ಡಿಸೆಂಬರ್ ತಿಂಗಳಾಂತ್ಯಕ್ಕೆ ಪಟ್ಟಣದ 25 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ಆಸ್ಪತ್ರೆಯು ಕಾರ್ಯಾರಂಭಗೊಳ್ಳಲಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.
ಹುಣಸೂರು (ಅ.29): ಡಿಸೆಂಬರ್ ತಿಂಗಳಾಂತ್ಯಕ್ಕೆ ಪಟ್ಟಣದ 25 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ಆಸ್ಪತ್ರೆಯು ಕಾರ್ಯಾರಂಭಗೊಳ್ಳಲಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು. ಪಟ್ಟಣದ ಹುಣಸೂರು-ಮಡಿಕೇರಿ ಬೈಪಾಸ್ ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ 25 ಕೋಟಿ ರು. ವೆಚ್ಚದಡಿ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾಮಗಾರಿ 2018ರಲ್ಲಿ ಆರಂಭಿಸಿತ್ತು. ಆದರೆ ಕೆಲ ಸ್ಥಳೀಯ ಒತ್ತಡಗಳಿಂದಾಗಿ 100 ಹಾಸಿಗೆ ಬದಲಾಗಿ 135 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧರಿಸಿತು. ಅದರಿಂದಾಗಿ ನಿಗದಿತ ಮೊತ್ತ 25 ಕೋಟಿ ರು. ಗಳಿಗಿಂತ ಹೆಚ್ಚುವರಿ 7 ಕೋಟಿ ರು. ಗಳ ಕೊರತೆ ಉಂಟಾಗಿದೆ.
ಸಿದ್ದು, ಡಿಕೆಶಿ ಸದಾ ಉತ್ತರ-ದಕ್ಷಿಣ ಧ್ರುವ: ಸಚಿವ ಸುಧಾಕರ್ ವ್ಯಂಗ್ಯ
ಈ ನಡುವೆ ನಿರ್ಮಾಣ ಕಾಮಗಾರಿ ವೆಚ್ಚ ಹೆಚ್ದಾದ ಕಾರಣ ಆಸ್ಪತ್ರೆಗೆ ಅವಶ್ಯಕವಾದ ಕೆಲ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಈ ಪೈಕಿ ನೀರಿನ ಸಂಪ್, ಲಿಫ್ಟ್, ಸುತ್ತಲು ಕಾಂಪೌಂಡ್, ಆಸ್ಪತ್ರೆ ಆವರಣದಲ್ಲಿನ ರಸ್ತೆಗಳ ನಿರ್ಮಾಣ ಹೀಗೆ ಅತ್ಯಗತ್ಯ ಸೌಲಭ್ಯಗಳನ್ನು ಕೈಬಿಡಲಾಗಿದೆ. ಪರಿಶೀಲನೆ ವೇಳೆ ತಮ್ಮ ಗಮನಕ್ಕೆ ವಿಷಯ ಬಂದಿದ್ದು, ಹೆಚ್ಚುವರಿ 7 ಕೋಟಿ ರು. ಗಳ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು. ಅಲ್ಲದೇ ಆಸ್ಪತ್ರೆಗೆ ಅವಶ್ಯವಿರುವ 2 ಕೋಟಿ ರು. ವೆಚ್ಚದಡಿ ನೂತನ ತಂತ್ರಜ್ಞಾನದ ಉಪಕರಣಗಳನ್ನು ಶೀಘ್ರ ಸರಬರಾಜು ಮಾಡಲಾಗುವುದು. ಡಿಸೆಂಬರ್ ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆಸ್ಪತ್ರೆ ಕಾರ್ಯಾರಂಭ ಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣಲ್ಲಿರುವ ಡಿ. ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯ ಜಾಗದಲ್ಲಿ 30 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಗು ಆರೈಕೆ ಕೇಂದ್ರವನ್ನು ತೆರೆಯಲು ಉದ್ದೇಶಿಸಿದ್ದು, ಅವಶ್ಯ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು.ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಹುಣಸೂರು ಜನರ ಬಹುವರ್ಷಗಳ ಆಸೆಯಂತೆ ಈ ಆಸ್ಪತ್ರೆ ಡಿಸೆಂಬರ್ ತಿಂಗಳಾಂತ್ಯಕ್ಕೆ ಕಾರ್ಯಾರಂಭಗೊಳಿಸುವುದಾಗಿ ಸಚಿವರು ನೀಡಿರುವ ಭರವಸೆ ತಮಗೆ ತೃಪ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಂಸದ ಪ್ರತಾಪ್ ಸಿಂಹ ಕೇಂದ್ರ ಸರ್ಕಾರದ ಅನುದಾನದಡಿ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದರು.
ದತ್ತು ಪಡೆದ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಸಚಿವ ಸುಧಾಕರ್
ಭೇಟಿ ವೇಳೆ ಹುಡಾ ಅಧ್ಯಕ್ಷ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಯೋಗಾನಂದಕುಮಾರ್, ವೀರೇಶ್‌ರಾವ್ ಬೋಬಡೆ, ನಗರಸಭಾ ಸದಸ್ಯರಾದ ಸ್ವಾಮಿಗೌಡ, ಜಬೀ ಉಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ, ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಇದ್ದರು.