ಬೆಂಗಳೂರಿನಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿದ ಘಟನೆಯಿಂದ ತೀವ್ರ ನೋಂದಿರುವ ಮಾಲೀಕ ಕರ್ಣ ಆರೋಗ್ಯದಲ್ಲಿ ಏರುಪೇರಾಗಿದೆ.
ಬೆಂಗಳೂರು(ಜ.15) ಹಸುವಿನ ಕೆಚ್ಚಲು ಕೊಯ್ದ ಅಮಾನವೀಯ ಘಟನೆ ವಿರುದ್ದ ಆಕ್ರೋಶಗಳು ಹೋರಾಟಗಳು ನಡೆಯುತ್ತಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಆದರೆ ಆಕ್ರೋಶ ಮಾತ್ರ ತಣ್ಣಗಾಗುತ್ತಿಲ್ಲ. ಈ ಘಟನೆ ಹಿಂದಿರುವ ದುರುಳರು ಬೇರೆ ಇದ್ದಾರೆ. ಅವರನ್ನು ಪತ್ತೆ ಹಚ್ಚಬೇಕು ಅನ್ನೋ ಆಗ್ರಹವೂ ಕೇಳಿಬಂದಿದೆ. ಇತ್ತ ಹಸುವಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಹಸುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ ಹಸುವಿನ ಮಾಲೀಕ ಕರ್ಣ ಈ ಘಟನೆಯಿಂದ ತೀವ್ರ ನೊಂದಿದ್ದಾರೆ. ಹಸುವಿನ ನೋವು, ಆಕ್ರಂದನ ನೋಡಲಾರದ ಮಾಲೀಕ ಕರ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಬಿಪಿ ಲೋ ಆಗಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.
ಘಟನೆ ಬೆಳಕಿಂದ ಬಂದ ಬಳಿಕ ಹಸುಗಳ ಮಾಲೀಕ ಕರ್ಣ ತೀವ್ರವಾಗಿ ಆಘಾತಗೊಂಡಿದ್ದಾರೆ. ಸರಿಯಾಗಿ ಆಹಾರ ಸೇವಿಸಿಲ್ಲ. ನಿದ್ದೆ ಸರಿಯಾಗಿ ಮಾಡಿಲ್ಲ. ಹಸುಗಳ ನೋವು, ಮೂಕವೇದನೆಯಿಂದ ಕರ್ಣ ಕರುಳು ಚುರ್ ಎನ್ನುತ್ತಿದೆ. ಹೀಗಾಗಿ ಕರ್ಣ ಅವರ ಆರೋಗ್ಯ ಕ್ಷೀಣಿಸಿದೆ. ಲೋ ಬಿಪಿ ಸಮಸ್ಯೆಯಿಂದ ಕರ್ಣ ಬಳಲುತ್ತಿದ್ದಾರೆ. ವೈದ್ಯರ ಭೇಟಿ ಮಾಡಿ ಚಿಕಿತ್ಸೆ ಪಡೆದಿದ್ದರೆ. ಇದೇ ವೇಳೆ ವೈದ್ಯರು ಕೆಲ ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ.
ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ!
ಹಸುಗಳನ್ನು ತನ್ನ ಮಕ್ಕಳಂತೆ ಸಾಕುತ್ತಿದ್ದ ಕರ್ಣ ಅವರಿಗೆ ಘಟನೆ ತೀವ್ರ ಆಘಾತ ತಂದಿದೆ. ಪ್ರತಿ ದಿನ ಹಸುಗಳ ಆರೈಕೆ ಮಾಡುತ್ತಾ ಅದರಲ್ಲೇ ಜೀವನ ಸಾಗಿಸುತ್ತಿದ್ದ ಕರ್ಣಗೆ ಈ ಘಟನೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಸುಗಳ ಸ್ಥಿತಿ ಕಂಡು ಮರಗುತ್ತಿದ್ದಾರೆ. ಇದರಿಂದ ಮಾಲೀಕ ಕರ್ಣ ಅವರ ಆರೋಗ್ಯವೂ ಹದಗೆಟ್ಟಿದೆ. ಸದ್ಯ ಕರ್ಣ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಕೆಲ ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಕರ್ಣ ಪುತ್ರಿ ಭೂಮಿಕಾ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಚಾಮರಾಜಪೇಟೆ ಆಸ್ಪ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಸುಗಳು ಹಾಗೂ ಮಾಲೀಕ ಕರ್ಣ ಅವರನ್ನು ಭೇಟಿಯಾಗಲು ಬಂದ ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್‌ಗೆ ನಿರಾಸೆಯಾಗಿದೆ. ಹಸುವಿನ ಮಾಲೀಕ ಕರ್ಣ ಆರೋಗ್ಯ ಏರುಪೇರಾಗಿರುವ ಕಾರಣ ಭೇಟಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಚಾಮರಾಜಪೇಟಿ ಪಶು ವೈದ್ಯಕೀಯ ಆಸ್ಪತ್ರೆಗೆ ತೆರಳಿ ಹಸುಗಳ ಆರೋಗ್ಯ ಕುರಿತು ವೈದ್ಯರಿಂದ ಮಾಹಿತ ಪಡೆದಿದ್ದಾರೆ.
ಭಾನುವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಸಂಬಂಧ ಬಿಹಾರ ಮೂಲದ ಶೇಖ್ ನಸ್ರುವನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಘಟನೆ ಕೇವಲ ಶೇಖ್ ನಸ್ರು ಒಬ್ಬನಿಂದ ಆಗಿಲ್ಲ. ಇದರ ಹಿಂದೆ ಹಲರ ಕೈವಾಡವಿದೆ. ಸಮುದಾಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವುದು. ಭಯ ಹುಟ್ಟಿಸುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಹೇಳಿದೆ. ಆದರೆ ಈ ಘಟನೆ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥ ಎಂದಿದ್ದಾರೆ. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತ ಮಾಲೀಕ ಕರ್ಣ ಅವರಿಗೆ ಮೂರು ಹಸುಗಳನ್ನು ಸ್ಥಳೀಯ ಶಾಸಕ ಹಾಗೂ ಸಚಿವ ಜಮೀರ್ ಅಹಮ್ಮದ್ ಉಡುಗೊರೆಯಾಗಿ ನೀಡಿದ್ದಾರೆ. ಕರ್ಣ ಅವರು ಹಸುವಿನಿಂದ ಜೀವನ ಸಾಗಿಸುತ್ತಿದ್ದರು. ಆದರೆ ಈ ಘಟನೆ ನಿಜಕ್ಕೂ ಆಘಾತ ತಂದಿದೆ. ಕರ್ಣ ಅವರ ಜೀವನೋಪಾಯಕ್ಕೆ ಸಮಸ್ಯೆಯಾಗಬಾರದು ಎಂದು ಮೂರು ಹಸುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
3 ಹಸುಗಳ ಕೆಚ್ಚಲು ಕತ್ತರಿಸಿದವನ ಹೆಡೆಮುರಿ ಕಟ್ಟಿದ ಪೊಲೀಸ್