ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ಫೆ. 11 ಮತ್ತು 12 ರಂದು ಶನಿವಾರ ಮತ್ತು ಭಾನುವಾರ ನಂಜರಾಜ ಬಹದ್ದೂರ್ ಛತ್ರದಲ್ಲಿ ಗೆಡ್ಡಗೆಣಸು ಮೇಳ ಆಯೋಜಿಸಿದೆ ಎಂದು ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ಮೈಸೂರು : ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ಫೆ. 11 ಮತ್ತು 12 ರಂದು ಶನಿವಾರ ಮತ್ತು ಭಾನುವಾರ ನಂಜರಾಜ ಬಹದ್ದೂರ್ ಛತ್ರದಲ್ಲಿ ಗೆಡ್ಡಗೆಣಸು ಮೇಳ ಆಯೋಜಿಸಿದೆ ಎಂದು ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ಬೆಳಿಗ್ಗೆ 10.30 ರಿಂದ ಸಂಜೆ 8 ರವರೆಗೆ ಮೇಳ ನಡೆಯಲಿದೆ. ಗೆಡ್ಡೆ ವೈವಿಧ್ಯಕ್ಕೆ ಹೆಸರುವಾಸಿ. ಕುಣಬಿ, ಸಿದಿ, ಜೇನು ಕುರುಬ, ಬೆಟ್ಟಕುರುಬ, ಸೋಲಿಗ ಮತ್ತು ಇರುಳಿಗ ಸಮುದಾಯಗಳು ಗೆಡ್ಡೆ ಗೆಣಸನ್ನು ಇವತ್ತಿಗೂ ಆಹಾರವಾಗಿ ಬಳಸುತ್ತಿದ್ದಾರೆ.
ನೈಸರ್ಗಿಕ ವಿಕೋಪ ಮತ್ತು ಬರಗಾಲದಲ್ಲಿ ಗೆಡ್ಡೆ ಗೆಣಸು ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ವಾತಾವರಣದ ವೈಪರೀತ್ಯವಿದ್ದಾಗ ಎಲ್ಲ ಬೆಳೆಗಳು ವಿಫಲವಾದಾಗ ಗೆಡ್ಡೆ ಗೆಣಸುಗಳು ರೈತನ ಕೈಹಿಡಿಯುತ್ತವೆ; ಆದಾಯ ತರುತ್ತವೆ.
ಆಯುರ್ವೇದ ಮತ್ತು ಜನಪದ ವೈದ್ಯದಲ್ಲಿ ಮೂಲಿಕೆಯ ಬಳಕೆ ವ್ಯಾಪಕವಾಗಿದೆ. ಪಿಷ್ಟ, ನಾರು ಮತ್ತು ಪೋಚಕಾಂಶಗಳಿಂದ ಸಮೃದ್ಧವಾದ ಗೆಡ್ಡೆ ಗೆಣಸು ನಮ್ಮ ಅನ್ನದ ಬಟ್ಟಲು ತುಂಬುವುದರ ಜೊತೆಗೆ, ಆರೋಗ್ಯವನ್ನೂ ವೃದ್ಧಿಸುತ್ತದೆ. ಕೋವಿಡ್ ನಂಥ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡಲು, ದೇಹಕ್ಕೆ ರೋಗ ನಿರೋಧಕ ಶಕ್ತಿ ತುಂಬಲು ನಿಸರ್ಗದ ಕೊಡುಗೆಯಾದ ಗೆಡ್ಡೆ ಗೆಣಸುಗಳು ಮಹತ್ವದ ಪಾತ್ರ ವಹಿಸುತ್ತವೆ.
ನಿಸರ್ಗದ ಕೊಡುಗೆಯಾದ ಗೆಡ್ಡೆ ಗೆಣಸುಗಳ ಅದ್ಭುತ ಲೋಕವನ್ನು ಮೈಸೂರಿನ ಗ್ರಾಹಕರಿಗೆ ಪರಿಚಯಿಸಲು ಸಹಜ ಸಮೃದ್ದ ಮತ್ತು ಯೂಸಿಂಗ್ ಡೈವರ್ಸಿಟಿ ಆಶ್ರಯದಲ್ಲಿ ಗೆಡ್ಡೆ ಗೆಣಸು ಮೇಳವನ್ನು ಆಯೋಜಿಸಲಾಗಿದೆ. ಫೆ. 11 ಮತ್ತು 12ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ನಡೆಯಲಿರುವ ಈ ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ ಗೆಣಸು, ಮೌಲ್ಯವರ್ಧಿತ ಪಧಾರ್ಥಗಳು, ಗೆಣಸಿನ ಅಡುಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮೇಳ ಉದ್ಘಾಟಿಸುವರು. ಮುಕ್ತ ವಿವಿ ಕುಲಪತಿ ಪೊ›. ಶರಣಪ್ಪ ವೈ. ಹಲಸೆ ಅವರು ಮರೆತು ಹೋದ ಆಹಾರಗಳು ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಬರಹಗಾರ್ತಿ ರತ್ನಾ ರಾಜಯ್ಯ ಅಧ್ಯಕ್ಷತೆವಹಿಸುವರು.
ಕರ್ನಾಟಕದ ವಿವಿಧ ಭಾಗಗಳಿಂದ ಬರುವ 25ಕ್ಕೂ ಹೆಚ್ಚಿನ ಮಳಿಗೆಗಳು ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥ ಮತ್ತು ಬಗೆ ಬಗೆಯ ಅಡುಗೆಗಳನ್ನು ಉಣಬಡಿಸುರವು. ಪರ್ಪಲ್ ಯಾಮ್, ಮಾವಿನ ಶುಂಠಿ, ಕೂವೆ ಗೆಡ್ಡೆ, ಉತ್ತರಿ ಗೆಡ್ಡೆ, ಪರ್ಪಲ್ ಯಾಮ್, ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಷಿಣ, ಕಪ್ಪು ಶುಂಟಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಬಗೆ ಬಗೆಯ ಕೆಸುವಿನ ಬೀಜದ ಗೆಡ್ಡೆಗಳು ಬಿತ್ತನೆಗೆ ಸಿಗುತ್ತವೆ.
ಕಪ್ಪು ಕ್ಯಾರೆಟ್ ಮತ್ತು ದೇಸಿ ತರಕಾರಿ ಬೀಜಗಳು, ಗೆಡ್ಡೆ ಗೆಣಸುಗಳ ಕ್ಯಾಲೆಂಡರ್, ಸೋರೆ ಕಲಾಕೃತಿ ಮಾರಾಟಕ್ಕೆ ಬರಲಿವೆ. ಜೇನು ಕುರುಬ ಯುವಕರು ಕಾಡು ಗೆಣಸಿನ ಜೊತೆ ಸವಿಯಲು ಜೇನು ತರಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 98809 08608, 99720 77998 ಸಂಪರ್ಕಿಸಬಹುದು.