ಗ್ರಾಮಕ್ಕೆ ಬಂದು ಹೋದ ಕೊರೋನಾ ಸೋಂಕಿತ: ಶೇಂಗಾ ಖರೀದಿಗೆ ಹಿಂದೇಟು, ಸಂಕಷ್ಟದಲ್ಲಿ ಅನ್ನದಾತ..!

By Kannadaprabha News  |  First Published May 11, 2020, 9:00 AM IST

55ಕ್ಕೂ ಹೆಚ್ಚು ಶೇಂಗಾ ಚೀಲ ಮಾರಾಟಕ್ಕೆ ತಂದಿದ್ದ ರೈತರು| ವರ್ತಕರ ನಡೆಗೆ ವ್ಯಾಪಕ ಖಂಡನೆ| ನಿಮ್ಮ ಊರಿಗೆ ಕೊರೋನಾ ಸೋಂಕಿತರು ಬಂದು ಹೋಗಿದ್ದಾರೆ. ನಾವು ರಿಸ್ಕ್‌ ತೆಗೆದುಕೊಳ್ಳಲು ತಯಾರಿಲ್ಲ ನೀವು ವಾಪಸ್‌ ಹೋಗಿ ಎಂದು ದಬಾಯಿಸಿದ್ದಾರೆ| ಐವರು ವರ್ತಕರು ತಮ್ಮ ಶೇಂಗಾ ಚೀಲದೊಂದಿಗೆ ಗ್ರಾಮಕ್ಕೆ ವಾಪಸ್‌| 


ರೋಣ(ಮೇ.11): ಜಗತ್ತನ್ನೇ ಕಾಡುತ್ತಿರುವ ಕೊರೋನಾ ಮಹಾಮಾರಿ ರೈತರನ್ನು ನಾನಾ ರೀತಿ ಸಂಕಷ್ಟಕ್ಕೆ ಸಿಲುಕಿಸಿದ್ದು, ತಾಲೂಕಿನ ಮಾಡಲಗೇರಿ ಗ್ರಾಮದ ರೈತರನ್ನು ಗಜೇಂದ್ರಗಡ ಎಪಿಎಂಸಿಯ ವರ್ತಕರು ಅಮಾನವೀಯ, ಸಂಶಯವಾಗಿ ನಡೆಸಿಕೊಂಡ ಬಗ್ಗೆ ವರದಿಯಾಗಿದೆ.

ಬಾದಾಮಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ರೈತರು ತಾವು ಬೆಳೆದ 55 ಚೀಲ ಶೇಂಗಾವನ್ನು ಗಜೇಂದ್ರಗಡ ಎಪಿಎಂಸಿಗೆ ಮಾರಾಟಕ್ಕೆ ಶನಿವಾರ ತೆಗೆದುಕೊಂಡ ಹೋದ ಸಂದರ್ಭದಲ್ಲಿ ವರ್ತಕರು ಶೇಂಗಾ ಖರೀದಿಗೆ ಹಿಂದೇಟು ಹಾಕಿದ್ದಲ್ಲದೇ ನಿಮ್ಮ ಊರಿಗೆ ಕೊರೋನಾ ಸೋಂಕಿತರು ಬಂದು ಹೋಗಿದ್ದಾರೆ. ನಾವು ರಿಸ್ಕ್‌ ತೆಗೆದುಕೊಳ್ಳಲು ತಯಾರಿಲ್ಲ. ನೀವು ವಾಪಸ್‌ ಹೋಗಿ ಎಂದು ದಬಾಯಿಸಿದ್ದಾರೆ. ಇದರಿಂದ ಐವರು ವರ್ತಕರು ತಮ್ಮ ಶೇಂಗಾ ಚೀಲದೊಂದಿಗೆ ಗ್ರಾಮಕ್ಕೆ ವಾಪಸಾಗಿದ್ದಾರೆ. ವರ್ತಕರ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Latest Videos

undefined

ಲಾಕ್‌ಡೌನ್‌ ಪರಿಣಾಮ: ಗಗನಕ್ಕೇರಿದ ಸಿಮೆಂಟ್‌ ದರ, ಕಂಗಾಲಾದ ಕಟ್ಟಡ ಕಾರ್ಮಿಕರು

ನಡೆದಿದ್ದೇನು:

ತಾಲೂಕಿನ ಮಾಡಲಗೇರಿ ಗ್ರಾಮದಿಂದ ಶಂಕರಗೌಡ ಶಾಂತಗೇರಿ, ಭೀಮಪ್ಪ ಹಡಪದ, ತಿಪ್ಪನಗೌಡ ತಿಪ್ಪನಗೌಡ್ರ ಸೇರಿದಂತೆ 6 ರೈತರು ಟ್ರ್ಯಾಕ್ಟರ್‌ ಮೂಲಕ 55 ಕ್ಕೂ ಹೆಚ್ಚು ಶೇಂಗಾ ಚೀಲ ತೆಗೆದುಕೊಂಡು ಶನಿವಾರ ಗಜೇಂದ್ರಗಡ ಪಟ್ಟಣದಲ್ಲಿನ ಎಪಿಎಂಸಿ ಯಾರ್ಡ್‌ಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಐದಾರು ವರ್ತಕರ ಬಳಿ ಶೇಂಗಾ ಮಾರಾಟಕ್ಕೆ ಯತ್ನಿಸಿದರೂ ಮಾಡಲಗೇರಿ ಗ್ರಾಮದವರಿಂದ ನಾವು ಶೇಂಗಾ ಪಡೆಯುವುದಿಲ್ಲ. ನಿಮ್ಮೂರಲ್ಲಿ ಕೊರೋನಾ ಸೋಂಕಿತರು ಬಂದು ಹೋಗಿದ್ದಾರೆ. ನಾವು ರಿಸ್ಕ್‌ ತೆಗೆದುಕೊಳ್ಳುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಲ್ಲದೇ ಅವರನ್ನು ವಾಪಸ್‌ ಕಳುಹಿಸಿದ್ದಾರೆ.

ನಮ್ಮೂರಲ್ಲಿ ಕೊರೋನಾ ಯಾರಿಗೂ ಬಂದಿಲ್ಲ, ಶಂಕಿತರ ಆರೋಗ್ಯ ತಪಾಸಣೆ ಮಾಡಿದ್ದು, ಎಲ್ಲರ ವರದಿ ನೆಗಟಿವ್‌ ಬಂದಿದೆ. ಶೇಂಗಾದಲ್ಲಿ ಕೊರೋನಾ ಇರಲ್ಲ ಎಂದು ನಾನಾ ರೀತಿಯಾಗಿ ವಿನಂತಿಸಿದರೂ, ವರ್ತಕರು ಕೇಳಲಿಲ್ಲ. ಇದರಿಂದ ನಮಗೆ ತೀವ್ರ ನೋವಾಗಿದೆ. ಟ್ರ್ಯಾಕ್ಟರ್‌ ಡಿಸೇಲ್‌ ಖರ್ಚು, ಡ್ರೈವರ್‌ ಪಗಾರ, ಬಾಡಿಗೆ ಸೇರಿ 4000 ಖರ್ಚಾಗಿವೆ. ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿದ್ದ ರೈತರಿಗೆ, ಈ ರೀತಿ ಹಾನಿ ಮಾಡುವುದರ ಜತೆಗೆ, ಅವಮಾನ ಮಾಡುವುದು ತೀವ್ರ ಬೇಸರ ತಂದಿದೆ ಎಂದು ಮಾಲಗೇರಿ ರೈತರಾದ ಸಂಕನಗೌಡ ತಮ್ಮನಗೌಡ್ರ, ಶಂಕರಗೌಡ ತಮ್ಮನಗೌಡ್ರ ಅಳಲು ತೋಡಿಕೊಂಡರು.

ವರ್ತಕರ ನಡೆಗೆ ವ್ಯಾಪಕ ಖಂಡನೆ

ಕೊರೋನಾ ಶಂಕೆ ನೆಪ ಮುಂದಿಟ್ಟುಕೊಂಡು ಮಾಡಲಗೇರಿ ರೈತರ ಶೇಂಗಾ ಖರೀದಿಸದೇ ವಾಪಸ್‌ ಕಳಿಸಿದ ಗಜೇಂದ್ರಗಡ ಎಪಿಎಂಸಿ ವರ್ತಕರ ನಡೆಯನ್ನು ಹಿರೇಹಾಳ, ಕೊತಬಾಳ, ಮಾಡಲಗೇರಿ, ನೈನಾಪೂರ, ಹೊನ್ನಿಗನೂರ, ತಳ್ಳಿಹಾಳ ಸೇರಿದಂತೆ ಅನೇಕ ಗ್ರಾಮದ ರೈತರು ತೀವ್ರವಾಗಿ ಖಂಡಿಸಿದ್ದು, ರೈತರನ್ನು ಅವಮಾನಿಸಿದ ಎಪಿಎಂಸಿ ವರ್ತಕರ ಮೇಲೆ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಹೀಗೆ ನಾನಾ ರೀತಿ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಾ ಬಂದಿರುವ ರೈತರ ಬದುಕಿಗೆ, ಕೊರೋನಾ ತೀವ್ರ ಸಂಕಷ್ಟ ತಂದೊಡ್ಡಿದ್ದು, ಅದರಲ್ಲೂ ಗಜೇಂದ್ರಗಡ ವರ್ತಕರು ಈ ರೀತಿ ನಡೆದುಕೊಂಡಿದ್ದು ಖಂಡನೀಯವಾಗಿದೆ. ಇಂತಹ ಘಟನೆ ಮರಕಳಿಸದಂತೆ ನೋಡಿಕೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಮಾಡಲಗೇರಿ ಗ್ರಾಮದ ಜಗದೀಶ ಅಮಾತಿಗೌಡ್ರ ಒತ್ತಾಯಿಸಿದರು.
 

click me!