ಮಂಡ್ಯ : 9 ತಿಂಗಳಲ್ಲಿ 23 ದೇಗುಲದಲ್ಲಿ ಕಳ್ಳತನ

By Kannadaprabha News  |  First Published Sep 22, 2020, 11:55 AM IST

ಮಂಡ್ಯ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೇಗುಲ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 9 ತಿಂಗಳಲ್ಲಿ  23 ದೇಗುಲಗಳಲ್ಲಿ ಕಳ್ಳತನ ನಡೆದಿದೆ.


ವರದಿ : ಮಂಡ್ಯ ಮಂಜುನಾಥ

 ಮಂಡ್ಯ (ಸೆ.22): ಜಿಲ್ಲೆಯಲ್ಲಿ ಕಳೆದ 9 ತಿಂಗಳಲ್ಲಿ 23 ದೇವಾಲಯಗಳಲ್ಲಿ ಕಳ್ಳತನ ನಡೆದಿರುವುದಾಗಿ ಪೊಲೀಸ್‌ ಇಲಾಖೆಯ ವರದಿ ತಿಳಿಸಿದೆ. ಹುಂಡಿಗಳನ್ನೇ ಟಾರ್ಗೆಟ್‌ ಮಾಡಿಕೊಂಡು ಕಳ್ಳರು ದೇಗುಲಗಳಿಗೆ ನುಗ್ಗಿ ಕೃತ್ಯವೆಸಗಿದ್ದಾರೆ. ಆದರೆ, ನಗರದ ಶ್ರೀಅರಕೇಶ್ವರ ಸ್ವಾಮಿ ದೇವಾಲಯದಲ್ಲಿ ಮೂವರನ್ನು ಹತ್ಯೆಗೈದು ಹುಂಡಿ ದರೋಡೆ ನಡೆಸಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.

Tap to resize

Latest Videos

ದೇವಸ್ಥಾನಗಳಿಗಿರುವ ಭದ್ರತೆ ಕೊರತೆಯೇ ಕಳ್ಳರ ಕಣ್ಣು ಹುಂಡಿಗಳ ಮೇಲೆ ಬೀಳುವುದಕ್ಕೆ ಮುಖ್ಯ ಕಾರಣವಾಗಿದೆ. ಜಿಲ್ಲೆಯೊಳಗೆ ಎಷ್ಟುಕಳ್ಳರ ಗುಂಪು ದೇವಾಲಯಗಳಿಗೆ ನುಗ್ಗಿ ಹುಂಡಿ ಹಣ ದೋಚುವುದರಲ್ಲಿ ಸಕ್ರಿಯವಾಗಿವೆ ಎಂಬ ಬಗ್ಗೆ ನಿಖರವಾದ ಮಾಹಿತಿ ಪೊಲೀಸ್‌ ಇಲಾಖೆಗೆ ಇಲ್ಲದಂತಾಗಿದೆ. ಶ್ರೀಅರಕೇಶ್ವರ ದೇವಾಲಯದಲ್ಲಿ ಹುಂಡಿ ದರೋಡೆ ಪ್ರಕರಣದ ನಂತರವೂ ದೇಗುಲಗಳಿಗೆ ನುಗ್ಗಿ ಹುಂಡಿ ದೋಚುವ ಘಟನೆಗಳು ಮುಂದುವರೆದಿರುವುದು ವಿಚಿತ್ರವೆನಿಸಿದರೂ ಸತ್ಯ.

ಶ್ರೀಅರಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರು ಹತ್ಯೆಯಾದ ನಂತರದಲ್ಲೂ ಮುಜರಾಯಿ ಇಲಾಖೆ ಉನ್ನತಾಧಿಕಾರಿಗಳು ಸೇರಿದಂತೆ ಯಾರೊಬ್ಬರೂ ಎಚ್ಚೆತ್ತುಕೊಂಡಿಲ್ಲ. ‘ಎ’ ಹಾಗೂ ‘ಬಿ’ ದರ್ಜೆಯ ದೇವಸ್ಥಾನಗಳಿಗೆ ಭದ್ರತೆಯನ್ನು ಹೆಚ್ಚಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮ ವಹಿಸದಿರುವುದು ಇಲಾಖಾ ಸಚಿವರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷೀಭೂತವಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಆಂಜನೇಯನ ದೇವಸ್ಥಾನದೊಳಗೆ ನಡೆದ ಈ ದೃಶ್ಯ .

ಇದರ ಪರಿಣಾಮ ದೇವರ ಮೇಲಿನ ಭಕ್ತಿಯಿಂದ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಭಕ್ತರು ನೀಡುವ ಹಣವೆಲ್ಲವೂ ಕಳ್ಳರ ಪಾಲಾಗುತ್ತಿದೆ. ಇಲ್ಲವೇ, ಸರ್ಕಾರದ ಖಜಾನೆ ಅಥವಾ ಅಧಿಕಾರಿಗಳ ಜೇಬು ಸೇರುತ್ತಿದೆ. ಹೀಗಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳು ಅಭಿವೃದ್ಧಿಯಿಂದ ವಂಚಿತವಾಗಿ ಪಾಳು ಬೀಳಲು ಪ್ರಮುಖ ಕಾರಣವಾಗಿದೆ.

ಮುಜರಾಯಿ ಇಲಾಖೆ ದೇವಾಲಯದಿಂದ ಬರುವ ಆದಾಯ ಮೂಲದ ಮೇಲೆ ಪ್ರಧಾನವಾಗಿ ಕಣ್ಣಿಟ್ಟಿದೆಯೇ ವಿನಃ ಭದ್ರತೆ, ಅಭಿವೃದ್ಧಿ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಸಣ್ಣ-ಪುಟ್ಟದುರಸ್ತಿ ಕೆಲಗಳಿಗೂ ನಯಾಪೈಸೆ ಹಣ ಬಿಡುಗಡೆ ಮಾಡದೆ ದಾನಿಗಳನ್ನೇ ಸಂಪೂರ್ಣವಾಗಿ ಅವಲಂಬಿಸಿರುವುದು ನಾಚಿಕೆಗೇಡಿನ ವಿಚಾರ.

ಅರ್ಚಕರ ಹತ್ಯೆ ಕೇಸ್‌: ಮೂವರು ಆರೋಪಿಗಳ ಶೂಟೌಟ್‌ ...

ಭದ್ರತೆಯೇ ಇಲ್ಲ:

ಮುಜರಾಯಿ ಇಲಾಖೆ ವ್ಯಾಪ್ತಿಯ ‘ಬಿ’ ಹಾಗೂ ‘ಸಿ’ ದರ್ಜೆ ದೇವಸ್ಥಾನಗಳಲ್ಲಿ ಭದ್ರತೆ ಇರುವುದೇ ಇಲ್ಲ. ರಾತ್ರಿ ಒಮ್ಮೆ ಪೊಲೀಸರು ಗಸ್ತು ತಿರುಗಲು ಬರುವುದೇ ಈ ದೇವಸ್ಥಾನಗಳಿಗಿರುವ ದೊಡ್ಡ ಭದ್ರತೆ. ಇನ್ನು ದೇವಸ್ಥಾನಗಳಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳು ಬೆದರುಬೊಂಬೆಗಳಂತಿರುತ್ತವೆ. ಇವುಗಳಿಂದ ಯಾವ ಉಪಯೋಗವೂ ಇಲ್ಲ.

ಈ ದೇವಸ್ಥಾನಗಳನ್ನು ಗುರಿಯಾಗಿಸಿಕೊಳ್ಳುವ ಕಳ್ಳರು ವ್ಯವಸ್ಥಿತ ಸಂಚಿನೊಂದಿಗೆ ದೇಗುಲಗಳಿಗೆ ನುಗ್ಗಿ ಹುಂಡಿ ಹಣ ದೋಚುತ್ತಿದ್ದಾರೆ. ಇಂತಹ ದೇವಾಲಯಗಳಲ್ಲಿ ಭದ್ರತೆಗೆ ಯಾರೂ ಇರುವುದಿಲ್ಲವೆಂಬ ಖಚಿತತೆ ಇರುವ ಕಾರಣದಿಂದಲೇ ಕಳ್ಳರು ಹುಂಡಿ ದರೋಡೆಗೆ ಮುಂದಾಗುತ್ತಿದ್ದಾರೆ. 8 ತಿಂಗಳಿಂದ 9 ತಿಂಗಳವರೆಗೆ ಹುಂಡಿ ತೆರೆಯುವುದಕ್ಕೆ ಮುಜರಾಯಿ ಅಧಿಕಾರಿಗಳು ಮೀನಮೇಷ ಎಣಿಸುವುದು ಸಹ ಕಳ್ಳತನಕ್ಕೆ ದಾರಿಮಾಡಿಕೊಟ್ಟಿದೆ ಎನ್ನುವುದು ಹಲವರ ಆರೋಪವಾಗಿದೆ.

ವ್ಯವಸ್ಥಾಪನಾ ಸಮಿತಿ ನವೀಕರಿಸಿಲ್ಲ

ದೇವರ ಮೇಲೆ ಜನರಲ್ಲಿ ನಂಬಿಕೆ ಹೆಚ್ಚಿರುವ ಕಾರಣ ಆ ಒಕ್ಕಲುತನದವರು ಆಯಾ ದೇವಸ್ಥಾನಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ, ಒಲವು ತೋರುವುದು ಹಿಂದಿನಿಂದ ಬಂದಿರುವ ಸಂಪ್ರದಾಯವಾಗಿದೆ. ದೇಗುಲಗಳಲ್ಲಿ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ, ಟ್ರಸ್ಟ್‌ ಮಾಡಿಕೊಂಡವರು ಅಭಿವೃದ್ಧಿಗೆ ಟೊಂಕ ಕಟ್ಟಿರುತ್ತಾರೆ. ಇಂತಹ ಸಮಿತಿಗಳಲ್ಲಿ ಕನಿಷ್ಠ 11 ಮಂದಿ ಸದಸ್ಯರು ಇರುತ್ತಾರೆ. ಇವರು ದೇವಾಲಯದ ಭದ್ರತೆ, ಹುಂಡಿ ಹಣ ಸಂಗ್ರಹ, ಅಭಿವೃದ್ಧಿ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ.

ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ನಾಲ್ಕು ವರ್ಷಗಳ ಹಿಂದೆ ಇಂತಹ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದವು. ಆ ನಂತರದಲ್ಲಿ ಆ ಸಮಿತಿಗಳನ್ನು ಪುನಾರಚನೆ ಮಾಡುವ ಪ್ರಕ್ರಿಯೆಗೆ ತಡೆಯೊಡ್ಡಲಾಗಿದೆ. ಕೆಲವರು ಹೇಳುವ ಪ್ರಕಾರ ದೇವಾಲಯದ ಹುಂಡಿ ಹಣ ಸಂಗ್ರಹಿಸುವಾಗ ಸಮಿತಿ ಸದಸ್ಯರ ಎದುರು ಎಣಿಕೆ ಮಾಡುವುದು, ವಿಡಿಯೋ ಚಿತ್ರೀಕರಣ ಮಾಡುವುದು, ಅದನ್ನು ಸಮಿತಿ ಸದಸ್ಯರ ಸಮ್ಮುಖದಲ್ಲಿ ಬ್ಯಾಂಕಿಗೆ ಜಮೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದ್ದವು. ಪಾಳು ಬಿದ್ದಿರುವ ದೇಗುಲಗಳತ್ತ ತಿರುಗಿಯೂ ನೋಡದ ಮುಜರಾಯಿ ಇಲಾಖೆ, ಗ್ರಾಮದ ಮುಖಂಡರು, ದಾನಿಗಳಿಂದ ದೇವಾಲಯ ಅಭಿವೃದ್ಧಿಗೆ ಬಂದ ಬಳಿಕ ಅದರ ಮೇಲೆ ಹಿಡಿತ ಸಾಧಿಸಲು ಬರುವುದು ಅಧಿಕಾರಿಗಳ ಹಣದ ದಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಧಿಕಾರಿಗಳಿಂದ ಹಣ ದುರುಪಯೋಗ

ಹುಂಡಿಯಲ್ಲಿ ಸಂಗ್ರಹವಾಗುವ ಹಣ, ದಾನಿಗಳು ದೇವರಿಗೆ ನೀಡುವ ಕಾಣಿಕೆ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಇಲಾಖಾ ಅಧಿಕಾರಿಗಳಿಗೆ ವ್ಯವಸ್ಥಾಪನಾ ಸಮಿತಿಯವರು, ಟ್ರಸ್ಟ್‌ನವರು ಪ್ರಮುಖ ಅಡ್ಡಿಯಾಗಿದ್ದರು. ದೇವಸ್ಥಾನದ ಆಡಳಿತದ ಮೇಲೆ ಇವರ ನಿಯಂತ್ರಣ ತಪ್ಪಿಸುವ ಸಲುವಾಗಿ ಮುಜರಾಯಿ ಇಲಾಖೆ ಅಧಿಕಾರಿಗಳು ಷಡ್ಯಂತ್ರ ನಡೆಸಿ ಸಮಿತಿಗಳ ಪುನಾರಚನೆಯಾಗದಂತೆ ತಡೆಹಿಡಿದಿದ್ದಾರೆ. ಇದೂ ಸಹ ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಲು ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಜನವರಿಯಿಂದ ಸೆಪ್ಟೆಂಬರ್‌ 20ರವರೆಗೆ ಜಿಲ್ಲೆಯ ದೇಗುಲಗಳಲ್ಲಿ ನಡೆದ ಕಳವು ಪ್ರಕರಣಗಳು

ತಿಂಗಳು ಪ್ರಕರಣಗಳು ಕಳುವಾದ ಮೌಲ್ಯ

ಜನವರಿ 06 59,000

ಫೆಬ್ರವರಿ 02 30,000

ಮಾಚ್‌ರ್‍ 02 22,000

ಏಪ್ರಿಲ್‌ 01 2,15,000

ಮೇ 01 12,000

ಜೂನ್‌ 02 21,000

ಜುಲೈ 05 75,000

ಆಗಸ್ಟ್‌ 02 43,500

ಸೆಪ್ಟೆಂಬರ್‌ 02 4,43,000

ಒಟ್ಟು 23 9,20,500

ಹುಂಡಿಗಳಲ್ಲಿರುವ ಹಣವನ್ನೇ ಗುರಿಯಾಗಿಸಿಕೊಂಡು ಕಳ್ಳರು ಕಳ್ಳತನ ನಡೆಸುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಕಳ್ಳರನ್ನು ಹಿಡಿದು ಹಣ ವಶಪಡಿಸಿಕೊಂಡಿದ್ದೇವೆ. ಪ್ರಮುಖ ದೇಗುಲಗಳಿಗೆ ರಾತ್ರಿ ವೇಳೆಯೂ ಪೊಲೀಸರು ಗಸ್ತು ತಿರುಗಿ ಭದ್ರತೆಯ ಮೇಲೆ ನಿಗಾ ವಹಿಸಿದ್ದಾರೆ. ಎಷ್ಟುಕಳ್ಳರ ತಂಡ ಸಕ್ರಿಯವಾಗಿವೆ ಎನ್ನುವ ಸ್ಪಷ್ಟತೆ ಇಲ್ಲ.

-ಕೆ.ಪರಶುರಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

click me!