ಬ್ರ್ಯಾಂಡ್‌ ಬೆಂಗಳೂರಿಗೆ 20 ಸಾವಿರ ಸಲಹೆ..!

Published : Jul 01, 2023, 10:35 AM IST
ಬ್ರ್ಯಾಂಡ್‌ ಬೆಂಗಳೂರಿಗೆ 20 ಸಾವಿರ ಸಲಹೆ..!

ಸಾರಾಂಶ

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಅಭಿಯಾನ ನೇತೃತ್ವ ವಹಿಸಿದ್ದು, ಈಗಾಗಲೇ ಬೆಂಗಳೂರಿನ ನಗರದ ಎಲ್ಲಾ ಪಕ್ಷದ ಶಾಸಕರು, ಸಚಿವರು, ಗಣ್ಯರು ಹಾಗೂ ಉದ್ಯಮಿಗಳ ಸಭೆ ನಡೆಸಿ ಸಾಕಷ್ಟು ಸಲಹೆ ಸೂಚನೆ ಪಡೆದಿದ್ದಾರೆ. ಇದರೊಂದಿಗೆ ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆ ಪಡೆಯುವ ಉದ್ದೇಶದಿಂದ ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌ ಆರಂಭಿಸಿ ಜೂ.30ರವರೆಗೆ ಸಲಹೆ ಸಲ್ಲಿಸುವುದಕ್ಕೆ ಅವಕಾಶ ನೀಡಿದ್ದರು.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜು.01):  ನಗರದ ಸಮಗ್ರ ಅಭಿವೃದ್ಧಿಗೆ ಕುರಿತು ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್‌ ಬೆಂಗಳೂರು’ ಅಭಿಯಾನಕ್ಕೆ ಕಳೆದ ಹತ್ತು ದಿನಗಳಲ್ಲಿ ಸಾರ್ವಜನಿಕರಿಂದ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿವೆ.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಅಭಿಯಾನ ನೇತೃತ್ವ ವಹಿಸಿದ್ದು, ಈಗಾಗಲೇ ಬೆಂಗಳೂರಿನ ನಗರದ ಎಲ್ಲಾ ಪಕ್ಷದ ಶಾಸಕರು, ಸಚಿವರು, ಗಣ್ಯರು ಹಾಗೂ ಉದ್ಯಮಿಗಳ ಸಭೆ ನಡೆಸಿ ಸಾಕಷ್ಟು ಸಲಹೆ ಸೂಚನೆ ಪಡೆದಿದ್ದಾರೆ. ಇದರೊಂದಿಗೆ ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆ ಪಡೆಯುವ ಉದ್ದೇಶದಿಂದ ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌ ಆರಂಭಿಸಿ ಜೂ.30ರವರೆಗೆ ಸಲಹೆ ಸಲ್ಲಿಸುವುದಕ್ಕೆ ಅವಕಾಶ ನೀಡಿದ್ದರು.

ಬ್ರ್ಯಾಂಡ್‌ ಬೆಂಗಳೂರು ಸಲಹೆಗೆ ವೆಬ್‌ಸೈಟ್‌ ಶುರು: ಡಿ.ಕೆ.ಶಿವಕುಮಾರ್‌

10 ಸಾವಿರಕ್ಕೂ ಅಧಿಕ ಸಲಹೆ:

ಸಂಚಾರಯುಕ್ತ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್‌ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಹೀಗೆ ಒಟ್ಟು ಏಳು ವಿಭಾಗದಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ನಿರ್ಧರಿಸಿದೆ. ಈ ಪ್ರಕಾರ ಜೂ.21ರಿಂದ 30ರ ವರೆಗೆ ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌ಗೆ ಬರೋಬ್ಬರಿ 10,527 ಸಲಹೆಗಳು ಬಂದಿವೆ. ಸಲ್ಲಿಕೆಯಾದ ಸಲಹೆಗಳ ವಿಭಾಗವಾರು ಪ್ರತ್ಯೇಕ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಟ್ವಿಟರ್‌, ವಾಟ್ಸ್‌ಆಪ್‌ಗೆ 9 ಸಾವಿರ ಸಲಹೆ:

ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌ ಮಾತ್ರವಲ್ಲದೇ ಟೋಲ್‌ ಫ್ರೀ ಸಂಖ್ಯೆ 1533, ವಾಟ್ಸ್‌ಆ್ಯಪ್‌ ಸಂಖ್ಯೆ: 94806 85700 ಹಾಗೂ ‘ಬ್ರ್ಯಾಂಡ್‌ ಬೆಂಗಳೂರು’ ಮತ್ತು ‘ಬೆಟರ್‌ ಬೆಂಗಳೂರು’ ಟ್ವಿಟರ್‌ನಲ್ಲಿಯೂ ಸಲಹೆಗಳನ್ನು ನೀಡುವುದಕ್ಕೆ ಅವಕಾಶ ನೀಡಲಾಗಿತ್ತು. ಇವುಗಳ ಮೂಲಕ ಜೂ.21ರಿಂದ 30ರ ವರೆಗೆ ಒಟ್ಟು 8,652 ಸಲಹೆಗಳು ಬಂದಿವೆ.

ರಸ್ತೆ, ಟ್ರಾಫಿಕ್‌ ಸಮಸ್ಯೆ ಕುರಿತು ಹೆಚ್ಚಿನ ಸಲಹೆ

ಸದ್ಯ ಸಲ್ಲಿಕೆಯಾಗಿರುವ ಸಲಹೆಗಳ ಪೈಕಿ ಹೆಚ್ಚಿನ ಸಂಖ್ಯೆಯ ಸಲಹೆಗಳು ಬೆಂಗಳೂರು ನಗರದ ರಸ್ತೆ, ಪಾದಚಾರಿ ಮಾರ್ಗ, ಟ್ರಾಫಿಕ್‌ ಸಮಸ್ಯೆ, ರಸ್ತೆ ದುರಸ್ತಿ ಕಾಮಗಾರಿಗಳಿಗೆ ಸಂಬಂಧಿಸಿದವುಗಳಾಗಿವೆ. ಉಳಿದಂತೆ ಮೆಟ್ರೋ ಹಾಗೂ ಬೆಂಗಳೂರಿನ ಅಕ್ಕ-ಪಕ್ಕದ ನಗರಗಳಿಗೆ ರೈಲ್ವೆ ಮಾರ್ಗ ವಿಸ್ತರಣೆ, ಪಾದಚಾರಿಗಳಿಗೆ ಸಂಚಾರಕ್ಕೆ ಅವಕಾಶ ನೀಡುವುದು. ಕಸದ ಸಮಸ್ಯೆ ನಿವಾರಣೆ, ಹೀಗೆ ವಿವಿಧ ಸಲಹೆಗಳನ್ನು ಸಾರ್ವಜನಿಕರು ನೀಡಿದ್ದಾರೆ ಎಂಬುದು ತಿಳಿದು ಬಂದಿದೆ.

ಜು.15ರವರೆಗೆ ಅವಕಾಶ

ಬ್ರ್ಯಾಂಡ್‌ ಬೆಂಗಳೂರಿಗೆ ಸಲಹೆ ನೀಡುವುದಕ್ಕೆ ಜೂನ್‌ 21ರಿಂದ 30ರವರೆಗೆ ಅವಕಾಶ ನೀಡಲಾಗಿತ್ತು. ಸಲಹೆ ಸಲ್ಲಿಸುವುದಕ್ಕೆ ಇನ್ನಷ್ಟುಅವಕಾಶ ನೀಡುವ ಉದ್ದೇಶದಿಂದ ಮತ್ತೆ 15 ದಿನ ಅವಕಾಶ ನೀಡಲಾಗಿದೆ. ಹೀಗಾಗಿ, ಜುಲೈ 15 ರವರೆಗೆ ಸಾರ್ವಜನಿಕರು ಸಲಹೆ ನೀಡಬಹುದಾಗಿದೆ.

ಬ್ರ್ಯಾಂಡ್‌ ಬೆಂಗಳೂರನ್ನು ಬಿಜೆಪಿ ಹಾಳು ಮಾಡಿದೆ: ಡಿ.ಕೆ. ಶಿವಕುಮಾರ್‌

ಸಲ್ಲಿಕೆಯಾದ ಪ್ರಮುಖ ಸಲಹೆಗಳು

*ಐದಾರು ಶಾಲೆಗಳು ಒಂದೇ ಸ್ಥಳದಲ್ಲಿ ಇರುವ ಕಡೆ ಏಕಕಾಲಕ್ಕೆ ಎಲ್ಲಾ ಶಾಲೆಗಳನ್ನು ಆರಂಭಿಸುವುದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗಲಿದೆ. ಹೀಗಾಗಿ, 30 ನಿಮಿಷ ಅಂತರದಲ್ಲಿ ಶಾಲೆಗಳನ್ನು ಬೆಳಗ್ಗೆ ಆರಂಭಿಸುವ ನಿಟ್ಟಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು.
*ಬೆಂಗಳೂರಿನಲ್ಲಿರುವ ರಾಜ್ಯ ಮತ್ತು ಸರ್ಕಾರಿ ಕಚೇರಿಗಳನ್ನು ಇತರೆ ನಗರಗಳಿಗೆ ಸ್ಥಳಾಂತರ ಮಾಡುವುದು ಮತ್ತು ಇತರೆ ಜಿಲ್ಲೆಗಳಲ್ಲಿ ಕೈಗಾರಿಕೆ ಮತ್ತು ಉದ್ಯಮ ಆರಂಭಿಸುವುದರಿಂದ ಬೆಂಗಳೂರಿನ ಒತ್ತಡ ಕಡಿಮೆ ಮಾಡಬಹುದು.
*ದೂರ ದೃಷ್ಟಿಯೋಜನೆ ರೂಪಿಸಬೇಕು. ನಗರದ ರಸ್ತೆಗಳು ಕನಿಷ್ಠ 80 ಅಡಿ ಇರಬೇಕು. ಮರ- ಗಿಡ ಬೆಳೆಸುವುದಕ್ಕೆ ರಸ್ತೆಯ ಅಕ್ಕ-ಪಕ್ಕದಲ್ಲಿ 10 ಅಡಿ ಜಾಗ ಮೀಸಲಿಡಬೇಕು.
*ಮಳೆಗಾಲಕ್ಕೂ ಮುನ್ನ ಚರಂಡಿ ಸ್ವಚ್ಛಗೊಳಿಸುವುದರಿಂದ ಪ್ರವಾಹ ತಪ್ಪಿಸಬಹುದು.
*ಬೆಂಗಳೂರಿನಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದ್ದು, ಕನ್ನಡಿಗರ ಬೆಂಗಳೂರು ಮಾಡುವ ನಿಟ್ಟಿನಲ್ಲಿ ಯೋಜನೆಗಳು ಇರಲಿ.

PREV
Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ