ತಬ್ಲೀಘಿ ಆಯ್ತು, ಈಗ ಅಜ್ಮೀರ್‌ ಕಂಟಕ: ಕೊರೋನಾ ಕಾಟಕ್ಕೆ ಬೆಳಗಾವಿ ಸುಸ್ತೋ ಸುಸ್ತು..!

By Kannadaprabha News  |  First Published May 11, 2020, 9:57 AM IST

ಒಂದೇ ದಿನ 22 ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆ| ಬಾಗಲಕೋಟೆಯ 8 ಜನರೂ ಬೆಳಗಾವಿ ಪಟ್ಟಿಗೆ ಸೇರ್ಪಡೆ| ಅಜ್ಮೀರ್‌ದಿಂದ ಬಂದು, ನಿಪ್ಪಾಣಿ ಬಳಿ ಕ್ವಾರಂಟೈನ್‌ನಲ್ಲಿದ್ದ ಸೋಂಕಿತರು| ಕಳ್ಳ ಮಾರ್ಗದಿಂದ ಜಿಲ್ಲೆ ಪ್ರವೇಶಿಸಲು ಯತ್ನಿಸಿದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದವರು|


ಬೆಳಗಾವಿ(ಮೇ.11): ಮಹಾಮಾರಿ ಕೊರೋನಾ ವೈರಸ್‌ ಸೋಂಕನ್ನು ಪಸರಿಸುವಲ್ಲಿ ದೊಡ್ಡ ಕೊಡುಗೆ ನೀಡಿದ ತಬ್ಲೀಘಿಗಳ ನಂತರ ಇದೀಗ ರಾಜಸ್ಥಾನದ ಅಜ್ಮೀರ್‌ ನಂಟು ಗಡಿ ಜಿಲ್ಲೆ ಬೆಳಗಾವಿಗೆ ದೊಡ್ಡ ಆಘಾತ ನೀಡಿದೆ.
ಭಾನುವಾರ ಮತ್ತೆ ಜಿಲ್ಲೆಯಲ್ಲಿ 22 ಹೊಸ ಕೊರೋನಾ ಪಾಸಿಟಿವ್‌ ಪ್ರಕರಣ ದೃಢವಾಗಿದ್ದು, ಎಲ್ಲರೂ ಅಜ್ಮೀರ್‌ಗೆ ಹೋಗಿ ಬಂದ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಈ ಮೂಲಕ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿದಾಟಿದ್ದು, 107ಕ್ಕೇರಿದೆ.

ರಾಜ್ಯದಲ್ಲಿ ಮೈಸೂರನ್ನು ಹಿಂದಕ್ಕಿ, ಬೆಳಗಾವಿ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಜ್ಮೀರ್‌ದಿಂದ ಜಿಲ್ಲೆಗೆ ಬಂದಿರುವ 38 ಜನರ ಪೈಕಿ 30 ಮಂದಿಗೆ ಕೊರೋನಾ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಇದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. 30 ಜನರ ಪೈಕಿ 22 ಸೋಂಕಿತರು ಬೆಳಗಾವಿ ಜಿಲ್ಲೆಗೆ ಸೇರಿದ್ದರೆ, 8 ಸೋಂಕಿತರು ಬಾಗಲಕೋಟೆ ಜಿಲ್ಲೆಗೆ ಸೇರಿದವರು. ಎಲ್ಲರನ್ನೂ ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ನಿಜಾಮುದ್ದೀನ ಮಸೀದಿಗೆ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಬಂದ ತಬ್ಲೀಘಿಗಳಿಂದ ಸೋಂಕು ಪಸರಿಸಿದೆ. ಇದರ ಬೆನ್ನಲ್ಲೇ ಈಗ ಅಜ್ಮೀರ್‌ದಿಂದ ಬಂದ ವ್ಯಕ್ತಿಗಳಿಗೂ ಸೋಂಕು ಇರುವುದು ದೃಢಪಟ್ಟಿರುವುದು ಆಘಾತಕರ ಸಂಗತಿ.

Tap to resize

Latest Videos

undefined

ಸಹಾಯ ಕೇಳಿಬಂದ ಬಡವರನ್ನು ಓಡಿಸಿದ ಕಾಂಗ್ರೆಸ್ ಶಾಸಕ!

ಬೆಳಗಾವಿ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿರುವ 22 ಜನರ ಪೈಕಿ 8 ಮಕ್ಕಳು, 9 ಮಹಿಳೆಯರು ಇದ್ದಾರೆ. ಇವರೆಲ್ಲರೂ ಬೆಳಗಾವಿ, ರಾಯಬಾಗ, ಅಥಣಿ, ಹುಕ್ಕೇರಿ ತಾಲೂಕಿಗೆ ಸೇರಿದವರು. ಒಂದೇ ದಿನ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ಜಿಲ್ಲೆಯ ಜನರಿಗೆ ತೀವ್ರ ಆಘಾತ ಉಂಟು ಮಾಡಿದೆ.

ಕಳ್ಳಮಾರ್ಗವಾಗಿ ಗಡಿ ಪ್ರವೇಶ :

ಒಂದೂವರೆ ತಿಂಗಳಿಂದ ಅಜ್ಮೀರದಲ್ಲೇ ವಾಸ್ಯವ್ಯಹೂಡಿದ್ದ 38 ಜನರು ಖಾಸಗಿ ಬಸ್‌ ಮೂಲಕ ಬೆಳಗಾವಿ ಜಿಲ್ಲೆ ಗಡಿ ಪ್ರವೇಶಿಸಲು ಮೇ 2 ರಂದು ಪ್ರಯತ್ನಿಸಿದ್ದಾರೆ. ಆದರೆ, ನಿಪ್ಪಾಣಿ ಬಳಿಯ ಕೊಗನೊಳಿ ಚೆಕ್‌ ಪೋಸ್ಟ್‌ನಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ಇವರಿಗೆ ಗಡಿ ಪ್ರವೇಶಕ್ಕೆ ಅವಕಾಶ ನೀಡದೇ ವಾಪಸ್‌ ಕಳುಹಿಸಿದ್ದರು. ಆದರೆ, ಇವರೆಲ್ಲರೂ ಕಳ್ಳದಾರಿ ಮೂಲಕ ಗಡಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ. ಆದರೆ, ಅಧಿಕಾರಿಗಳ ಸಮಯ ಪ್ರಜ್ಞೆಯಿಂದಾಗಿ ಗಡಿ ಪ್ರವೇಶಿಸಿದ ಇವರೆಲ್ಲರನ್ನೂ ನಿಪ್ಪಾಣಿ ಬಳಿಯ ವಸತಿ ನಿಲಯದಲ್ಲಿ ಕ್ವಾರೆಂಟೈನ್‌ ಮಾಡಲಾಗಿತ್ತು. ಮೇ 7 ರಂದು 38 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 30 ಜನರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಜಿಲ್ಲೆಯಲ್ಲಿ ಆಗಬಹುದಾದ ದೊಡ್ಡ ದುರಂತ ತಪ್ಪಿದಂತಾಗಿದೆ.

ಒಂದು ವೇಳೆ ಪೊಲೀಸರ ಕಣ್ಣು ತಪ್ಪಿಸಿ ಎಲ್ಲರೂ ತಮ್ಮ ಊರುಗಳಿಗೆ ತೆರಳಿದ್ದೇ ಆಗಿದ್ದರೆ ಕೊರೋನಾ ಸೋಂಕು ಎಲ್ಲೆಡೆ ಪಸರಿಸಿ,ದೊಡ್ಡ ಅನಾಹುತ ನಡೆಯುವ ಸಾಧ್ಯತೆ ಇತ್ತು. ಅದೃಷ್ಟವಶಾತ್‌ ಪೊಲೀಸರು ಹಾಗೂ ಅಧಿಕಾರಿಗಳ ಕ್ರಮದಿಂದಾಗಿ ದೊಡ್ಡ ಅನಾಹುತವಾಗುವುದು ತಪ್ಪಿದೆ. ಸೋಂಕಿತರೆಲ್ಲರೂ ಅಜ್ಮೀರ್‌ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಅಲ್ಲದೇ, ಬಾಗಲಕೋಟೆ ಜಿಲ್ಲೆಗೆ ಸೇರಿದ ಸೋಂಕಿತರು ಬಾಗಲಕೋಟೆ ಮತ್ತು ಬಾದಾಮಿ ತಾಲೂಕಿಗೆ ಸೇರಿದವರು.
ಕ್ವಾರಂಟೈನ್‌ಗೂ ಮುನ್ನ ಅವರನ್ನು ಬಿಡುಗಡೆ ಮಾಡಲು ರಾಜಕೀಯ ಯತ್ನಗಳು ನಡೆದಿದ್ದವು. 38 ಜನರನ್ನು ಕ್ವಾರಂಟೈನ್‌ ಮಾಡಲು ಅಧಿಕಾರಿಗಳು ಹಲವು ಒತ್ತಡಗಳನ್ನು ಎದುರಿಸಬೇಕಾಯಿತು. ಕ್ವಾರಂಟೈನ್‌ ಸ್ಥಳಕ್ಕೆ ಪತ್ರಕರ್ತರು, ಪೊಲೀಸರು ಸಹ ಹೋಗಿ ಬಂದಿದ್ದಾರೆ. ಜತೆಗೆ ಸ್ಥಳೀಯ ಜನಪ್ರತಿನಿಧಿಯೊಬ್ಬರು ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿರುವ ಬಗ್ಗೆ ಮಾಹಿತಿ ಇದ್ದು, ಸಂಪರ್ಕಕ್ಕೆ ಬಂದಿರುವ ಅವರೆಲ್ಲರನ್ನೂ ಜಿಲ್ಲಾಡಳಿತ ಪತ್ತೆ ಹಚ್ಚಲು ಕ್ರಮ ಕೈಗೊಂಡಿದೆ.

ಮೇ 2ರಂದು ಅಜ್ಮೀರದಿಂದ 38 ಜನರು ಬೆಳಗಾವಿ ಗಡಿ ಜಿಲ್ಲೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ, ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಗಡಿ ಪ್ರವೇಶಕ್ಕೆ ಅವಕಾಶ ನೀಡದಿರುವುದರಿಂದ ಕಳ್ಳ ಮಾರ್ಗವಾಗಿ ಜಿಲ್ಲೆಯ ಗಡಿ ಪ್ರವೇಶಿಸಿದ್ದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು, ನಿಪ್ಪಾಣಿ ಬಳಿಯ ವಸತಿ ನಿಲಯದಲ್ಲಿ ಕ್ವಾರೆಂಟೈನ್‌ ಮಾಡುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದೇವೆ. ಒಂದೂವರೆ ತಿಂಗಳಿಂದ ಇವರ್ಲೆರೂ ಅಜ್ಮೀರ್‌ನಲ್ಲೇ ಇದ್ದರು. ಇವರಾರ‍ಯರು ಜಿಲ್ಲೆಯಲ್ಲಿ ಎಲ್ಲಿಯೂ ಓಡಾಡಿಲ್ಲ. ಜಿಲ್ಲೆಯ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಅವರು ಹೇಳಿದ್ದಾರೆ. 
 

click me!