತು ಫಲಕಕ್ಕೆ ನೀಡಿದ್ದ ವಿದ್ಯುತ್‌ ಸಂಪರ್ಕವನ್ನು 2020ರ ಡಿಸೆಂಬರ್‌ನಲ್ಲೇ ಸ್ಥಗಿತಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಅಕ್ರಮ ವಿದ್ಯುತ್‌ ಸಂಪರ್ಕ ಪಡೆದು ಜಾಹೀರಾತು ಫಲಕ ಅಳವಡಿಸಿರುವುದು ಸ್ಥಳ ಪರಿಶೀಲನೆಯಿಂದ ತಿಳಿದುಬಂದಿದೆ. ಹೀಗಾಗಿ ವಿದ್ಯುತ್‌ ಅವಘಡ ಬೆಸ್ಕಾಂ ನಿರ್ಲಕ್ಷ್ಯದಿಂದ ಆಗಿಲ್ಲ. ಆಕ್ರಮ ವಿದ್ಯುತ್‌ ಸಂಪರ್ಕ ಪಡೆದಿರುವ ಖಾಸಗಿ ಜಾಹೀರಾತು ಸಂಸ್ಥೆ ವಿರುದ್ಧ ದೂರು ನೀಡಲಾಗುವುದು ಎಂದರು.

ಮುರಿದ ಟವರ್‌: 4 ದಿನ ಕತ್ತಲಲ್ಲಿ 20 ಹಳ್ಳಿ

 

ಬೆಸ್ಕಾಂ ವ್ಯಾಪ್ತಿಯ ಕೆಂಗೇರಿ-1 ಉಪ ವಿಭಾಗದ ಕುಂಬಳಗೋಡು ವ್ಯಾಪ್ತಿಯಲ್ಲಿ ಭಾರೀ ಮಳೆ ಹಾಗೂ ಗಾಳಿಗೆ 400 ಕೆ.ವಿ. ಸಾಮರ್ಥ್ಯದ ಬೃಹತ್‌ ವಿದ್ಯುತ್‌ ಟವರ್‌ಗಳು ಹಾಗೂ 36 ವಿದ್ಯುತ್‌ ಕಂಬಗಳು ಮುರಿದುಬಿದ್ದಿದ್ದು, ಇದರಿಂದ ಸುಮಾರು 20 ಹಳ್ಳಿಗಳು 4 ದಿನ ಸಂಪೂರ್ಣ ಕಗ್ಗತ್ತಲಲ್ಲಿ ಹಾಗೂ ಮತ್ತೆ 3 ದಿನ ಭಾಗಶಃ ವಿದ್ಯುತ್‌ ವ್ಯತ್ಯಯವಾಗಿದೆ.

ಭಾರೀ ಮಳೆಯಿಂದಾಗಿ ಕುಂಬಳಗೋಡು ಬಳಿಯ ಕಂಬಿಪುರದ ಬಳಿ 400 ಕೆ.ವಿ. ಸಾಮರ್ಥ್ಯದ ಬೃಹತ್‌ ಟವರ್‌ಗಳು ನೆಲಕ್ಕುರುಳಿವೆ. ಇದರಿಂದ ಸ್ಥಳೀಯ 11 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ಪ್ರಸರಣ ಜಾಲವೂ ಅಸ್ತವ್ಯವಸ್ಥಗೊಂಡಿದೆ. ಇದಲ್ಲದೆ ಭಾರೀ ಮಳೆಯಿಂದಾಗಿ 36 ವಿದ್ಯುತ್‌ ಕಂಬ ಹಾಗೂ 3 ವಿದ್ಯುತ್‌ ಪರಿವರ್ತಕಗಳು ಹಾಳಾಗಿದ್ದರಿಂದ ಕುಂಬಳಗೋಡು, ಭೀಮನಕುಪ್ಪೆ ಸುತ್ತಮುತ್ತಲಿನ 20 ಹಳ್ಳಿಗಳು ಅಕ್ಷರಶಃ ಕತ್ತಲಲ್ಲಿ ಕಾಲ ಕಳೆದಿವೆ.

ಮೇ 7ರಿಂದಲೂ ತೀವ್ರ ವಿದ್ಯುತ್‌ ಸಮಸ್ಯೆ ಎದುರಿಸಿದ್ದು, ಮೇ 11ರಂದು ಬುಧವಾರದಿಂದ ವಿದ್ಯುತ್‌ ಸಮಸ್ಯೆ ಒಂದು ಹಂತಕ್ಕೆ ನಿವಾರಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈಗಲೂ ಶೇ.80ರಷ್ಟುವಿದ್ಯುತ್‌ ಕಂಬಗಳ ದುರಸ್ತಿ ಮಾತ್ರ ಪೂರ್ಣಗೊಂಡಿದ್ದು, ಇನ್ನೂ ಶೇ.20ರಷ್ಟುದುರಸ್ತಿ ಬಾಕಿ ಇದೆ. ಆದರೆ ಎರಡು-ಮೂರು ಮನೆಗಳಿರುವ ಸ್ಥಳಗಳಿಗೆ ಹೊರತುಪಡಿಸಿ ಬಹುತೇಕ ಎಲ್ಲಾ ಊರುಗಳಿಗೆ ವಿದ್ಯುತ್‌ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್‌ ಸಮಸ್ಯೆಯಿಂದಾಗಿ ಕುಂಬಳಗೋಡು ವ್ಯಾಪ್ತಿಯ ರಾಮಯ್ಯನಪಾಳ್ಯ, ತಗಚಗುಪ್ಪೆ, ದೇವಗೆರೆ, ಕುಳ್ಳೇಗೌಡನಪಾಳ್ಯ, ಗುಡಿಮಾವು, ವೆಂಕಟಾಪುರ, ಕೇತೋಹಳ್ಳಿ, ಕೋಡಿಪಾಳ್ಯ, ಬೆಟ್ಟನಪಾಳ್ಯ, ಮಲಿಗಂಡನಹಳ್ಳಿ ವ್ಯಾಪ್ತಿಯ ಜನರು ಪರದಾಡಿದ್ದಾರೆ. ಜತೆಗೆ ಈ ಭಾಗದ ಕಾರ್ಖಾನೆಗಳು, ಉದ್ದಿಮೆಗಳೂ ತೀವ್ರ ನಷ್ಟಅನುಭವಿಸಿವೆ.

click me!