ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮತ್ತು ಬಿಸಿಲ ವಾತಾವರಣ ಇರುವ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ಒಂದೇ ತಿಂಗಳಿನಲ್ಲಿಯೇ ಬರೋಬ್ಬರಿ 2 ಸಾವಿರಕ್ಕೂ ಅಧಿಕ ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ.
ಬೆಂಗಳೂರು (ಸೆ.06): ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮತ್ತು ಬಿಸಿಲ ವಾತಾವರಣ ಇರುವ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ಒಂದೇ ತಿಂಗಳಿನಲ್ಲಿಯೇ ಬರೋಬ್ಬರಿ 2 ಸಾವಿರಕ್ಕೂ ಅಧಿಕ ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ. ನಗರದಲ್ಲಿ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅತ್ಯಂತ ಅನುಕೂಲವಾಗಿ ಪರಿಸರ ಸೃಷ್ಟಿಯಾಗಿದೆ. ಹೀಗಾಗಿ, ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಜನವರಿಯಿಂದ ಸೆಪ್ಟಂಬರ್ 3ರ ವರೆಗೆ ಒಟ್ಟು 5,478 ಡೆಂಘೀ ಪ್ರಕರಣ ಕಾಣಿಸಿಕೊಂಡಿದೆ. ಈ ಪೈಕಿ 2374 ಪ್ರಕರಣಗಳು ಕಳೆದ ಆಗಸ್ಟ್‌ನಲ್ಲಿ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಇನ್ನು ಸೆ.1ರಿಂದ 3ರವರೆಗೆ ಒಟ್ಟು 181 ಪ್ರಕರಣ ದೃಢಪಟ್ಟಿವೆ.
ದಕ್ಷಿಣ ವಲಯದಲ್ಲಿ ಡೆಂಘೀ ಹೆಚ್ಚು: ಬಿಬಿಎಂಪಿಯ ದಕ್ಷಿಣ ವಲಯದಲ್ಲಿ ಪ್ರದೇಶದಲ್ಲಿ ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ 438 ಪ್ರಕರಣ ಕಾಣಿಸಿಕೊಂಡಿವೆ. ಪಶ್ಚಿಮ ವಲಯದಲ್ಲಿ 292 ಪ್ರಕರಣ, ಪೂರ್ವದಲ್ಲಿ 316, ಬೊಮ್ಮನಹಳ್ಳಿ 64, ದಾಸರಹಳ್ಳಿ 14, ಮಹದೇವಪುರ 214, ಆರ್‌ಆರ್ ನಗರ 259, ಯಲಹಂಕ 171 ಪ್ರಕರಣ ಕಾಣಿಸಿಕೊಂಡಿವೆ.
ಪ್ರಾಣಿ ದಾಳಿ ತಡೆಯಲು ಅರಣ್ಯ ಒತ್ತುವರಿ ತೆರವು: ಸಿಎಂ ಸಿದ್ದು ಸೂಚನೆ
ಜಾಗೃತಿ, ತಪಾಸಣೆ: ಡೆಂಘೀ ಪ್ರರಕಣ ಕಾಣಿಸಿಕೊಂಡ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ಡೆಂಘೀ ರೋಗಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಜತೆಗೆ, ಸೊಳ್ಳೆ ನಾಶಕ್ಕೆ ನಿಯಮಿತವಾಗಿ ನಗರದಲ್ಲಿ ಫಾಗಿಂಗ್ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯ ಅಕ್ಕ-ಪಕ್ಕದಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು, ತೆಂಗಿನ ಚಿಪ್ಪು, ಟೈಯರ್, ಹೂವಿನ ಕುಂಡ ಸೇರಿದಂತೆ ಇನ್ನಿತರೆ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕು, ಸೊಳ್ಳೆ ಪರದೆ ಬಳಕೆ, ನೀರು ಶೇಖರಣೆ ಮಾಡುವ ತೊಟ್ಟಿ, ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಡೆಂಘೀ ಪ್ರಕರಣ ವಿವರ
ವಲಯ ಜೂನ್ ಜುಲೈ ಆಗಸ್ಟ್
ಪೂರ್ವ 217 442 272
ಮಹದೇವಪುರ 160 320 167
ಪಶ್ಚಿಮ 76 176 274
ದಕ್ಷಿಣ 97 348 416
ಆರ್‌ಆರ್‌ನಗರ 33 101 236
ಯಲಹಂಕ 56 116 162
ಬೊಮ್ಮನಹಳ್ಳಿ 44 111 54
ದಾಸರಹಳ್ಳಿ 4 36 8
ಒಟ್ಟು 689 1,649 2,374
ಹಿಂದಿನ ವರ್ಷಗಳಲ್ಲಿ ಪತ್ತೆಯಾದ ಡೆಂಘೀ ವಿವರ
ವರ್ಷ ಡೆಂಘೀ ಪ್ರಕರಣ
2020 6,679
2021 6,166
2022 5,589
2023 5,478 (ಸೆ.3)
ಎಸ್ಸೆಸ್ಸೆಲ್ಸಿ, ಪಿಯುಗೆ ಇನ್ಮುಂದೆ 3 ಪರೀಕ್ಷೆ: ಪರೀಕ್ಷಾ ವ್ಯವಸ್ಥೆ ಭಾರೀ ಬದಲಾವಣೆ
ಮಳೆ ಹಾಗೂ ಬಿಸಿಲು ವಾತಾವರಣ ಇರುವುದರಿಂದ ನಗರದಲ್ಲಿ ಡೆಂಘಿ ಪ್ರಕರಣ ಹೆಚ್ಚಾಗಿವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಡೆಂಘಿ ಪ್ರಕರಣ ಹೆಚ್ಚಾಗಿರಲಿವೆ. ಜಾಗೃತಿ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ