National Youth Festival 2023: ವಿಶೇಷ ನೋಂದಣಿ ಕಿಟ್ ಜೊತೆ ಗಣ್ಯರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

By Suvarna NewsFirst Published Jan 9, 2023, 3:00 PM IST
Highlights

ಉತ್ತರ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಧಾರವಾಡದಲ್ಲಿ ಜನವರಿ 12 ರಿಂದ 16 ರ ವರೆಗೆ ಜರುಗುತ್ತಿರುವ 26 ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ದೇಶದ ಸುಮಾರು 8 ಕೇಂದ್ರಾಡಳಿತ ಪ್ರದೇಶ ಹಾಗೂ 28 ರಾಜ್ಯಗಳಿಂದ ಗಣ್ಯರು, ಹಲವು ಪ್ರತಿಬೆಗಳು ಭಾಗವಹಿಸಲಿದ್ದಾರೆ.

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜ.9): ಉತ್ತರ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಧಾರವಾಡದಲ್ಲಿ ಜನವರಿ 12 ರಿಂದ 16 ರ ವರೆಗೆ ಜರುಗುತ್ತಿರುವ 26 ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ದೇಶದ ಸುಮಾರು 8 ಕೇಂದ್ರಾಡಳಿತ ಪ್ರದೇಶ ಹಾಗೂ 28 ರಾಜ್ಯಗಳಿಂದ ಯುವ ಪ್ರತಿಭೆಗಳು, ಪ್ರತಿಭಾವಂತ ಕಲಾವಿದರು ಮತ್ತು ರಾಷ್ಟ್ರೀಯ, ಅಂತರರಾಷ್ಟ್ರೀಯ ಹೆಸರುಗಳಿಸಿರುವ ಹಿರಿಯ ಕಲಾಜೀವಿಗಳು ಭಾಗವಹಿಸುತ್ತಿದ್ದಾರೆ. 

ಕರ್ನಾಟಕದ ಭವ್ಯ ಪರಂಪರೆಯನ್ನು ಮತ್ತು ಉತ್ತರಕರ್ನಾಟಕದ ವಿಶೇಷತೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಧಾರವಾಡ ಜಿಲ್ಲಾಡಳಿತವು ಅತಿಥಿಗಳನ್ನು ಸ್ವಾಗತಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಇದರ ಜವಾಬ್ದಾರಿ ನಿರ್ವಹಿಸುತ್ತಿರುವ ಹುಡಾ ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ ನೇತೃತ್ವದ ಹುಡಾ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿರುವ ಸ್ವಾಗತ ಸಮಿತಿಯು ಕಳೆದ ಒಂದು ವಾರದಿಂದ ಶ್ರಮಿಸುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ಹಾಗೂ ಗಿರೀಶ ಪದಕಿ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

ಅತಿಥಿಗಳಿಗೆ ನೀಡುವ ನೋಂದಣಿ ಕಿಟ್: ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಸುಮಾರು 7,500 ಸ್ಪರ್ಧಾಳುಗಳು ಮತ್ತು ಅತಿಥಿಗಳಿಗೆ ನೀಡಲು ವಿಶೇಷವಾದ ನೋಂದಣಿ ಕಿಟ್‍ಗಳನ್ನು ರೂಪಿಸಲಾಗಿದೆ ವಿಶೇಷವಾಗಿ ಈ ಯುವ ಜನೋತ್ಸವವನ್ನು ಹಸಿರು ಯುವಜನೋತ್ಸವವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ನೋಂದಣಿ ಕಿಟ್‍ದಲ್ಲಿನ ವಸ್ತುಗಳು ಮರುಬಳಕೆಯ ವಸ್ತುಗಳಾಗಿವೆ.

National Youth Festival 2023: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ, ಲಾಂಛನ ಬಿಡುಗಡೆ ಮಾಡಿದ‌ ಸಿಎಂ

ನೋಂದಣಿ ಕಿಟ್‍ದಲ್ಲಿ ಐಡಿ ಕಾರ್ಡ್, ಮರುಬಳಕೆಯ ಸ್ಟೀಲ್ ವಾಟರ್ ಬಾಟಲ್, ಉತ್ತಮ ಗುಣಮಟ್ಟದ ಬ್ಯಾಗ್, ಸುಮಾರು 8 ಕ್ಕೂ ಹೆಚ್ಚು ದಿನಬಳಕೆಯ ವಸ್ತುಗಳಿರುವ ಸಣ್ಣ ಕಿಟ್, ಯೋಗಾ ಮ್ಯಾಟ್, ಟ್ರ್ಯಾಕ್ ಸೂಟ್, ಯುವಜನೋತ್ಸವ ಮಾಹಿತಿ ಇರುವ ಇವೆಂಟ್ ಮೆನ್ಯೂ, ಕರ್ನಾಟಕ ಹಾಗೂ ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಪುಸ್ತಕ ಮತ್ತು ಅರವಿಂದೊ ಟ್ರಸ್ಟ್ ನೀಡಿರುವ ಯೂಥ್ ಆಫ್ ಇಂಡಿಯಾ ಪುಸ್ತಕ ಹಾಗೂ ಮುಖ್ಯವಾಗಿ ಧಾರವಾಡ ನೆನಪಿಸುವ, ಗುರುತಿಸುವ ಧಾರವಾಡ ಪೇಡಾ ಬಾಕ್ಸ್ ಹಾಗೂ ಖಾದಿ ಧ್ವಜದ ನೆನಪಿನ ಕಾಣಿಕೆ ಇರುತ್ತದೆ.

National Youth Festival 2023: ಯುವಜನೋತ್ಸವದ ನೆಪದಲ್ಲಿ ಹಣ ವಸೂಲಿ ಆರೋಪ

ಯುವಜನೋತ್ಸವ ಸಹಾಯ ಕೇಂದ್ರ : ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ಇತರ ಜಿಲ್ಲೆ ಹಾಗೂ ಅಂತರರಾಜ್ಯಗಳಿಂದ ಅತಿಥಿಗಳು ಆಗಮಿಸುವುದರಿಂದ ಅವರಿಗೆ ಸಾರಿಗೆ, ವಸತಿ, ನೋಂದಣಿ ಸ್ಥಳ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ನೀಡಿ, ತಕ್ಷಣಕ್ಕೆ ಸಹಾಯ ಮಾಡಲು ಅನುಕೂಲವಾಗುವಂತೆ ಸ್ವಾಗತ ಸಮಿತಿಯು ಸಹಾಯ ಕೇಂದ್ರಗಳನ್ನು ತೆರೆದಿದೆ ಮುಖ್ಯವಾಗಿ ಧಾರವಾಡ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಬಸ್‍ನಿಲ್ದಾಣ, ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಮತ್ತು ಸಹಾಯ ಕೇಂದ್ರಕ್ಕೆ ಆಗಮಿಸುವ ಅತಿಥಿಗಳನ್ನು ನಿಲ್ದಾಣದಿಂದಲೇ ಸ್ವಾಗತಿಸಲು ಕಲಾ ತಂಡಗಳನ್ನು ಸಹ ನೇಮಿಸಲಾಗಿದೆ.  ಸಹಾಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ದಿನದ 24 ಗಂಟೆಯೂ ಸಹಾಯ ಕೇಂದ್ರದಲ್ಲಿದ್ದು, ಬರುವ ಅತಿಥಿಗಳಿಗೆ ಅವರು ಸಹಾಯ ನೀಡಲಿದ್ದಾರೆ.

click me!