ಹೃದಯ ಸಂಬಂಧಿ ಕಾಯಿಲೆಯಿಂದ ಪ್ರತಿವರ್ಷ 30 ಲಕ್ಷ ಜನ ಸಾವು: ಸಂಸದ ಡಾ.ಸಿ.ಎನ್. ಮಂಜುನಾಥ್

By Kannadaprabha News  |  First Published Jan 15, 2025, 7:55 PM IST

ಭಾರತ ದೇಶದಲ್ಲಿ ಪ್ರತಿವರ್ಷ ಹೃದಯ ಸಂಬಂಧಿ ಕಾಯಿಲೆಯಿಂದ 30 ಲಕ್ಷಕ್ಕೂ ಹೆಚ್ಚು ಜನ ಸಾವನಪ್ಪುತ್ತಿದ್ದಾರೆ. ಇದರಲ್ಲಿ 20ರಿಂದ 40ವರ್ಷದ ಒಳಗಿನ ವಯೋಮಿತಿಯ ಯುವಕರೇ ಹೆಚ್ಚು ಮೃತ ಪಡುತ್ತಿದ್ದಾರೆ. 


ನುಗ್ಗೇಹಳ್ಳಿ (ಜ.15): ಭಾರತ ದೇಶದಲ್ಲಿ ಪ್ರತಿವರ್ಷ ಹೃದಯ ಸಂಬಂಧಿ ಕಾಯಿಲೆಯಿಂದ 30 ಲಕ್ಷಕ್ಕೂ ಹೆಚ್ಚು ಜನ ಸಾವನಪ್ಪುತ್ತಿದ್ದಾರೆ. ಇದರಲ್ಲಿ 20ರಿಂದ 40ವರ್ಷದ ಒಳಗಿನ ವಯೋಮಿತಿಯ ಯುವಕರೇ ಹೆಚ್ಚು ಮೃತ ಪಡುತ್ತಿದ್ದಾರೆ. ಸರಿಯಾದ ಆಹಾರ ಕ್ರಮಗಳ ಬಗ್ಗೆ ಹೆಚ್ಚು ಗಮನಹರಿಸಬೇಕು. ಆಗಮಾತ್ರ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೃದ್ರೋಗ ತಜ್ಞ ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು. ಹೋಬಳಿಯ ಹೊನ್ನಮಾರನಹಳ್ಳಿ ಬಳಿ ಇರುವ ಕೋಟಿ ಮನೆ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ತೃತೀಯ ವರ್ಷದ ಕೋಟೆ ಮನೆ ಕಲೋತ್ಸವ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಭಾಗದ ಮಕ್ಕಳಿಗೆ ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಗುಣಮಟ್ಟದ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ರಿಯಾಯಿತಿ ದರದಲ್ಲಿ ಕೊಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ನಾಯಕತ್ವದಲ್ಲಿ ಭಾರತ ವಿಶ್ವಮಟ್ಟದಲ್ಲಿ ಉತ್ತಮ ಹೆಸರು ಮಾಡಿದೆ 2047ನೇ ಇಸವಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದೆ ಆಗ ಭಾರತದ ಆರ್ಥಿಕ ಪ್ರಗತಿ ವಿಶ್ವದ ಗಮನ ಸೆಳೆಯಲಿದೆ ಎಂದರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೂಡ ಕಲಿಸಬೇಕು. ಆಗಮಾತ್ರ ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬ ಪೋಷಕರು ಚಿಂತಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

Tap to resize

Latest Videos

ಹೃದಯಾಘಾತದ ಸಾವು ತಪ್ಪಿಸಲು ಹಬ್ ಆಡ್ ಸ್ಪೋಕ್ ಮಾದರಿ ಉತ್ತಮ: ಸಂಸದ ಡಾ.ಸಿ.ಎನ್. ಮಂಜುನಾಥ್

ಕೋಟೆ ಮನೆ ಶಿಕ್ಷಣ ಸಂಸ್ಥೆ ಈ ಭಾಗದ ಗ್ರಾಮೀಣ ಪ್ರದೇಶದ ರೈತರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿದೆ. ಅವರ ಶಿಕ್ಷಣ ಸೇವೆ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಬೆಂಗಳೂರು ಗ್ರಾಮಾಂತರ ಸಂಸದರಾಗಿರುವ ಡಾ. ಮಂಜುನಾಥ್ ಅವರು ಕೇಂದ್ರ ಸರ್ಕಾರದ ಸಿಎಸ್‌ಆರ್‌ ಫಂಡ್‌ನಿಂದ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊಡಿಸುವಂತೆ ಮನವಿ ಮಾಡಿದರು. ರಾಜ್ಯವಲ್ಲದೆ ಬೇರೆ ರಾಜ್ಯಗಳ ಬಡವರಿಗೂ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಲು ಡಾ. ಸಿ. ಎನ್. ಮಂಜುನಾಥ್ ಅವರ ಪರಿಶ್ರಮವೇ ಮೂಲ ಕಾರಣವಾಗಿದೆ. 

ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನಲ್ಲಿ ತಾಲೂಕಿನ ಮಗನಾದ ಡಾ.ಸಿಎನ್ ಮಂಜುನಾಥ್ ರವರಿಗೆ ಕೇಂದ್ರ ಸಚಿವ ಸ್ಥಾನ ಮೋದಿಯವರ ನೇತೃತ್ವದಲ್ಲಿ ಸಿಗಲಿದೆ ಎಂಬ ಅಚಲವಾದ ನಂಬಿಕೆ ರಾಜ್ಯದ ಜನರಿಗಿದ್ದು, ಅವರು ಕೇಂದ್ರ ಆರೋಗ್ಯ ಸಚಿವರಾದರೆ ಭಾರತದ ಆರೋಗ್ಯ ಕ್ಷೇತ್ರದಲ್ಲೇ ಹೆಚ್ಚು ಬದಲಾವಣೆ ತರಲಿದ್ದಾರೆ ಎಂದರು. ಕೋಟೆಮನೆ ಶಿಕ್ಷಣ ಸಂಸ್ಥೆ ಮೂರು ವರ್ಷಗಳನ್ನು ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸಂಸ್ಥೆ ಇನ್ನೂ ಹೆಚ್ಚು ಈ ಭಾಗದ ಮಕ್ಕಳಿಗೆ ಉತ್ತಮವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಿ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ದೀಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಹೆಚ್ಚು ಮೊಬೈಲ್ ಬಳಕೆಯಿಂದ ಅವರ ಶಿಕ್ಷಣದ ಮೇಲೆ ಹಾಗೂ ಆರೋಗ್ಯದ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ. 

ಈ ಬಗ್ಗೆ ಮಕ್ಕಳ ಪೋಷಕರು ಎಚ್ಚರಿಕೆ ವಹಿಸಿ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು. ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್ ಕಲೋತ್ಸವ ಅಂಗವಾಗಿ ನಡೆದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತಗೊಂಡ ಮಕ್ಕಳಿಗೆ ಹಾಗೂ ಉತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಆಯ್ಕೆಗೊಂಡ ಮಕ್ಕಳಿಗೆ ಸಂಸದ ಡಾ. ಸಿ.ಎನ್ ಮಂಜುನಾಥ್ ಹಾಗೂ ಶಾಸಕ ಬಾಲಕೃಷ್ಣ ರವರು ಬಹುಮಾನ ವಿತರಣೆ ಮಾಡಿದರು. ಕಲೋತ್ಸವ ಅಂಗವಾಗಿ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಆಡಳಿತ ಮಂಡಳಿ ವತಿಯಿಂದ ಡಾ. ಸಿ ಎನ್ ಮಂಜುನಾಥ್ ಹಾಗೂ ಶಾಸಕ ಸಿ ಎನ್ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿಯ ತಳ್ಳಿದ ರಾಹುಲ್‌ ಗಾಂಧಿ, ಚಿಕಿತ್ಸೆ ನೀಡಿದ ಡಾ. ಸಿಎನ್‌ ಮಂಜುನಾಥ್‌!

ಹೋಬಳಿ ಕೇಂದ್ರದಲ್ಲಿ ಅದ್ಧೂರಿ ಸ್ವಾಗತ: ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಗೊಂಡು ತಾಲೂಕಿಗೆ ಆಗಮಿಸಿದ ಡಾ. ಸಿ. ಎನ್. ಮಂಜುನಾಥ್ ಅವರಿಗೆ ಹೋಬಳಿ ಕೇಂದ್ರದಲ್ಲಿ ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಿ ಜೆಡಿಎಸ್ ನಾಯಕರು, ಕಾರ್ಯಕರ್ತರು ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ರಿಯಲ್ ಪುಟ್ಟಸ್ವಾಮಿಗೌಡ, ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಗಂಗಾಧರೇಗೌಡ, ಕಾರ್ಯದರ್ಶಿ ಎಚ್. ಜೆ. ಮಧು ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಡಿ ಪವಿತ್ರ ಮಧುಕುಮಾರ್, ಬಿಆರ್‌ಸಿ ಅನಿಲ್ ಕುಮಾರ್, ಸಿಆರ್‌ಪಿ ಸಂಘದ ಅಧ್ಯಕ್ಷ ಎಚ್ ಟಿ ಮಂಜೇಗೌಡ, ಬೆಂಗಳೂರು ರಾಜಾಜಿನಗರ ಎಸ್ ಐ ಆಸ್ಪತ್ರೆ ಆಡಳಿತ ಅಧಿಕಾರಿ ಡಾ. ನಾಗೇಶ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಜೆ.ಸೋಮನಾಥ್, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೊರೆಸ್ವಾಮಿ, ಸೇರಿದಂತೆ ಶಾಲಾ ಆಡಳಿತ ಮಂಡಳಿ ಶಿಕ್ಷಕ ವೃಂದ ಹಾಗೂ ಸುತ್ತಮುತ್ತಲ ಎಲ್ಲಾ ಗ್ರಾಮಗಳ ಮಕ್ಕಳ ಪೋಷಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.

click me!